Advertisement

50ರ ಸಂಭ್ರಮದಲ್ಲಿ ಸಿರಿಕಂಠದ ಮಯ್ಯ

12:41 PM Nov 03, 2017 | |

ಕಥಾ ಲೋಕವೇ ಪುನಃ ಸೃಷ್ಟಿಗೊಂಡು ಭಾವವಿಸ್ಮಿತ ಅನುಭವದಿಂದ ಪ್ರೇಕ್ಷಕರನ್ನು ತನ್ನ ಮಾಯಾಪಾಶದಲ್ಲಿ ಬಂಧಿಸಿಟ್ಟುಕೊಳ್ಳಬಲ್ಲ ಕಲೆ ಯಕ್ಷಗಾನ. ಇಂತಹ ಯಕ್ಷಕಲೆಯಲ್ಲಿ ಕಳೆದ ಮೂವತ್ತೈದು ವರ್ಷಗಳಿಂದ ಭಾಗವತರಾಗಿ ಕಲಾ ಪ್ರೌಢಿಮೆಯನ್ನು ಮೆರೆಯುತ್ತಿರುವವರು ಹಾಲಾಡಿ ರಾಘವೇಂದ್ರ ಮಯ್ಯರು.

Advertisement

ಸಂಪ್ರದಾಯದ ವ್ಯಾಪ್ತಿಯೊಳಗೆ ಹೊಸತನದ ರುಚಿಯನ್ನು ನೀಡಿ ರಂಗದಲ್ಲಿ ರಸಪೂರ್ಣ ರಂಜನೆಯನ್ನು ಒದಗಿಸಿ, ಕಥೆಯೊಂದನ್ನು ತಂತ್ರಗಾರಿಕೆಯಿಂದ ಪ್ರಬುದ್ಧ ವಾಗಿ ಅರಳಿಸಬಲ್ಲ ಪಳಗಿದ ಭಾಗವತಿಕೆ ಮಯ್ಯರದ್ದು. ಕಲಾವಿದನ ಘನತೆ, ಕ್ಷಮತೆಯನ್ನು ಅರಿತು ರಂಗ ದಲ್ಲಿ ದುಡಿಸಿಕೊಂಡು ಪ್ರೇಕ್ಷಕನ ಹೃದಯರಂಗದಲ್ಲಿ ಕಥಾದೃಶ್ಯವನ್ನೂ ಕಲಾವಿದನ ರಂಗಾಭಿನಯವನ್ನೂ ಚಿರಸ್ಥಾಯಿಯಾಗಿಸುವ ಕಲಾತ್ಮಕ ರಂಗತಂತ್ರಜ್ಞ ರಾಘವೇಂದ್ರ ಮಯ್ಯರು. ವಂಡಾರು ಬಸವ, ಪೆರ್ಡೂರು ರಾಮ, ಕೋಡಿ ಶಂಕರ, ಮೊಳಹಳ್ಳಿ ಹೆರಿಯ, ಜಮದಗ್ನಿ ಶೀನ, ಕೆಮ್ಮಣ್ಣು ಆನಂದ, ನಗರ ಜಗನ್ನಾಥ ಶೆಟ್ಟಿ, ಚಿಟ್ಟಾಣಿ, ಕುಮಟಾ ಗೋವಿಂದ, ಹಾರಾಡಿ ನಾರಾಯಣ ಗಾಣಿಗ, ಸಿರಿಮಠ ಪಂಜು, ಮಜ್ಜಿಗೆಬೈಲು ಆನಂದ ಶೆಟ್ಟಿ, ದುಗ್ಗಪ್ಪ ಗುಡಿಗಾರ, ಸುಬ್ರಾಯ ಭಂಡಾರಿ, ಕೃಷ್ಣ ಭಂಡಾರಿ, ಹುಂಚದಕಟ್ಟೆ ಶ್ರೀನಿವಾಸ ಆಚಾರ್‌, ಬೇಗಾರು ಪದ್ಮನಾಭ, ಕಣ್ಣಿಮನೆ ಗಣಪತಿ ಭಟ್‌ ಮುಂತಾದ ಕಲಾದಿಗ್ಗಜರೊಂದಿಗೆ ಹೆಮ್ಮೆಯ ರಂಗ ದೊಡನಾಟ ಮಯ್ಯರದು.

ಅತಿಯಾದ ಕಿರುಚಾಟಕ್ಕೆ ಮಾರುಹೋಗದೆ ತನ್ನ ಸ್ವರವ್ಯಾಪ್ತಿಗೆ ಅನುಕೂಲಕರವಾಗಿ ರಾಗವನ್ನು ಬಳಸಿಕೊಂಡು ಯಕ್ಷರಾತ್ರಿಗಳನ್ನು ಮಾಧುರ್ಯತೆಯಿಂದ ಮನಮೋಹಕವಾಗಿ ಕಟ್ಟಿ ಕೊಡಬಲ್ಲ ಜಾಣ್ಮೆ ಇವರದು. ಸುಮಾರು 50 ಪ್ರಸಂಗಗಳನ್ನು ಕಂಠಪಾಠ ಹೊಂದಿರುವ, ರಂಗದಲ್ಲಿ ಪ್ರತ್ಯುತ್ಪನ್ನ ಮತಿತ್ವದಿಂದ ಆಟದ ಕಾವನ್ನು ಹೆಚ್ಚಿಸುವ ಮಯ್ಯರ ಕೈಚಳಕ ಅಪ್ರತಿಮವಾದದ್ದು.

ಪ್ರಾಚಾರ್ಯ ನಾರಣಪ್ಪ ಉಪ್ಪೂರರ ಗುರುತನದ ಹಂಗಾರಕಟ್ಟೆ ಯಕ್ಷಕಲಾ ಗರಡಿ ಇವರಿಗೆ ಯಕ್ಷಗಾನ ಲೋಕದ ದಾರಿ ತೋರಿಸಿದ ದೀಪಸ್ತಂಭ. ತೆಂಕಣದಿಂದ ಹಿಡಿದು ಬಡಾ ಬಡಗಣದವರೆಗೂ, ರಾಜ್ಯವಲ್ಲದೆ ಹೊರರಾಜ್ಯಗಳಲ್ಲೂ ತಮ್ಮ ಕಂಠಮಾಧುರ್ಯದಿಂದ ಭಾವಲೋಕ ಸೃಜನಗೈದ ರಾಗ ಸ್ವರಸಿರಿ ಸಂಪನ್ನರು. ತನ್ನ ಸಹಪಾಠಿ ಕಲಾವಿದ ಕೋಡಿ ವಿಶ್ವನಾಥ ಗಾಣಿಗರೊಡನೆ ಕೂಡಿಕೊಂಡು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ, ಹಾಲಾಡಿಯನ್ನು ಹುಟ್ಟು ಹಾಕಿ ಮಳೆ ಗಾಲದಲ್ಲಿ ರಾಜ್ಯಾದಾದ್ಯಂತ ಯಕ್ಷಸಿಂಚನ ಗೈಯುತ್ತಾರೆ. ಕುಂದಾಪುರದ “ಮಯ್ಯ ಅಭಿಮಾನಿ ಬಳಗ’ದ ಮೂಲಕ ಅನಾರೋಗ್ಯ ಪೀಡಿತರಾದವರಿಗೆ, ಅಶಕ್ತ ಕಲಾವಿದರಿಗೆ ಕಲಾದೇಣಿಗೆಯನ್ನು ನೀಡಿ, ತನ್ನ ಅಭಿಮಾನಿ ಗಳನ್ನು ಸಮಾಜ ಸೇವೆಯಲ್ಲಿ ಕೈಜೋಡಿಸುವಂತೆ ಪ್ರೇರಣೆ ಇತ್ತ ಸ್ನೇಹಮಯಿ.

ಪ್ರತಿವರ್ಷ ತಮ್ಮ ಜನ್ಮದಿನದಂದು ಓರ್ವ ಅಶಕ್ತ ಕಲಾವಿದನಿಗೆ ಧನಸಹಾಯವನ್ನು ಮಾಡುತ್ತ ಪ್ರಚಾರದಿಂದ ದೂರವಿದ್ದ ಮಯ್ಯರು ಈ ವರ್ಷ ತಮ್ಮ 50ನೇ ವರ್ಷದ ಹುಟ್ಟಿದ ಹಬ್ಬಕ್ಕೆ ವಯೋವೃದ್ಧ ಕಲಾವಿದ ಕೊಪ್ಪಾಟಿ ಮುತ್ತ ಗೌಡರನ್ನು ಸಮ್ಮಾನಿಸಿ ಸಹಾಯಧನವನ್ನಿತ್ತಿದ್ದಾರೆ.
ಮಯ್ಯರ ಅಭಿಮಾನದ ದುಡಿಮೆಯ ಸಾಲಿಗ್ರಾಮ ಮೇಳಕ್ಕೂ ಐವತ್ತು, ಮಯ್ಯರಿಗೂ ಐವತ್ತು. ಹೃದಯ ಶ್ರೀಮಂತಿಕೆಯ ಭಾಗವತರಾದ ಮಯ್ಯರು ಅಪರೂಪವೆನಿಸುವ ವ್ಯಕ್ತಿತ್ವದ ಕಲಾಯೋಗಿ. ಅನುಭವದಿಂದ ಮಾಗಿದ ಶುಭ್ರ ಚಾರಿತ್ಯವಂತರು. ಸಾಧನೆಯ ಹಾದಿಯಲ್ಲಿ ಕ್ರಮಿಸಿದ್ದು ಕಡಿಮೆ, ಕ್ರಮಿಸಬೇಕಿರುವುದು ಹೆಚ್ಚೆನ್ನುವ ಮಯ್ಯರು ಕಲಾಭಿಮಾನಿಗಳ ಪಾಲಿನ ಸ್ನೇಹಜೀವಿ.

Advertisement

ಬೊಳೂರು ವಿಷ್ಣುಮೂರ್ತಿ ನಾಯಕ್‌

Advertisement

Udayavani is now on Telegram. Click here to join our channel and stay updated with the latest news.

Next