Advertisement

ಬಂತು ಮಳೆ: ಅನ್ನದಾತನಲ್ಲಿ ಹೆಚ್ಚಿದ ಹುಮ್ಮಸ್ಸು

10:04 AM Jun 27, 2019 | Team Udayavani |

ಶಶಿಧರ್‌ ಶೇಷಗಿರಿ
ಮಾಯಕೊಂಡ:
ಭಾನುವಾರ ಸುರಿದ ಮಳೆಯಿಂದ ಹರ್ಷಗೊಂಡ ಮಾಯಕೊಂಡ, ಆನಗೊಡು ಹೋಬಳಿಯ ರೈತರುಗಳು ಸೋಮವಾರದ ಬಿತ್ತನೆಯ ರಜಾ ದಿನ ಮರೆತು ಟ್ರ್ಯಾಕ್ಟರ್‌ ಮೂಲಕ ಬಿತ್ತನೆಯ ಸಿದ್ಧತೆ ಆರಂಭಿಸಿದ್ದಾರೆ.

Advertisement

ಕಳೆದ ಎರಡು ತಿಂಗಳಿಂದ ಮಳೆಯಿಲ್ಲದೆ ಪರದಾಡುತ್ತಿದ್ದ ರೈತರು ಮಳೆ ಸರಿಯಾಗಿದ್ದರೆ ಈಗಾಗಲೇ ಮೆಕ್ಕೆಜೋಳ ಬಿತ್ತನೆ ಮಾಡಿ, ಸಾಲು ಮಾಡಲು ಎಡೆ ಕುಂಟೆ ಹೊಡೆಯಬೇಕಾಗಿತ್ತು. ಮಳೆ ಇಲ್ಲದೇ ಬಿತ್ತನೆ ಅವಧಿ ಎಲ್ಲಿ ಮುಗಿದು ಬಿಡುವುದೋ ಎಂದು ಆತಂಕದಲ್ಲಿ ಕೆಲ ರೈತರು ಆಗಸದತ್ತ ನೋಡುತ್ತಿದ್ದರೆ, ಕೆಲವರು ಒಣ ಭೂಮಿಯಲ್ಲೇ ಬಿತ್ತನೆ ಮಾಡಿ ಮಳೆ ದಾರಿ ಕಾಯುತ್ತಿದ್ದರು.

ಆತಂಕದಲ್ಲಿದ್ದ ರೈತರಿಗೆ ಭಾನುವಾರ ಸುಮಾರು ಒಂದು ಗಂಟೆ ಕಾಲ ಸುರಿದ ಮಳೆ ಸಂತಸ ಮೂಡಿಸಿದೆ. ವಾಡಿಕೆಯಂತೆ ಜೂನ್‌ ತಿಂಗಳಲ್ಲಿ 45. ಮಿ.ಮಿ ಮಳೆ ಆಗಬೇಕಿದೆ. ಭಾನುವಾರದ ಮಳೆ ಹಿಡಿದು ಈವರೆಗೆ 23.8 ಮಿ.ಮಿ ಮಳೆ ಸುರಿದಿದೆ.

ಹೋಬಳಿಯ ರೈತರು ಸಂಪ್ರದಾಯದಂತೆ ಸೋಮವಾರ ಜಮೀನುಗಳಲ್ಲಿ ಬಿತ್ತನೆ ಮಾಡುವುದಿಲ್ಲ. ಆದರೆ ಮಳೆಯ ಕಣ್ಣಮುಚ್ಚಾಲೆ ಮತ್ತು ಬಿತ್ತನೆಯ ಅವಧಿ ಮುಗಿಯುತ್ತದೆ ಎಂಬ ಆತಂಕದಲ್ಲಿ ಸೋಮವಾರವೂ ರೈತರು ಹೊಲದತ್ತ ಮುಖ ಮಾಡಿದರು. ಹೋಬಳಿಯಾದ್ಯಂತ ಕೃಷಿ ಚಟುವಟಿಕೆಗಳು ಚುರುಕುಗೊಂಡಿದೆ.

ಜೋಡೆತ್ತುಗಳಿಗೆ ಬೇಡಿಕೆ ಹೆಚ್ಚಿರುವುದರಿಂದ ಮತ್ತು ಬಾಡಿಗೆ 1500 ರಿಂದ 2000 ಸಾವಿರ ರೂ.ವರೆಗಿದ್ದು, ದುಬಾರಿಯಾಗುತ್ತಿರುವುದರಿಂದ ಹೋಬಳಿಯ ದಿಂಡದಹಳ್ಳಿ, ಕೊಡಗನೂರು. ಹೆದ್ನೆ, ರಾಂಪುರ, ಹುಚ್ಚವ್ವನಹಳ್ಳಿ, ಒಂಟಿಹಾಳು, ಹಾಗೂ ಆನಗೊಡು ಹೋಬಳಿಯ ಬಾವಿಹಾಳು, ನೇರ್ಲಿಗೆ, ನರಗನಹಳ್ಳಿ, ಸಿದ್ದನೂರು, ಇತರೆ ಅನೇಕ ಗ್ರಾಮದ ರೈತರು ಹೆಚ್ಚಾಗಿ ಟ್ರ್ಯಾಕ್ಟರ್‌ ಮೊರೆ ಹೋಗಿದ್ದಾರೆ.

Advertisement

ಮೆಕ್ಕೆಜೋಳ ಬಿತ್ತನೆ ಮಾಡುವ ರೈತರು ಜೂ. 30ರ ಕೊನೆಯವರೆಗೂ ಬಿತ್ತನೆ ಮಾಡಬಹುದು. ತಡವಾದರೆ ಇಳುವರಿ ಕಡಿಮೆಯಾಗಿ ಹುಳು ಬಾಧೆ ಜಾಸ್ತಿಯಾಗಬಹುದು. ಬೀಜೋಪಚಾರ ಮಾಡಿ ಬಿತ್ತನೆ ಮಾಡಿ ಎನ್ನುತ್ತಾರೆ ಕೃಷಿ ಅಧಿಕಾರಿಗಳಾದ ಸುರೇಶ್‌ ಮತ್ತು ತೇಜವರ್ಧನ್‌.

ಸೋಮವಾರ ದಿವಸ ಜೋಡೆತ್ತುಗಳನ್ನು ಹೂಡುವದಿಲ್ಲ. ಆದರೆ ಈಗಾಗಲೇ ಬಿತ್ತನೆಯ ಅವಧಿ ಮುಗಿಯುತ್ತ ಬಂದಿದೆ. ಜೋಡೆತ್ತುಗಳಿಗೆ ಬೇಡಿಕೆ ಜಾಸ್ತಿ ಹಾಗೂ ದುಬಾರಿಯಾಗಿರುವುದರಿಂದ ಟ್ರ್ಯಾಕ್ಟರ್‌ ಅವಲಂಬಿಸಿದ್ದೇವೆ. ಇದರಿಂದ ಸಮಯ-ಹಣ ಉಳಿತಾಯವಾಗುತ್ತದೆ.
ಮೆಕ್ಕೇರ ಮಲ್ಲಿಕಾರ್ಜುನ, ರೈತ

Advertisement

Udayavani is now on Telegram. Click here to join our channel and stay updated with the latest news.

Next