ಮಾಯಕೊಂಡ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರೈತ ಸಂಘ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ) ಹಾಗೂ ಹಸಿರು ಸೇನೆ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು. ಗ್ರಾಮದ ಗಣೇಶ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು, ನಾಡಕಚೇರಿಗೆ ತೆರಳಿ ಕಂದಾಯ ನಿರೀಕ್ಷಕ ಅಜ್ಜಪ್ಪ ಪತ್ರಿ ಅವರಿಗೆ ಮನವಿ ಸಲ್ಲಿಸಿದರು.
ಈ ಭಾಗದ ಹಲವಾರು ಗ್ರಾಮಗಳ ಜನರು ಸಂಬಂಧಪಟ್ಟ ಇಲಾಖೆಗೆ ಸಾಗುವಳಿಗಾಗಿ ನಮೂನೆ -57 ರ ಅಡಿಯಲ್ಲಿ ಹಲವಾರು ಬಾರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಜನಪ್ರತಿನಿಧಿಗಳು, ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ, ಹಾಗಾಗಿ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು. ಇಲ್ಲವಾದರೆ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಆನಗೋಡು ಹೋಬಳಿ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ರಾಜಕೀಯ ನಾಯಕರು ಚುನಾವಣೆಯ ಫಲಿತಾಂಶ ಮತ್ತು ಫಲಿತಾಂಶದ ನಂತರ ಸರ್ಕಾರದ ಅಳಿವು, ಉಳಿವಿನ ಚಿಂತೆ ಮಾಡುತ್ತ ಕಾಲಹರಣ ಮಾಡುತ್ತಿದ್ದಾರೆ. ಜನ ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ಮತ್ತು ರೈತರ ಕಷ್ಟಗಳನ್ನು ಮರೆತು ತಮ್ಮ ಪಕ್ಷ ಮತ್ತು ಮಕ್ಕಳ ಚಿಂತೆಯಲ್ಲಿದ್ದಾರೆ ಎಂದು ಆರೋಪಿಸಿದರು.
ಬಗರ್ ಹುಕುಂ ಸಾಗುವಳಿ ಕುರಿತು ಹೋಬಳಿಯಲ್ಲಿ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಯ 470, ಇತರೆ 157 ಸೇರಿ ಒಟ್ಟು 627 ಅರ್ಜಿಗಳು ಬಂದಿವೆ. ನೀತಿ ಸಂಹಿತೆ ಮುಗಿದ ನಂತರ ತ್ವರಿತವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಂದಾಯ ನಿರೀಕ್ಷಕ ಅಜ್ಜಪ್ಪ ಪತ್ರಿ ತಿಳಿಸಿದರು.
ಸೇನೆಯ ಮಾಯಕೊಂಡ ಅಧ್ಯಕ್ಷ ಅಬ್ದುಲ್ ರಜಾಕ್, ಬೀರಪ್ಪ, ಧರಣೇಶ್, ಮುಜೀಬ್, ಕುಬೇರಪ್ಪ, ಸಾದಿಕ್, ಕೊಲ್ಕಂಟೆ ಕುಬೇಂದ್ರಪ್ಪ, ಹನುಮಂತಪ್ಪ, ಓಂಕಾರಪ್ಪ, ನಿರಂಜನ ಮೂರ್ತಿ, ಹೆದ್ನೆ ಹನುಮಂತಪ್ಪ, ತಿಪ್ಪಮ್ಮ, ಪರಮ್ಮ, ಮತ್ತು ರೈತ ಸಂಘಧ ಕಾರ್ಯಕರ್ತರು ಇದ್ದರು.