ಕಿಂಗ್ ಸ್ಟನ್: ಭಾರತ ಮತ್ತು ವೆಸ್ಟ್ ಇಂಡೀಸ್ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಭಾರತ ಐದು ವಿಕೆಟ್ ನಷ್ಟಕ್ಕೆ 264 ರನ್ ಗಳಿಸಿದ್ದು ಹಿಡಿತ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತಕ್ಕೆ ಮತ್ತೆ ಉತ್ತಮ ಆರಂಭ ಸಿಗಲಿಲ್ಲ. ಈ ಬಾರಿ ಕೆ.ಎಲ್ ರಾಹುಲ್ ಮೊದಲಿಗರಾಗಿ ಪೆವಿಲಿಯನ್ ಸೇರಿದರು. ರಾಹುಲ್ ಗಳಿಸಿದ್ದು ಕೇವಲ 13 ರನ್. ಮೊದಲ ಪಂದ್ಯದಲ್ಲಿ ಫೇಲ್ ಆಗಿದ್ದ ಪೂಜಾರ ದ್ವಿತೀಯ ಪಂದ್ಯದಲ್ಲೂ ಆರು ರನ್ ಮಾತ್ರ ಗಳಿಸಿದರು.
ಕನ್ನಡಿಗ ಮಯಾಂಕ್ ಅಗರ್ವಾಲ್ ಜೊತೆಗೂಡಿದ ನಾಯಕ ಕೊಹ್ಲಿ ಮತ್ತೆ ತಂಡವನ್ನು ಆಧರಿಸಿದರು. ಇಬ್ಬರೂ ತಲಾ ಅರ್ಧಶತಕ ಬಾರಿಸಿ ಮಿಂಚಿದರು. ಮಯಾಂಕ್ 55 ಗಳಿಸಿದರೆ, ವಿರಾಟ್ 76 ರನ್ ಗಳಿಸಿದರು.
ಮೊದಲ ಪಂದ್ಯದ ಶತಕವೀರ ಅಜಿಂಕ್ಯ ರಹಾನೆ ಇಲ್ಲಿ 24 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಉತ್ತಮ ಬ್ಯಾಟಿಂಗ್ ಮಾಡುತ್ತಿರುವ ಹನುಮ ವಿಹಾರಿ 42 ಮತ್ತು ರಿಷಭ್ ಪಂತ್ 27 ರನ್ ಗಳಿಸಿ ಎರಡನೇ ದಿನಕ್ಕೆ ಆಟ ಕಾಯ್ದುಕೊಂಡಿದ್ದಾರೆ.
ವಿಂಡೀಸ್ ಪರ ನಾಯಕ ಜೇಸನ್ ಹೋಲ್ಡರ್ ಮೂರು ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರೆ, ಮೊದಲ ಪಂದ್ಯ ಆಡುತ್ತಿರುವ ರಕೀಮ್ ಕಾರ್ನವಾಲ್ ಮತ್ತು ಕೇಮರ್ ರೋಚ್ ತಲಾ ಒಂದು ವಿಕೆಟ್ ಪಡೆದರು.