Advertisement

ರಂಗದ ಪರಿಮಿತಿಯೊಳಗೊಂದು ಮಾಯಾಲೋಕ

12:04 PM Jul 07, 2018 | |

ಪವಾಡಗಳು ಘಟಿಸಿದವು ಎಂದು ಕೇಳಿದಾಗ ಕೆಲವರು ಹುಬ್ಬೇರಿಸುತ್ತಾರೆ. ಕೆಲವರು ಅನುಮಾನಿಸುತ್ತಾರೆ. ಕೆಲವರು ಗೇಲಿಯಲ್ಲಿ ಲೊಚಗುಡುತ್ತಾರೆ. ಏನೇಯಾದರೂ ಪವಾಡಗಳು ಮತ್ತು ಪವಾಡಪುರುಷರ ಪಟ್ಟಿ ನಮ್ಮಲ್ಲಿ ದೊಡ್ಡದೇ ಇದೆ. ಸಾಧಾರಣವಾಗಿ ಪವಾಡಗಳ ಬಗ್ಗೆ ಕೇಳಿದಾಗೆಲ್ಲ ಅದರೊಲ್ಲೊಂದು ವೈಭವೀಕರಣ ಇದ್ದೇ ಇರುತ್ತದೆ. ಆದರೆ, ಎಂಥ ಪವಾಡವೂ ಪ್ರತ್ಯಕ್ಷದ ಕಕ್ಷೆಗೆ ಬಂದಾಗ ಬೆರಗಾಗುವುದು ನಿಜ.

Advertisement

ಆಂಧ್ರದಲ್ಲೊಂದು ಪೌರಾಣಿಕ ನಾಟಕ ತಂಡ; ಹೆಸರು ಸುರಭಿ. ಈ ತಂಡಕ್ಕೊಂಡು ದೊಡ್ಡ ಗಾಥೆ ಇದೆ. ನೂರ ಮೂವತೂರು ವರ್ಷಗಳ ನಿರಂತರ ರಂಗ ಸಾಂಗತ್ಯ ಈ ತಂಡದ ಬೆನ್ನಿಗಿದೆ. ರಂಗಲೋಕದಲ್ಲಿ ನಟ- ನಟಿ ವರ್ಗ ಒಂದು ಕುಟುಂಬದಂತೆ ಇರುವುದು ಬೇರೆ ಸಂಗತಿ; ಆದರೆ, ಒಟ್ಟು ಒಂದು ಕೂಡು ಕುಟುಂಬ ಏಳು ತಲೆಮಾರುಗಳಿಂದ ನಾಟಕದಲ್ಲಿ ಇಂದಿಗೂ ತೊಡಗಿಸಿಕೊಂಡಿದೆ ಎನ್ನುವುದು ಕಣ್ಮುಂದಿನ ಪವಾಡ. 

ಈಚೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಇದೇ ಸುರಭಿ ತಂಡ “ಬಾಲ ಮಾಯಾಬಜಾರ್‌’ ನಾಟಕ ಪ್ರದರ್ಶಿಸಿತು. ಹಿರಿಯರೇ ಸೇರಿ ತಲೆಮಾರುಗಳಿಂದ ಅಭಿನಯಿಸುತ್ತ ಜೊತೆಜೊತೆಗೆ ತಮ್ಮ ಮಕ್ಕಳನ್ನೂ ತರಬೇತುಗೊಳಿಸುತ್ತಿದ್ದವರು ಈಗ ಮಕ್ಕಳಿಂದಲೇ ನಾಟಕ ಮಾಡಿಸಿದ್ದರು. ಎಲ್ಲರೂ ಹದಿನೆಂಟರ ಹರೆಯದ ಒಳಗಿನ ಮಕ್ಕಳೇ. ಇವರು ರಂಗ ಏರಿದ್ದು ಒಂದು ಬೆರಗಾದರೆ ಅವರು ಆರಿಸಿಕೊಂಡಿದ್ದ ನಾಟಕದ್ದು ಮತ್ತೂಂದು ಬೆರಗು. 

“ಮಾಯಾಬಜಾರ್‌’ ಕಥಾನಕದಲ್ಲಿ ಒಂದು ಮಾಯಾಲೋಕ ಇದೆ. ಅದು ಘಟೋದ್ಗಚ ನಿರ್ಮಾಣ ಮಾಡುವ ಕಣಟ್ಟಿನ ಲೋಕ. ಕಥೆ ಸರಳ. ಇದು ಅಭಿಮನ್ಯು ಶಶಿರೇಖಾಳ ನಡುವೆ ನಡೆವ ಮದುವೆಯ ಕಥಾನಕ. ಇದಕ್ಕೆ ಅಡೆ ಉಂಟಾಗಿಯೂ ಕಡೆಗೆ ಕೃಷ್ಣನ ಸಂಕಲ್ಪದಂತೆಯೇ ನಡೆವ ಕಥೆ. ಪೌರಾಣಿಕ ನಾಟಕ ಎಂದರೆ ಹಾಡುಗಳು, ಭವ್ಯ ಪರದೆಗಳು ಸಾಮಾನ್ಯ. ಈ ನಾಟಕದಲ್ಲೂ ಅವು ಇದ್ದವು.

ಆದರೆ, ಈ ಅಂಶಗಳನ್ನು ಮೀರಿಸಿದ್ದು ಮತ್ತೂಂದು ಅಂಶ ಈ ನಾಟಕದ ಯಶಸ್ಸಿಗೆ ಕಾರಣವಾಯಿತು. ಅದು ರಂಗದ ಪರಮಿತಿ ದಾಟಿ ಸಿನಿಮಾ ತಾಂತ್ರಿಕ ಅಂಶಗಳನ್ನು ರಂಗದ ಮೇಲೆ ಕಾಣಿಸಿದ್ದು. ಮೊದಲಿಗೆ ಆಯಾ ಸಂದರ್ಭಕ್ಕೆ ಹೊಂದುವ, ಕೆಲವೊಮ್ಮೆ ಕಣ್ಣರಳಿಸಿ ನೋಡುವಂಥ ಪರದೆಗಳು ಇದ್ದವು. ಪರಿಕರಗಳು ಕಂಡವು. ಇವುಗಳಿಗೆ ಹೊಂದಿಕೊಂಡಂತೆ ವಸ್ತ್ರವಿನ್ಯಾಸವೂ ಇತ್ತು. 

Advertisement

ಆದರೆ, ಮಾಯಾಬಜಾರ್‌ನಲ್ಲಿ ಸವಾಲಿದ್ದದ್ದು ಮಾಯಾಲೋಕವನ್ನು ನಿರ್ಮಿಸಿ ಬೆರಗು ಉಂಟುಮಾಡುವ ಬಗ್ಗೆ. ಇದನ್ನು ತಂಡ ಸಮರ್ಥವಾಗಿಯೇ ನಿರ್ವಹಿಸಿತು. ದಾರಗಳ ಎಳೆಗಳು ಕಂಡವು ಎಂದು ಸಿನಿಕರಾಗುವುದು ಸುಲಭದ ಸಂಗತಿ. ಆದರೆ, ಹಾಗೇ ಕಂಡರೂ ಅದು ಅಳವಡಿಸಿಕೊಂಡಿದ್ದ ತಾಂತ್ರಿಕತೆಯನ್ನ ಶ್ಲಾ ಸಲೇಬೇಕು. ಅದರ ಹಿಂದೊಂದು ಪರಿಶ್ರಮ ಇದೆ, ಶ್ರದ್ಧೆ ಇದೆ.

ಈಚಿನವರು ಈ ಬಗ್ಗೆ ಗುಬ್ಬಿ ಕಂಪನಿಯವರು ಹಾಕುತ್ತಿದ್ದ ಭವ್ಯವಾದ ಸೆಟ್ಸ್‌ ಬಗ್ಗೆ ಕೇಳಿರುತ್ತಾರೆ. ರಂಗದ ಮೇಲೆ ಆನೆ ಕುದುರೆ ತರುತ್ತಿದ್ದ ಪರಿಯ ಬಗ್ಗೆ ಕೇಳಿರುತ್ತಾರೆ. ಆ ಭವ್ಯತೆ ಹೇಗಿರುತ್ತದೆ ಎನ್ನುವುದನ್ನು ಒಂದು ಪರಿಮಿತಿಯಲ್ಲೇ ಚಿತ್ರಿಸಿಕೊಳ್ಳಬೇಕಾದರೆ “ಮಾಯಾಬಜಾರ್‌’ ನೋಡಬೇಕು. ಮೋಡಗಳ ನಡುವೆ ನಾರದ ಬಂದಿಳಿಯುವುದು, ರಥದ ಚಲನೆ, ಗದೆ ಮತ್ತು ಬಾಣದ ಘರ್ಷಣೆ, ಭೂತವೊಂದು ದಿಗ್ಗನೆ ಎದ್ದು ಹಿಡಿದುಕೊಳ್ಳುವುದು,

ಅಗಲಿದ ಜೋಡಿಗಳಾದ ಅಭಿಮನ್ಯು ಮತ್ತು ಶಶಿರೇಖಾಳ ವಿರಹವನ್ನು ಬೆಳದಿಂಗಳ ರಾತ್ರಿಯಲ್ಲಿ ಬೆಳಕಿನ ವಿನ್ಯಾಸದಲ್ಲಿ ಕಟ್ಟಿಕೊಡುವುದು, “ಮಾಯಾಬಜಾರ್‌’ನ ನಿರ್ಮಾಣ, ಘಟೋದ್ಗಜನ ಬಾಯಿಗೆ ಲಾಡು ಬರುವುದು… ಈ ಎಲ್ಲವೂ ಮಾಯಾ ವಿಲಾಸ. ರಂಗದ ಮಿತಿಯಲ್ಲಿ ತಂಡವೊಂದು ಸೃಷ್ಟಿಸಿದ ಜಾದೂವನ್ನು ಸಂತೋಷಿಸಲಿಕ್ಕೆ ಬಾರದವರು ಮಾತ್ರ ಲೋಪಗಳನ್ನು ಎಣಿಸಬಹುದು ಅಷ್ಟೇ. ಇಲ್ಲದಿದ್ದರೆ ಇದು ನಿಜಕ್ಕೂ ಬೆರಗಿನ ಸಂಗತಿಯೇ. 

ಇಷ್ಟರ ಆಚೆಗೆ ಹದಿಹರೆಯದ ಮಕ್ಕಳು ಹಾಡುಗಾರಿಕೆ ಮತ್ತು ಅಭಿನಯದಲ್ಲಿ ಇನ್ನೂ ಮಾಗಬೇಕು ಅನಿಸುವುದು ನಿಜ. ಅಂದರೆ, ಎಲ್ಲರೂ ಹಿಂಜರಿಕೆಯಿಂದಲೇ ನಟಿಸಿದರು ಎಂದೇನಿಲ್ಲ. ಲವಲವಿಕೆಯಿಂದಲೂ ಕೆಲವರು ನಟಿಸಿದರು. ಇದು ಸುಧಾರಿಸುತ್ತಾ ನಡೆಯುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. ಕಟ್ಟಕಡೆಗೆ ನೆನಪಿನಲ್ಲಿ ಧ್ವನಿಸುವುದೇನೆಂದರೆ, ಸುರಭಿ ತಂಡದ ರಂಗಪ್ರೀತಿ ಮತ್ತು ಬದ್ಧತೆ. ಎಲ್ಲಕ್ಕಿಂತ ಇವರ ಕುಟುಂಬವೇ ಒಂದರ್ಥದಲ್ಲಿ ಮಾಯಾಬಜಾರಿನಂತೆ ಭಾಸವಾಗುತ್ತದೆ.

* ಎನ್‌.ಸಿ. ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next