Advertisement

ಕೊನೆಗೂ ತುಂಬಿದ ಕೆರೆಗಳು: ರೈತರಲ್ಲಿಸಂತಸ

11:24 AM Oct 14, 2019 | |

„ಶಶಿಧರ್‌ ಶೇಷಗಿರಿ
ಮಾಯಕೊಂಡ: ಸತತ 4-5 ವರ್ಷಗಳಿಂದ ಮಳೆಯಿಲ್ಲದೆ, ತೀವ್ರ ಅಂತರ್ಜಲ ಕುಸಿತದಿಂದ ನಲುಗಿ ಹೋಗಿದ್ದ ಮಾಯಕೊಂಡ ಮತ್ತು ಆನಗೋಡು ಹೋಬಳಿಯಲ್ಲಿ ಕಳೆದ ಸುಮಾರು ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೆರೆ ಕಟ್ಟೆಗಳಿಗೆ ನೀರು ಹರಿದು ಬರುತ್ತಿದ್ದು, ರೈತರಲ್ಲಿ ಸಂತಸ ಮೂಡಿದೆ.

Advertisement

ಮಳೆಯೂ ಇಲ್ಲದೇ, ಬೋರ್‌ವೆಲ್‌ಗ‌ಳು ಬತ್ತಿಹೋಗಿ ಅಡಕೆ ತೋಟ ಉಳಿಸಿಕೊಳ್ಳಲು ಟ್ಯಾಂಕರ್‌ ನೀರು ಮೊರೆ ಹೋಗಿದ್ದ ರೈತರು ಕೆರೆ ಕಟ್ಟೆಗಳಿಗೆ ಸಣ್ಣ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಹರ್ಷಗೊಂಡಿದ್ದಾರೆ.

ಮಾಯಕೊಂಡ ಹೋಬಳಿಯ ಕೊಡಗನೂರು ಕೆರೆ, ಮಾಯಕೊಂಡದ ಕೆಂಚಲಪ್ಪನ ಕೆರೆ, ಹೊಸಕೆರೆ, ಆನಗೋಡು ಹೋಬಳಿಯ ನರಗನಹಳ್ಳಿಯ ಕೆರೆ, ಅಲೂರು ಸಣ್ಣ ಕೆರೆ, ಅಣಜಿ ಕೆರೆ ಮತ್ತು ಇತರೆ ಚಿಕ್ಕಪುಟ್ಟ ಹೊಂಡಗಳಲ್ಲಿ ನೀರು ಶೇಖರಣೆಯಾಗುತ್ತಿದೆ.

ಕೆರೆಕಟ್ಟೆಗಳಲ್ಲಿ ನೀರು ಸಂಗ್ರಹವಾಗಿ ಅಂತರ್ಜಲ ಮಟ್ಟ ಹೆಚ್ಚಳವಾದರೆ ಹೋಬಳಿಯ ಸುಮಾರು ನೂರಕ್ಕೂ ಹೆಚ್ಚು ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಗಬಹುದು ಎಂಬ ವಿಶ್ವಾಸ ಜನರದ್ದು.

2008ರಲ್ಲಿ ಸುಮಾರು 900 ಎಕರೆ ಪ್ರದೇಶದಲ್ಲಿ ಹರಡಿರುವ ಕೊಡಗನೂರು ಕೆರೆ ತುಂಬಿ ಕೋಡಿ ಒಡೆದಿದ್ದರೂ ಏರಿ ಕೆಳ ಭಾಗದಲ್ಲಿ ನೀರು ಹರಿದು ಹೋಗುತ್ತಿದ್ದುದರಿಂದ, ಏರಿ ಒಡೆದರೆ ದಾವಣಗೆರೆ ಮತ್ತು ಹೊಸದುರ್ಗ ಮಾರ್ಗದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತದೆ ಎಂದು ನೀರು ಹೊರಕ್ಕೆ ಬಿಟ್ಟು ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿತ್ತು. ಆ ನಂತರ ಈಗ ಮೊದಲ ಬಾರಿಗೆ ಕೆರೆಯಲ್ಲಿ ನೀರು ನಿಂತಿದೆ.

Advertisement

ಮಳೆ-ಗಾಳಿಯಿಂದಾಗಿ ಅಲ್ಲಲ್ಲಿ ಹಾನಿ ಕೂಡ ಸಂಭವಿಸಿದ್ದು, ಮೇಳೆಕಟ್ಟೆ ಗ್ರಾಮದಲ್ಲಿ ಸುಮಾರು 100 ಎಕರೆಗೂ ಹೆಚ್ಚು ಮೆಕ್ಕೆಜೋಳ ಬೆಳೆ ಬಿದ್ದು ಹೋಗಿದೆ. ಕೆರೆಗಳು ಬತ್ತಿದ ಸಂದರ್ಭದಲ್ಲಿ ಹೂಳು ತೆಗೆದು, ಕೆರೆಯ ಅಚ್ಚುಕಟ್ಟು ಪ್ರದೇಶದಲ್ಲಿನ ಕಸ-ಕಳೆ ಸ್ವಚ್ಛಗೊಳಿಸಿದರೆ ನೀರು ಸರಾಗವಾಗಿ ಹರಿದು ಕೆರೆ ಸೇರಬಹುದು ಎನ್ನುತ್ತಾರೆ ರೈತರು.

Advertisement

Udayavani is now on Telegram. Click here to join our channel and stay updated with the latest news.

Next