ಕಲಬುರಗಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ಖಂಡಿಸಿ ದೇಶಾದ್ಯಂತ ರೈತರು ಕೈಗೊಂಡ ಹೋರಾಟಕ್ಕೆ ಗುರುವಾರ ಒಂದು ವರ್ಷ ಪೂರ್ಣವಾದ ಹಿನ್ನೆಲೆಯಲ್ಲಿ ತಾಲೂಕಿನ ನಂದೂರ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಸಂಯುಕ್ತ ಹೋರಾಟ-ಕರ್ನಾಟಕದ ಕರೆ ಮೇರೆಗೆ ಐಕ್ಯ ಹೋರಾಟ ಸಮಿತಿ ಮುಖಂಡರಾದ ಬಿ.ಆರ್.ಪಾಟೀಲ, ಆರ್‌ಕೆಎಸ್ ಸಂಘಟನೆ ರಾಜ್ಯ ಕಾರ್ಯದರ್ಶಿ ಎಚ್.ವಿ.ದಿವಾಕರ್ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎತ್ತಿನ ಬಂಡಿ ಸಮೇತ ಜಮಾವಣೆಗೊಂಡ ರೈತ ಮುಖಂಡರು ರಸ್ತೆ ಮಧ್ಯೆ ಕುಳಿತು, ಸಂಚಾರ ಸ್ಥಗಿತಗೊಳಿಸಿ ಹೋರಾಟ ನಡೆಸಿದರು.
ರೈತ ವಿರೋಧಿಯಾಗಿದ್ದ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳ ವಿರುದ್ಧ ದೆಹಲಿ ಗಡಿಗಳಲ್ಲಿ ಮಳೆ, ಚಳಿ, ಬಿಸಿಲು ಹಾಗೂ ಪಟಭದ್ರ ಹಿತಾಸಕ್ತಿಗಳ ಬೆದರಿಕೆಗಳನ್ನು ಲೆಕ್ಕಿಸದೇ ಲಕ್ಷಾಂತರ ರೈತರು ಹೋರಾಟ ಕೈಗೊಂಡಿದ್ದರು. ಇದರ ಭಾಗವಾಗಿ ದೇಶಾದ್ಯಂತ ವ್ಯಾಪಕವಾಗಿ ರೈತರು, ದಲಿತರು, ಕಾರ್ಮಿಕರನ್ನು ಹೋರಾಟ ನಡೆಸಿದ ಪರಿಣಾಮ ಕರಾಳ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಪ್ರಧಾನಿ ಮೋದಿ ಘೋಷಣೆ ಮಾಡಿರುವುದು ಹೋರಾಟಕ್ಕೆ ಸಂದ ದೊಡ್ಡ ವಿಜಯವಾಗಿದೆ ಎಂದು ಮುಖಂಡರು ಹೇಳಿದರು.
ಕರಾಳ ಮೂರು ಕೃಷಿ ಕಾಯ್ದೆಗಳ ವಾಪಸ್ ಘೋಷಣೆ ಮಾಡಿರುವ ಪ್ರಧಾನಿ ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ ನೀಡುವ ಕಾನೂನು ರಚನೆ ಹಾಗೂ ವಿದ್ಯುತ್ ಕ್ಷೇತ್ರದ ಸಂಪೂರ್ಣ ಖಾಸಗೀಕರಣಕ್ಕೆ ಅವಕಾಶ ಮಾಡಿಕೊಡುವ ವಿದ್ಯುತ್ ಮಸೂದೆ 2020ರ ವಾಪಸಾತಿ ಬಗ್ಗೆ ಮೌನ ವಹಿಸಿದ್ದಾರೆ. ಈ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕೆಂದು ಆಗ್ರಹಿಸಿದರು.
ಅದೇ ರೀತಿ ರಾಜ್ಯ ಬಿಜೆಪಿ ಸರ್ಕಾರ ಕೂಡ ರೈತರಿಗೆ ಮಾರಕವಾಗಿರುವ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆಗಳನ್ನು ವೇಗವಾಗಿ ಜಾರಿ ಮಾಡುತ್ತಿದೆ. ಈ ಕಾಯ್ದೆಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಪಸ್ ಪಡೆಯುವ ಘೋಷಣೆ ಮಾಡಬೇಕು. ಇಲ್ಲವಾದಲ್ಲಿ ರಾಜ್ಯದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಸಾರ್ವಜನಿಕ ಉದ್ಯಮಗಳ ಖಾಸಗೀಕರಣಕ್ಕೆ ತಡೆ ಹಾಕಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಬೇಕು. ಸತತ ಮಳೆಯಿಂದ ಆಗಿರುವ ಬೆಳೆ ನಷ್ಟಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಮುಖಂಡರಾದ ಶರಣಬಸಪ್ಪ ಮಮಶೆಟ್ಟಿ, ಮೌಲಾ ಮುಲ್ಲಾ, ಭೀಮಾಶಂಕರ ಮಾಡಿಯಾಳ, ಮಹೇಶ ಎಸ್.ಬಿ., ಉಮಾಪತಿ ಮಾಲೀಪಾಟೀಲ, ನಾಗೇಂದ್ರಪ್ಪ ತಂಭೆ, ರಮೇಶ ರಾಗಿ, ಮಲ್ಲಣ್ಣಗೌಡ, ಎಸ್.ಆರ್.ಕೊಲ್ಲೂರು, ಶೌಕತ್ ಅಲಿ ಅಲೂರ, ಅರ್ಜುನ ಗೊಬ್ಬೂರು ಭಾಗವಹಿಸಿದ್ದರು.