ಸಾಮಾನ್ಯವಾಗಿ ಸಿನಿಮಾಗಳ ಟೈಟಲ್ ಪೋಸ್ಟರ್, ಟೀಸರ್, ಟ್ರೇಲರ್, ಆಡಿಯೋಗಳನ್ನು ಜನಪ್ರಿಯ ವ್ಯಕ್ತಿಗಳ ಕೈಯಲ್ಲಿ ಬಿಡುಗಡೆ ಮಾಡಿಸಿ ಆ ಮೂಲಕ ಒಂದಷ್ಟು ಪ್ರಚಾರ ಪಡೆದುಕೊಳ್ಳುವುದು ಚಿತ್ರರಂಗದಲ್ಲಿ ನಡೆದುಕೊಂಡು ಬಂದಿರುವ ಪದ್ದತಿ. ಅದರಲ್ಲೂ ಹೊಸಬರು ತಮ್ಮ ಚಿತ್ರಗಳಿಗೆ ಜನಪ್ರಿಯ ಸ್ಟಾರ್‌ಗಳ ಹಾರೈಕೆ ಇದ್ದರೆ, ಚಿತ್ರದ ಪ್ರಚಾರಕ್ಕೆ ಇನ್ನಷ್ಟು ವೇಗ ಸಿಗುತ್ತದೆ ಎಂಬ ಕಾರಣಕ್ಕೆ, ತಮ್ಮ ಚಿತ್ರಕ್ಕೆ ಸಂಬಂಧಿಸಿದ ಸಮಾರಂಭಗಳಿಗೆ ತಾರೆಯರನ್ನು ಕರೆತರಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುತ್ತಾರೆ. ಆದರೆ “ಮೇಲೊಬ್ಬ ಮಾಯಾವಿ’ ಚಿತ್ರತಂಡ ಮಾತ್ರ, ತನ್ನ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಚಿತ್ರರಂಗದ ಗಣ್ಯರನ್ನು ಆಹ್ವಾನಿಸಿದ್ದರೂ, ಕನ್ನಡ ಚಿತ್ರಗಳನ್ನು ಕ್ಯೂನಿಂತು ಟಿಕೆಟ್ ಪಡೆದು ಫಸ್ಟ್ ಡೇ ಫಸ್ಟ್ ಶೋ ನೋಡುವ ಸಾಮಾನ್ಯ ಪ್ರೇಕ್ಷಕರಿಂದ ಬಿಡುಗಡೆ ಮಾಡಿಸಿದೆ.
ಹೌದು, ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆದ ಸಮಾರಂಭದಲ್ಲಿ, ಸಲೂನ್‌ನಲ್ಲಿ ಕೆಲಸ ಮಾಡುವ ಪ್ರದೀಪ್, ಹೋಟೆಲ… ಸಪ್ಲೆ„ಯರ್ ಸಂತು ಮತ್ತು ಆಟೋರಿಕ್ಷಾ ಚಾಲಕ ಮನು ಎಂಬ ಮೂವರು ಕನ್ನಡ ಚಿತ್ರಗಳ ಸಾಮಾನ್ಯ ಪ್ರೇಕ್ಷಕರು “ಮೇಲೊಬ್ಬ ಮಾಯಾವಿ’ ಚಿತ್ರದ ಆಡಿಯೋ ಮತ್ತು ಲಿರಿಕಲ್ ವಿಡಿಯೋ ಬಿಡುಗಡೆ ಮಾಡಿದರು.
ಇನ್ನು ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಹಾಜರಿದ್ದ ನಿರ್ದೇಶಕ ರಿಷಭ್ ಶೆಟ್ಟಿ, ನಿರ್ಮಾಪಕ ಅಶ್ವಿನಿ ರಾಮಪ್ರಸಾದ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಚಿತ್ರತಂಡಕ್ಕೆ ಶುಭ ಕೋರಿದರು. ಸಮಾರಂಭದಲ್ಲಿ ಚಿತ್ರದ ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ತಂತ್ರಜ್ಞರು ಹಾಜರಿದ್ದರು. “ಮೇಲೊಬ್ಬ ಮಾಯಾವಿ’ ಚಿತ್ರದಲ್ಲಿ ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿದ್ದು, ಕಳೆದ ವರ್ಷ ನಿಧನರಾದ ಗಾಯಕ, ಸಂಗೀತ ನಿರ್ದೇಶಕ ಎಲ್.ಎನ್ ಶಾಸ್ತ್ರಿ ಈ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ರಾಜೇಶ್ ಕೃಷ್ಣ, ಅನುರಾಧ ಭಟ್, ಎಲ್.ಎನ್ ಶಾಸ್ತ್ರಿ, ಹೇಮಂತ್, ಶಮಿತಾ ಮಲಾ°ಡ್ ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದು, ಚಕ್ರವರ್ತಿ ಚಂದ್ರಚೂಡ್ ಸಾಹಿತ್ಯ ಒದಗಿಸಿದ್ದಾರೆ.
ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್, ಅನುಷಾ ಶೆಟ್ಟಿ, ಚಕ್ರವರ್ತಿ ಚಂದ್ರಚೂಡ್, ಕೃಷ್ಣಮೂರ್ತಿ ಕವತ್ತಾರ್, ಎಂ.ಕೆ ಮಠ, ಬೆನಕ ನಂಜಪ್ಪ, ಲಕ್ಷ್ಮೀ ಅರ್ಪಣ್ ಮೊದಲಾದವರು “ಮೇಲೊಬ್ಬ ಮಾಯಾವಿ’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ಕಟೀಲ್ ಸಿನಿಮಾಸ್’ ಬ್ಯಾನರ್‌ನಲ್ಲಿ ಪುತ್ತೂರು ಭರತ್, ತನ್ವಿ ಅಮಿನ್ ಕೊಲ್ಯ ನಿರ್ಮಿಸಿರುವ ಈ ಚಿತ್ರಕ್ಕೆ ಬಿ. ನವೀನ್ ಕೃಷ್ಣ ಕಥೆ ಬರೆದು ನಿರ್ದೇಶಿಸಿದ್ದಾರೆ. ಕರಾವಳಿ ಭಾಗದಲ್ಲಿ ಕೆಲ ವರ್ಷಗಳ ಹಿಂದೆ ನಡೆದ ನೈಜ ಘಟನೆಯಿಂದ ಪ್ರೇರಿತವಾಗಿ ಈ ಚಿತ್ರ ಮಾಡಲಾಗಿದೆ ಎಂದಿದೆ ಚಿತ್ರತಂಡ. ಸದ್ಯ ಚಿತ್ರದ ಆಡಿಯೋ ಮತ್ತು ಲಿರಿಕಲ್ ವಿಡಿಯೋ ಬಿಡುಗಡೆ ಮಾಡಿರುವ ಚಿತ್ರತಂಡ, ಮುಂದಿನ ಏಪ್ರಿಲ್ ವೇಳೆಗೆ ಚಿತ್ರವನ್ನು ತೆರೆಗೆ ತರುವ ಯೋಜನೆಯಲ್ಲಿದೆ.