Advertisement
ಸರಿಯಾಗಿ ಐದು ವರ್ಷದ ಹಿಂದೆ ಪ್ರಾರಂಭಿಸಿದ ಸ್ವತ್ಛ ಭಾರತ ಅಭಿಯಾನ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ ಎನ್ನುವುದಕ್ಕೆ ಜಾಗತಿಕ ಮಟ್ಟದಲ್ಲಿ ಈ ಅಭಿಯಾನಕ್ಕೆ ಸಿಕ್ಕಿರುವ ಮನ್ನಣೆಯೇ ಸಾಕ್ಷಿ. ಅಭಿಯಾನದಿಂದಾಗಿ ನಮ್ಮ ಪರಿಸರ ಸ್ವತ್ಛವಾಗಿದೆ ಎನ್ನುವುದಕ್ಕಿಂತಲೂ ಜನರ ಚಿಂತನಾಕ್ರಮದಲ್ಲಿ ಈ ಅಭಿಯಾನ ಉಂಟು ಮಾಡಿರುವ ಬದಲಾವಣೆ ಹೆಚ್ಚು ಮಹತ್ವದ್ದು. ಐದು ವರ್ಷದ ಹಿಂದೆ ಯಾರಾದರೂ ದೇಶವನ್ನು ಬಹಿರ್ದೆಸೆ ಮುಕ್ತಗೊಳಿಸುವುದು ಅಥವಾ ನಮ್ಮ ರಸ್ತೆ ಬೀದಿಗಳನ್ನು ಕಸ ಕಡ್ಡಿ ಇತ್ಯಾದಿ ಮಲಿನಗಳಿಂದ ಸಂಪೂರ್ಣ ಮುಕ್ತಗೊಳಿಸಬೇಕೆಂದು ಹೇಳಿದ್ದರೆ ಇದು ಸಾಧ್ಯವಾಗುವ ವಿಚಾರವಲ್ಲ ಎಂಬ ಉತ್ತರ ಸಿಗುತ್ತಿತ್ತು. ಆದರೆ ಐದು ವರ್ಷದಲ್ಲಿ ದೇಶ ಸಂಪೂರ್ಣವಾಗಿ ಬಹಿರ್ದೆಸೆ ಮುಕ್ತವಾಗಿದೆ. ಸುತ್ತಮುತ್ತಲಿನ ವಠಾರ, ಬೀದಿಗಳು, ರಸ್ತೆಗಳು ತಕ್ಕಮಟ್ಟಿಗಾದರೂ ಸ್ವತ್ಛವಾಗಿರುವಂತೆ ಕಂಡು ಬರುತ್ತಿವೆ ಎಂದಾದರೆ ಅದಕ್ಕೆ ಕಾರಣ ಜನರುಈ ಅಭಿಯಾನವನ್ನು ಸ್ವೀಕರಿಸಿದ ರೀತಿ. ಸ್ವಚ್ಛತೆ ನಮ್ಮ ಬದುಕಿಗೆ ಅನಿವಾರ್ಯ ಎಂಬ ಭಾವನೆಯನ್ನು ಜನರ ಮನಸಿನಲ್ಲಿ ಮೂಡಿಸಿದೆ.
Related Articles
Advertisement
ಸ್ವತ್ಛ ಜಿಲ್ಲೆಗಳಿಗೆ ಪ್ರಶಸ್ತಿ ನೀಡಿದ್ದು, ಸತ್ಯಾಗ್ರಹಿಗಳ ಮಾದರಿಯಲ್ಲಿ ಸ್ವಚ್ಛಾಗ್ರಹಿಗಳನ್ನು ನೇಮಿಸಿ ತರಬೇತಿ ನೀಡಿದ್ದು, ತಳಮಟ್ಟದಲ್ಲಿ ಸ್ವತ್ಛತೆಯ ಬಗ್ಗೆ ಅರಿವು ಮೂಡಿಸಲು ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡದ್ದು, ಸ್ವತ್ಛತೆಯ ಕೈಂಕರ್ಯದಲ್ಲಿ ಕೈಜೋಡಿಸಿ ಸಾಮಾನ್ಯರಲ್ಲಿ ಅಸಾಮಾನ್ಯರಾದವರನ್ನು ಗುರುತಿಸಿ ಗೌರವಿಸಿದ್ದೆಲ್ಲ ಒಟ್ಟಾರೆ ವ್ಯವಸ್ಥೆಯ ಮೇಲೆ ಧನಾತ್ಮಕವಾದ ಪರಿಣಾಮವನ್ನು ಬೀರಿತು. ಹಾಗೆಂದು ಇಲ್ಲಿಗೆ ಈ ಅಭಿಯಾನ ಮುಗಿಯಿತು ಎಂದು ಭಾವಿಸಬಾರದು. ಸ್ವತ್ಛತೆ ಎನ್ನುವುದು ಒಂದು ನಿರಂತರ ಪ್ರಕ್ರಿಯೆ. ಸರಕಾರದ ಮುಂದಿನ ನಡೆಗಳು ಇದಕ್ಕೆ ಪೂರಕವಾಗಿರಬೇಕು.
ಸ್ವಚ್ಛ ಭಾರತ ಅಭಿಯಾನದ ಯಶಸ್ಸಿನಿಂದ ಪ್ರೇರಿತವಾಗಿ ಸರಕಾರ 2022ಕ್ಕಾಗುವಾಗ ಬಳಸಿ ಎಸೆಯುವ ಪ್ಲಾಸ್ಟಿಕ್ ಮುಕ್ತಗೊಳಿಸುವ ಇನ್ನೊಂದು ದೊಡ್ಡ ಗುರಿಯನ್ನು ಹಾಕಿಕೊಂಡಿದೆ. ಒಂದರ್ಥದಲ್ಲಿ ಇದು ಸ್ವತ್ಛ ಭಾರತ ಅಭಿಯಾನಕ್ಕಿಂತಲೂ ದೊಡ್ಡ ಕಾರ್ಯ. ಸ್ವತ್ಛತೆ ವೈಯಕ್ತಿಕ ಮತ್ತು ಸಾಮಾಜಿಕ ನೆಲೆಯಲ್ಲಿ ಮುಖ್ಯವಾಗುತ್ತದೆ. ಆದರೆ ಪ್ಲಾಸ್ಟಿಕ್ ಹಾಗಲ್ಲ, ಅದು ನಮ್ಮ ಪರಿಸರವನ್ನು ಶಾಶ್ವತವಾಗಿ ಕೆಡಿಸುವಂಥದ್ದು. ತಲೆಮಾರುಗಳ ತನಕ ಅದರ ದುಷ್ಪರಿಣಾಮ ಇರುತ್ತದೆ. ಇಂದು ಪ್ಲಾಸ್ಟಿಕ್ ಬಳಕೆಗೆ ನಾವು ಸ್ವನಿಯಂತ್ರಣ ಹಾಕಿದರೆ ಅದು ನಮ್ಮ ಭವಿಷ್ಯದ ತಲೆಮಾರಿಗೆ ಕೊಡುವ ದೊಡ್ಡ ಯೋಗದಾನವಾಗುತ್ತದೆ. ಈ ಹಿನ್ನೆಲೆಯಲ್ಲಿ ಸ್ವಪ್ರೇರಣೆಯಿಂದ ಪ್ಲಾಸ್ಟಿಕ್ ತ್ಯಜಿಸುವ ಅಭಿಯಾನ ಕೂಡ ಒಂದು ಜನಾಂದೋಲನವಾಗಿ ಬದಲಾಗಬೇಕು.