Advertisement

ಬಾರದ ಮಳೆ: ಒಣ ಭೂಮಿಯಲ್ಲೇ ರೈತರ ಬಿತ್ತನೆ

09:54 AM Jun 21, 2019 | Naveen |

ಶಶಿಧರ್‌ ಶೇಷಗಿರಿ
ಮಾಯಕೊಂಡ:
ಮಾಯಕೊಂಡ ಹೋಬಳಿಯ ಕೆಲ ಗ್ರಾಮಗಳಲ್ಲಿ ಮುಂಗಾರು ಮಳೆ ಕೊರತೆಯ ನಡುವೆಯೂ ಕಳೆದ ವಾರದಿಂದ ಮಾಯಕೊಂಡ, ಹುಚ್ಚವ್ವನಹಳ್ಳಿ, ಹಿಂಡಸಘಟ್ಟೆ, ನಲ್ಕುಂದ, ಬಸವಪೂರ ಗ್ರಾಮಗಳಲ್ಲಿ ಕೆಲವು ರೈತರುಗಳು ತೇವಾಂಶವಿಲ್ಲದ ಒಣಗಿದ ಭೂಮಿಯಲ್ಲಿಯೇ ಬಿತ್ತನೆ ಮಾಡುತ್ತಿರುವುದು ಕಂಡು ಬರುತ್ತಿದೆ.

Advertisement

ಉತ್ತಮವಾಗಿ ಮಳೆಯಾದರೆ ಮುಂಗಾರು ಹಂಗಾಮಿನ ಈ ಸಮಯದಲ್ಲಿ ಮಾಯಕೊಂಡ ಹೋಬಳಿಯ ಭದ್ರಾ ನಾಲೆಯ ಬಲ ಮತ್ತು ಏಡ ಭಾಗಗಳ 9585 ಹೆಕ್ಟೇರ್‌ ಮಳೆಯಾಶ್ರಿತ ಜಮೀನಿನ ಪೈಕಿ ಸುಮಾರು ಎಂಟು ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ನಲ್ಲಿ ವಿವಿಧ ಬೆಳೆಗಳ ಬಿತ್ತನೆ ಕಾರ್ಯ ಈಗಾಗಾಲೇ ಸಂಪೂರ್ಣವಾಗಿ ಮುಕ್ತಾಯವಾಗಬೇಕಿತ್ತು.

ಮಾರ್ಚ್‌, ಏಪ್ರೀಲ್, ಮೇ ತಿಂಗಳಲ್ಲಿ ವಾಡಿಕೆಯಂತೆ 118.2 ಮಿ.ಮೀ ಮುಂಗಾರು ಪೂರ್ವದ ಮಳೆಯಾಗಬೇಕಿತ್ತು. ಆದರೆ ಕೇವಲ 71 ಮಿ.ಮೀ. ಮಳೆಯಾಗಿದೆ.

ಜೂನ್‌ ತಿಂಗಳಲ್ಲಿ ಈವರೆಗೆ 44 ಮಿ.ಮೀ ಮಳೆಯಾಗಿದೆ. ಭೂಮಿ ಹದ ಮಾಡಿಕೊಳ್ಳುವಷ್ಟು ಸಹ ಹಸಿಯಾಗಿಲ್ಲ. ಆದರೆ ಎಲ್ಲಿ ಬಿತ್ತನೆ ಅವಧಿ ಮುಗಿದು ಬಿಡುವುದೋ ಎಂದು ಅತಂಕಗೊಂಡ ಕೆಲವು ರೈತರು ಜೂನ್‌ ತಿಂಗಳ ಮೊದಲ ವಾರದಲ್ಲಿ ಬಿದ್ದ ಅಲ್ಪ ಸ್ವಲ್ಪ ಮಳೆಗೆ ಭೂಮಿ ಹದ ಮಾಡಿಕೊಂಡು ಮೆಕ್ಕೆಜೋಳ, ಹತ್ತಿ ಬಿತ್ತನೆ ಮಾಡಿ ಉತ್ತಮ ಮಳೆಗಾಗಿ ಆಕಾಶದತ್ತ ನೋಡುತ್ತಿದ್ದಾರೆ. ಪ್ರತಿದಿನ ಆಕಾಶದಲ್ಲಿ ಮೋಡಗಳು ಕವಿದರೂ ಬೀಸುತ್ತಿರುವ ಬಿರುಗಾಳಿಗೆ ಮೋಡಗಳೇ ನಿಲ್ಲುತ್ತಿಲ್ಲ. ಕಳೆದ ನಾಲ್ಕೈದು ವರ್ಷಗಳ ಸತತ ಬರಗಾಲದಿಂದ ಬೇಸತ್ತ ರೈತರು ಈ ಬಾರಿಯೂ ಬರಗಾಲದ ಛಾಯೆಯಿಂದ ಆತಂಕಕ್ಕೆ ಒಳಗಾಗಿದ್ದಾರೆ.

ಹೋಬಳಿಯಲ್ಲಿ ಮೆಕ್ಕೆಜೋಳ 60 ಹೆಕ್ಟೇರ್‌, ಹತ್ತಿ 15 ಹೆಕ್ಟೇರ್‌, ಮುಸುಕಿನ ಜೋಳ 5 ಹೆಕ್ಟೇರ್‌ ಬಿತ್ತನೆ ಮಾಡಲಾಗಿದೆ.

Advertisement

ಈಗ ಮಳೆ ಬಂದರೂ ಮುಸುಕಿನ ಜೋಳ ಬಿತ್ತನೆ ಮಾಡಬಾರದು. ಅದಕ್ಕೆ ರೋಗ ತಗಲುತ್ತದೆ ಎಂದು ಕೃಷಿ ಸಹಾಯಕ ಅಧಿಕಾರಿಗಳಾದ ಸುರೇಶ್‌ ಮತ್ತು ತೇಜವರ್ಧನ್‌ ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next