ದಾವಣಗೆರೆ: ಲಾಕ್‌ಡೌನ್ ತೆರವಿನ ನಂತರ ಹೆಚ್ಚಾಗಿರುವ ಜೆಲ್ಲಿ, ಸಿಮೆಂಟ್, ಎಂ-ಸ್ಯಾಂಡ್, ಕಬ್ಬಿಣ ಇತರೆ ಅಗತ್ಯ ವಸ್ತುಗಳ ಬೆಲೆ ಇಳಿಸುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು, ಅಧಿಕಾರಿಗಳು ವರ್ತಕರೊಂದಿಗೆ ಸಭೆ ನಡೆಸಬೇಕು ಎಂದು ದಾವಣಗೆರೆ ಮಹಾನಗರಪಾಲಿಕೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಎಚ್. ಜಯಣ್ಣ ಒತ್ತಾಯಿಸಿದ್ದಾರೆ.
ಲಾಕ್‌ಡೌನ್ ಮುನ್ನ ನಗರಪಾಲಿಕೆಯಿಂದ ಹಲವಾರು ಅಭಿವೃದ್ಧಿ ಕಾರ್ಯಗಳ ಗುತ್ತಿಗೆ ಪಡೆಯಲಾಗಿತ್ತು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೆಲಸ ನಿಲ್ಲಿಸಲಾಗಿತ್ತು. ಒಂದು ವಾರದ ಹಿಂದೆ ಅಧಿಕಾರಿಗಳು ಸಭೆ ನಡೆಸಿ, ಅಭಿವೃದ್ಧಿ ಕಾರ್ಯಗಳ ಮುಂದುವರೆಸಲು ಸೂಚಿಸಿದ್ದರು. ಕಾಮಗಾರಿಗೆ ಬೇಕಾದ ಜೆಲ್ಲಿ, ಸಿಮೆಂಟ್, ಎಂ-ಸ್ಯಾಂಡ್, ಕಬ್ಬಿಣ ಇತರೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿರುವುದರಿಂದ ಕೆಲಸ ಪ್ರಾರಂಭಿಸಲು ಸಾಕಷ್ಟು ಕಷ್ಟ ಆಗುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಲಾಕ್‌ಡೌನ್‌ಗಿಂತ ಮುಂಚೆ 20 ಎಂಎಂ ಜೆಲ್ಲಿ ಒಂದು ಅಡಿಗೆ 28 ರಿಂದ 30 ರೂ., 40 ಎಂಎಂ ಜೆಲ್ಲಿ 25 ರೂ., 1 ಟನ್ ಎಂ-ಸ್ಯಾಂಡ್‌ಗೆ 850-900 ರೂ., 1 ಚೀಲ ಸಿಮೆಂಟ್ ಗೆ 300 ರೂ. ಇತ್ತು. ನಾವು ಅದೇ ದರದಲ್ಲಿ ಗುತ್ತಿಗೆ ಪಡೆದುಕೊಂಡಿದ್ದೇವೆ. ಈಗ ಏಕಾಏಕಿ ಎಲ್ಲಾ ವಸ್ತುಗಳ ಬೆಲೆ ಹೆಚ್ಚಳವಾಗಿದೆ. 20 ಎಂಎಂ ಜೆಲ್ಲಿ ಒಂದು ಅಡಿಗೆ 50 ರೂ., 40 ಎಂಎಂ ಜೆಲ್ಲಿ 40 ರೂ., 1 ಟನ್ ಎಂ-ಸ್ಯಾಂಡ್‌ಗೆ 1200-1300 ರೂ., 1 ಚೀಲ ಸಿಮೆಂಟ್ ಗೆ 430 ರೂ. ಆಗಿದೆ. ಯಾರಿಗೂ ಹೇಳದೆ ಕೇಳದೆ ಏಕಾಏಕಿ ದರ ಹೆಚ್ಚಳ ಮಾಡುವಅಧಿಕಾರ ಕೊಟ್ಟವರು ಯಾರು ಎಂಬುದೇ ಗೊತ್ತಾಗುತ್ತಿಲ್ಲ. ವ್ಯಾಪಾರಸ್ಥರ ಕೇಳಿದರೆ ರಾಜಧನ್ ಎಂದು ಹೇಳುತ್ತಾರೆ. ರಾಜಧನ ಅವರು ಹೇಳಿದಂತೆ ಹೆಚ್ಚಾಗಿಲ್ಲ. 1-2 ರೂ.
ಹೆಚ್ಚು ತೆಗೆದುಕೊಳ್ಳಲಿ. ನೂರಾರು ರೂಪಾಯಿ ಹೆಚ್ಚಿಸಿದರೆ ಹೇಗೆ ಎಂದು ಪ್ರಶ್ನಿಸಿದರು. 20 ಎಂಎಂ ಜೆಲ್ಲಿ, 40 ಎಂಎಂ ಜೆಲ್ಲಿ, ಎಂ-ಸ್ಯಾಂಡ್, ಸಿಮೆಂಟ್ ದರ ಇಳಿಸುವಂತೆ ಕೋರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವುದು. ಶುಕ್ರವಾರ ದಾವಣಗೆರೆಗೆ ಆಗಮಿಸುವ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮತ್ತೆ ಮನವಿ ಮಾಡಿಕೊಳ್ಳಲಾಗುವುದು. ಅವರು ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಬೇಕು. ಈಗಿನ ದರದಂತೆ ಕೆಲಾ ಮಾಡಿದರೆ ಪ್ರತಿ ಕೆಲಸಕ್ಕೆ ಶೇ. 25 ರಿಂದ 30 ರಷ್ಟು ನಷ್ಟ ಆಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಂಘದ ಗೌರವಾಧ್ಯಕ್ಷ ಆರ್. ವಿರೂಪಾಕ್ಷಪ್ಪ ಕಕ್ಕರಗೊಳ್ಳ, ಕೆ.ಗಂಗಪ್ಪ, ಎಚ್. ರುದ್ರಪ್ಪ, ಚಂದ್ರಪ್ಪ, ಪರಮೇಶ್ವರಪ್ಪ, ಚಂದ್ರಪ್ಪ, ಎ.ಎಂ. ರಾಮಣ್ಣ ಸುದ್ದಿಗೋಷ್ಠಿಯಲ್ಲಿದ್ದರು.