ಹೊಸದಿಲ್ಲಿ: ಇದೇ ಮೊದಲ ಬಾರಿಗೆ ದೇಶದ ನ್ಯಾಯಾಲಯವೊಂದು ಸಾಮಾಜಿಕ ಜಾಲತಾಣಗಳ ಬಳಕೆದಾರರ “ಉಪೇಕ್ಷೀಸಲ್ಪಡುವ ಹಕ್ಕು’ ಕುರಿತು ಪ್ರಸ್ತಾಪಿಸಿದ್ದು, ದೇಶದಲ್ಲಿ ರಿವೆಂಜ್ ಪೋರ್ನ್(ಪ್ರತೀಕಾರ ತೀರಿಸಲು ಅಶ್ಲೀಲ ಚಿತ್ರಗಳನ್ನು ಬಳಸಿ ಹೆಣ್ಣಿನ ಘನತೆಗೆ ಧಕ್ಕೆ ತರುವುದು) ವಿರುದ್ಧ ಹೋರಾಡಬೇಕೆಂದರೆ ಇಂಥದ್ದೊಂದು ಹಕ್ಕಿನ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.
ಭಗ್ನ ಪ್ರೇಮಿಗಳು ಅಥವಾ ಕಿಡಿಗೇಡಿಗಳು ತಾವು ಹೆಣ್ಣುಮಕ್ಕಳೊಂದಿಗೆ ಸಲುಗೆಯಿಂದಿದ್ದಾಗ ತೆಗೆದಿರುವ ಫೋಟೋ ಅಥವಾ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿ ಪ್ರತೀಕಾರ ತೀರಿಸುವಂಥ ಘಟನೆಗಳು ನಡೆಯುತ್ತಲೇ ಇವೆ. ಇಂಥವುಗಳ ಬಲಿಪಶುಗಳಾದ ಹೆಣ್ಣುಮಕ್ಕಳಿಗೆ ಪರಿಹಾರ ಒದಗಿಸುವಂಥ ಸೂಕ್ತ ಕಾನೂನು ನಮ್ಮಲ್ಲಿಲ್ಲ ಎಂದೂ ಕೋರ್ಟ್ ಹೇಳಿದೆ.
ಪ್ರಕರಣವೊಂದಕ್ಕೆ ಸಂಬಂಧಿಸಿ ತೀರ್ಪು ನೀಡುವ ವೇಳೆ ಒರಿಸ್ಸಾ ಹೈಕೋರ್ಟ್‌ನ ನ್ಯಾ| ಎಸ್.ಕೆ. ಪಾಣಿಗ್ರಹಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಹುತೇಕ ಪ್ರಕರಣಗಳಲ್ಲಿ, ಅವರ ಒಪ್ಪಿಗೆಯ ಮೇರೆಗೆ ತೆಗೆದ ಫೋಟೋಗಳು, ವೀಡಿಯೋಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತದೆ. ಇಂಥ ಪ್ರತೀಕಾ ರದ ಕ್ರಮಗಳ ವಿರುದ್ಧ ಕಠಿನ ಕಾನೂನಿನ ಅಗತ್ಯವಿದೆ ಎಂದು ನ್ಯಾ|ಪಾಣಿಗ್ರಹಿ ಹೇಳಿದ್ದಾರೆ.
ಯುರೋಪ್ ಮಾದರಿ ಕಾನೂನು
ಯುರೋಪ್‌ನ ಡಿಜಿಟಲ್ ಖಾಸಗಿತನ ಕಾನೂನಿನಲ್ಲಿ “ಉಪೇಕ್ಷಿಸಲ್ಪಡುವ ಹಕ್ಕು’ ಬಗ್ಗೆ ಉಲ್ಲೇಖವಿದೆ. ಇದು ಮಹಿಳೆಯರಿಗೆ ತಮ್ಮ ಕುರಿತಾದ ಖಾಸಗಿ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಿಂದ ಅಳಿಸಿ ಹಾಕುವ ಹಕ್ಕು. ಒಂದು ಬಾರಿ ಜಾಲತಾಣಗಳಲ್ಲಿ ವೀಡಿಯೋ ಅಪ್‌ಲೋಡ್ ಆದರೆ, ಕೂಡಲೇ ಅದು ಲಕ್ಷಾಂತರ ಮಂದಿಯ ಮೊಬೈಲ್‌ಗಳಲ್ಲಿ ಹರಿದಾಡತೊಡಗುತ್ತವೆ.
ಫೇಸ್‌ಬುಕ್ ಸರ್ವರ್‌ಗಳಿಂದ ಅಂಥ ವೀಡಿಯೋ ಅಳಿಸಿಹಾಕುವುದು ಹೇಗೆ, ಅದಕ್ಕೆ ಯಾರನ್ನು ಸಂಪರ್ಕಿಸಬೇಕು ಎಂಬುದು ಸಂತ್ರಸ್ತರಿಗೂ ಗೊತ್ತಿರುವುದಿಲ್ಲ. ಹೀಗಾಗಿ, ಅದನ್ನು ಅಳಿಸಿಹಾಕುವ ನಿಟ್ಟಿನಲ್ಲಿ ಭಾರತದಲ್ಲಿ ಕಾನೂನು ಜಾರಿಯಾಗುವುದು ಅಗತ್ಯ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.