Advertisement

ಮತ್ತೆ ಬರುತ್ತಿದೆ ದಶಕಗಳ ಹಿಂದಿನ ಅಪೂರ್ವ ನೆನಪು ‘ಮಾಯಾಮೃಗ’

03:59 PM Jun 04, 2021 | ಶ್ರೀರಾಜ್ ವಕ್ವಾಡಿ |

ಎರಡು ದಶಕಗಳ ಹಿಂದೆ ಕನ್ನಡಿಗರ ಮನೆ ಮನೆಗಳಲ್ಲಿ ಮನ ಮನಗಳನ್ನು ಗೆದ್ದಿದ್ದ ಕನ್ನಡದ ಮೊಟ್ಟ ಮೊದಲ ಮೆಗಾ ಧಾರಾವಾಹಿ ‘ಮಾಯಮೃಗ’ದ ನೆನಪು ಯಾರಿಗಿಲ್ಲ ಹೇಳಿ..?

Advertisement

ಎಲ್ಲರ ಮನಸ್ಸನ್ನು ಗೆದ್ದ ಅದೊಂದು ಸುಂದರ ಕಾವ್ಯ. ಅದೊಂದು ದಂತ ಕಥೆ. ಮಾಯಾಮೃಗ…ಮಾಯಮೃಗ..ಮಾಯಾಮೃಗವೆಲ್ಲಿ..? ಎಂಬ ಶೀರ್ಷಿಕೆ ಗೀತೆಯೊಂದಿಗೆ ನೋಡುಗರ ಮನಸ್ಸನ್ನು ಕಳವು ಗೈದು ಒಯ್ಯುತ್ತಿದ್ದ ಗಟ್ಟಿತನದ ಧಾರಾವಾಹಿ ಇಂದಿಗೂ ಪ್ರಸ್ತುತ ಎನ್ನುವುದರಲ್ಲಿ ಯಾವ ಅನುಮಾನವೂ ಬೇಕಾಗಿಲ್ಲ.

ಟಿ ಎನ್ ಸೀತಾರಾಮ್ ಅವರ ಕಥೆ, ನಿರ್ದೇಶನ, ಪಿ. ಶೇಷಾದ್ರಿ, ನಾಗೇಂದ್ರ ಶಾ ಅವರ ಸಹ ನಿರ್ದೇಶನದಲ್ಲಿ ಮೂಡಿ ಬಂದ ಯಾವ ಗ್ಲ್ಯಾಮರ್ ಧೋರಣೆ ಇಲ್ಲದೇ, ತೀರಾ ಮನೆ ಮನೆಗಳಲ್ಲಿ ಆಗುತ್ತಿರುವ ಸನ್ನಿವೇಶವೇ ಎಂಬಂತೆ ಆಪ್ತತೆಯನ್ನು ನೀಡಿದ್ದ ಧಾರಾವಾಹಿ ಎರಡು ದಶಕಗಳ ಹಿಂದೆ ತನ್ನ ಸಂಚಿಕೆಗಳನ್ನು ಮುಗಿಸಿದಾಗ ಎಷ್ಟೋ ಮಂದಿ ಬೇಸರ ಪಟ್ಟಿದ್ದಿದೆ.

ಧಾರಾವಾಹಿ ಗಳ ದೈತ್ಯ ಟಿ ಎನ್ ಸೀತಾರಾಮ್ ಅವರ ಕಥೆಗಳ ಹೆಚ್ಚುಗಾರಿಕೆಯೇ ಅಂತದ್ದು. ಸಾಮಾಜಿಕ ಮೌಲ್ಯ, ಸಾಮಾಜಿಕ ಜವಾಬ್ದಾರಿಗಳನ್ನು ಬಿಂಬಿಸುವುದರೊಂದಿಗೆ ಮನರಂಜನೆಗೆ ಮತ್ತೊಂದು ಹೆಸರು ‘ಮಾಯಾಮೃಗ’ ಎಂಬಷ್ಟು ಮನೆಮಾತಾಗಿತ್ತು.

Advertisement

ಕನ್ನಡದ ತಾರಾಗಣಗಳಾದ ಅವಿನಾಶ್, ಮಾಳವಿಕಾ ಅವಿನಾಶ್, ದತ್ತಣ್ಣ, ಎಂ. ಡಿ ಪಲ್ಲವಿ, ಮುಖ್ಯಮಂತ್ರಿ ಚಂದ್ರು, ಮಂಜುಭಾಷಿಣಿ, ವೈಶಾಲಿ ಕಾಸರವಳ್ಳಿ ಒಳಗೊಂಡು ಹಲವರಿದ್ದ ಧಾರಾವಾಹಿ , ಒಂದೊಂದು ಪಾತ್ರಗಳ ಮೂಲಕ ಸಮಾಜದ ಬಹು ಆಯಾಮಗಳ ಮುಖಗಳಿಗೆ ದರ್ಪಣ ಹಿಡಿದಿತ್ತು.

ಹೌದು, ತೊಂಬತ್ತರ ದಶಕದಲ್ಲಿ ಕನ್ನಡಿಗರ ಮನೆ ಮಾತಾಗಿದ್ದ ದೂರದರ್ಶನ ಮಾಧ್ಯಮದಲ್ಲೇ ಕನ್ನಡಿಗರು ಎಂದು ಮರೆಯದ ಇತಿಹಾಸವನ್ನು ಸೃಷ್ಟಿಸಿದ ‘ಮಾಯಾಮೃಗ’ವನ್ನು ಮತ್ತೆ ನೋಡಲು ಅವಕಾಶ ಸಿಗುತ್ತಿದೆ. ನಾಳೆಯಿಂದ(ಶುಕ್ರವಾರ, ಜೂನ್ 4) ‘ಮಾಯಾಮೃಗ’ ವೆಬ್ ಸರಣಿ ರೂಪದಲ್ಲಿ ಕನ್ನಡಿಗರ ಮನವನ್ನು ತಣಿಸಲು ಬರುತ್ತಿದೆ.

ಈ ಬಗ್ಗೆ ನಿರ್ದೇಶಕರಾದ ಟಿ ಎನ್ ಸೀತಾರಾಮ್, ಹಾಗೂ ನಟಿಯರಾದ ಮಾಳವಿಕಾ ಅವಿನಾಶ್, ಎಂ ಡಿ ಪಲ್ಲವಿ ಉದಯವಾಣಿಯೊಂದಿಗೆ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

‘ಮಾಯಮೃಗ’ ವನ್ನು ಜನ ಒಪ್ಪಿದ್ದಾರೆ. ಇಂದಿಗೂ ಮಾಯಮೃಗ ಧಾರಾವಾಹಿಯನ್ನು ಜನ ನೆನಪಿಸಿಕೊಳ್ಳುತ್ತಾರೆ. ಇಬ್ಬರು ಮಧ್ಯಮ ವರ್ಗದ ಹೆಣ್ಣು ಮಕ್ಕಳು ಹಾಗೂ ಅವರ ಕುಟುಂಬದ ನಡುವೆ ಹೆಣೆದುಕೊಳ್ಳುವ ಕಥೆ ಇಂದಿಗೂ ಜನರ ನೆನಪಿನಲ್ಲಿ ಉಳಿದಿದೆ.    ಮತ್ತೆ ಆ ಧಾರಾವಾಹಿಯನ್ನು ವೆಬ್ ಸರಣಿಯ ಮೂಲಕ ವೀಕ್ಷಕರ ಮುಂದೆ ಇಡುತ್ತಿದ್ದೇವೆ. ಸ್ವಲ್ಪ ಮಟ್ಟಿಗೆ  ತಾಂತ್ರಿಕ ಉನ್ನತೀಕರಣವನ್ನು ಮಾಡಲಾಗಿದೆ. ಕಲರಿಂಗ್ ಹಾಗೂ ಆಡಿಯೋ ವನ್ನು ಉತ್ತಮ ದರ್ಜೆಗೆ ಏರಿಸಿ ನೋಡುಗರ ಮುಂದೆ ಭೂಮಿಕಾ ಟಾಕೀಸ್ ಅಡಿಯಲ್ಲಿ ಯೂಟ್ಯೂಬ್ ಚಾನೆಲ್ ನ ಮೂಲಕ ಜನರ ಮುಂದೆ ಇಡುತ್ತಿದ್ದೇವೆ. ಜನರು ಅಂದು ಎಷ್ಟು ಒಪ್ಪಿದ್ದರೋ, ಅಷ್ಟೇ ಪ್ರಮಾಣದಲ್ಲಿ ಈಗ ಮತ್ತೆ ‘ಮಾಯಾಮೃಗ’ವನ್ನು ಸ್ವೀಕಾರ ಮಾಡುತ್ತಾರೆ. ಸಂತೋಷ ಹಾಗೂ ಸಂವಹನಗಳು ಎರಡೂ ಒಂದೆ. ನೆನಪಿಗಾಗಿ, ಕಥೆಗಾಗಿ, ಕಥೆಯೊಳಗಿನ ಭಾವಗಳಿಗಾಗಿ ಜನ ‘ಮಾಯಾಮೃಗ’ವನ್ನು ಇಷ್ಟ ಪಡುತ್ತಾರೆ ಎಂಬ ವಿಶ್ವಾಸ, ನಂಬಿಕೆ ಇದೆ ಎನ್ನುತ್ತಾರೆ ನಿರ್ದೇಶಕ ಟಿ. ಎನ್ ಸೀತಾರಾಮ್.

ನಮ್ಮೊಂದಿಗೆ ಮಾತನಾಡಿದ ಹಿರಿಯ ನಟಿ ಮಾಳವಿಕ ಅವಿನಾಶ್, ಸಮಾಜ ಹಾಗೂ ಸಾಮಾಜಿಕ ಮೌಲ್ಯಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಹೋಗುತ್ತವೆ. ಕೆಲವೊಂದು ಶಾಶ್ವತವಾಗಿ ಉಳಿದುಕೊಳ್ಳುತ್ತವೆ. ಸತ್ಯ ಹಾಗೂ ಅಸತ್ಯಗಳ ನಡುವಿನ ಕಾಳಗದಲ್ಲಿ ಸತ್ಯವೇ ಗೆಲ್ಲುತ್ತದೆ. ಅಂತಹ ಮೌಲ್ಯಗಳನ್ನು ಬಿಂಬಿಸುವ ಪ್ರಯತ್ನ ‘ಮಾಯಾಮೃಗ’. ಟಿ. ಎನ್ ಸೀತಾರಾಮ್ ಅವರು ನೀಡುವಂತಹ ಕಥೆಗಳ ಆಳ ಹಾಗೂ ವಿಸ್ತಾರಕ್ಕೆ ಅಂತಹ ಅದ್ಭುತ ಶಕ್ತಿ ಇದೆ. ಅವರೊಳಗಿನ ಕನಸನ್ನು, ಸಂತಸವನ್ನು, ಸಂಭ್ರಮಗಳನ್ನು, ದುಃಖಗಳನ್ನು, ದುಮ್ಮಾನಗಳನ್ನು ಈ ಧಾರಾವಾಹಿಯ ಪಾತ್ರಗಳ ಮೂಲಕ ಹೊರಹಾಕಿದ್ದಾರೆ. ಕ್ರಾಂತಿ ಹಾಗೂ ಶಾಂತಿಯ ನಡುವೆ ಹೆಣೆದ ಕಥೆ, ಎಲ್ಲಾ ಕಾಲಕ್ಕೂ ಪ್ರಸ್ತುತವಾಗುವ ಕಥೆ. ಬದುಕಿಗೆ ಹತ್ತಿರವಾಗುವ ಕಥೆ. ಸರ್ವ ಕಾಲಕ್ಕೂ ಆಪ್ತವೆನ್ನಿಸುವ ಕಥೆ ಮಾಯಾಮೃಗ. ನನಗೆ ಸ್ಟಾರ್ ಪಟ್ಟ ಕೊಟ್ಟ ಧಾರಾವಾಹಿ ಇದು. ಟಿ ಎನ್ ಸೀತಾರಾಮ್ ಅವರು ಕಲಿಸಿದ ಪಾತ್ರವನ್ನು ನಟಿಸಿದ್ದೇನೆ. ಈಗ ಮತ್ತೆ ನೋಡಲು ಕುತೂಹಲದಿಂದಿದ್ದೇನೆ ಎಂದು ಸಂತಸವನ್ನು ವ್ಯಕ್ತ ಪಡಿಸಿದ್ದಾರೆ.

ಇನ್ನು, ‘ಮಾಯಾಮೃಗ’ ಶಿರ್ಷಿಕೆ ಗೀತೆ ಹಾಡಿದ ಹಾಗೂ ಧಾರಾವಾಹಿಯಲ್ಲಿ ವಿದ್ಯಾಳ ಪಾತ್ರವನ್ನು ನಿಭಾಯಿಸಿದ ಖ್ಯಾತ ಗಾಯಕಿ ಎಂ. ಡಿ ಪಲ್ಲವಿ ಅವರು ಮಾತನಾಡುತ್ತಾ, ಅಶ್ವಥ್ ಅವರ ಸಂಗೀತ ನಿರ್ದೇಶದಲ್ಲಿ ಈ ಇತಿಹಾಸ ಸೃಷ್ಟಿಸಿದ ಧಾರಾವಾಹಿ ಶೀರ್ಷಿಕೆ ಗೀತೆಗೆ ಧ್ವನಿಯಾಗಿದ್ದು, ಟಿ ಎನ್ ಸೀತಾರಾಮ್ ಅವರ ನಿರ್ದೇಶನದಲ್ಲಿ ನಟಿಸಿದ್ದು ಎಂದು ಮರೆಯಲಾಗದ ನೆನಪು. ಜನಪ್ರಿಯತೆ ಅಂದರೇ ಏನೆಂದು ಗೊತ್ತಿಲ್ಲದ ಕಾಲದಲ್ಲಿ ಜನಪ್ರಿಯತೆ ತಂದುಕೊಟ್ಟ ಪಾತ್ರ ವಿದ್ಯಾ. ಇಂದಿಗೂ ಎಷ್ಟೋ ಮಂದಿ ವಿದ್ಯಾ ಅಂತಲೇ ನನ್ನನ್ನು ಕರೆಯುವುದರ ಬಗ್ಗೆ ನನಗೆ ಅಪಾರ ಸಂತಸವಿದೆ. ‘ಮಾಯಾಮೃಗ’ ಒಂದು ಅನನ್ಯ ನೆನಪು. ನಾಟಕೀಯವಾಗಿ ಕುಹಕತೆ ಇಲ್ಲದ ಕಥೆಯಾಗಿದ್ದರಿಂದಲೇ ಜನ ಅತ್ಯಂತ ಪ್ರೀತಿಯಿಂದ ಸ್ವೀಕರಿಸಿದ್ದಾರೆ. ಈಗ ಮತ್ತೆ ವೆಬ್ ಸರಣಿಯಾಗಿ ಜನರ ಮುಂದೆ ಬರುತ್ತಿದೆ. ಸಂತಸವಾಗುತ್ತಿದೆ ಎಂದು ಹರ್ಷ ಪಟ್ಟಿದ್ದಾರೆ.

ಭೂಮಿಕಾ ಟಾಕೀಸ್ ಯೂಟ್ಯೂಬ್ ಚಾನೆಲ್ ನಲ್ಲಿ ನಾಳೆ ಒಂದು ವಾರದ 5 ಸಂಚಿಕೆಗಳು ಒಟ್ಟಿಗೆ ಬಿಡುಗಡೆಗೊಳ್ಳುವುದರ ಮೂಲಕ ಮತ್ತೆ ‘ಮಾಯಾಮೃಗ’ ನಿಮ್ಮನ್ನು ರಂಜಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next