Advertisement

ಅತಿಥಿ ಉಪನ್ಯಾಸಕರಿಗೆ ಗೌರವದ ಬದುಕು ಸಿಗಲಿ

11:48 PM Mar 20, 2023 | Team Udayavani |

ಡಾ|ವೆಂಕನಗೌಡ ಪಾಟೀಲ, ಅಧ್ಯಕ್ಷರು,
ಸಹಾಯಕ ಉಪನ್ಯಾಸಕರು-ಅತಿಥಿ ಉಪನ್ಯಾಸಕರ ಸಂಘ, ಕವಿವಿ, ಧಾರವಾಡ

Advertisement

ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗಗಳಲ್ಲಿ 586 ಜನ ಅತಿಥಿ ಉಪನ್ಯಾಸಕರು ಸೇವೆಯಲ್ಲಿದ್ದೇವೆ. ಕಳೆದ 15 ವರ್ಷಗಳಿಂದ ವಿಶ್ವವಿದ್ಯಾನಿಲಯದಲ್ಲಿ ಯಾವುದೇ ಕಾಯಂ ನೇಮಕಾತಿ ಆಗಿಲ್ಲ. ಹೀಗಾಗಿ ಪಿಎಚ್‌ಡಿ, ನೆಟ್‌, ಸ್ಲೆಟ್‌ ಪಾಸಾದ ನೂರಾರು ಜನ ಪ್ರತಿಭಾವಂತರು ಕಳೆದ 15 ವರ್ಷಗಳಿಂದ ಅತಿಥಿ ಉಪ ನ್ಯಾಸಕರಾಗಿ ಕಡಿಮೆ ವೇತನದಲ್ಲಿ ಸೇವೆ ಸಲ್ಲಿಸುವಂತಾಗಿದೆ. ಉದ್ಯೋಗ ಭದ್ರತೆ ಇಲ್ಲದೇ ಪರಿತಪಿಸುತ್ತಿರುವ ಸಹಾಯಕ ಉಪನ್ಯಾಸಕರಿಗೆ ಕೇವಲ 28,000 ಮತ್ತು ಅತಿಥಿ ಉಪನ್ಯಾಸಕರಿಗೆ ಕೇವಲ 18,000 ಗೌರವ ಸಂಭಾವನೆ ನೀಡಿ ಶೋಷಣೆ ಮಾಡುತ್ತಿದೆ.

ಇದೇ ಕೆಲಸಕ್ಕೆ ಕಾಯಂ ಉಪನ್ಯಾಸಕರಿಗೆ 1.80 ಲಕ್ಷ, 2.50 ಲಕ್ಷದವರೆಗೆ ವಿಶ್ವವಿದ್ಯಾನಿಲಯ ವೇತನ ನೀಡುತ್ತಿದೆ. ಇದರಿಂದ ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಸುಪ್ರೀಂ ಕೋರ್ಟ್‌ ಆದೇಶಕ್ಕೆ ಬೆಲೆ ಇಲ್ಲದಂತಾಗಿದೆ. ಇದಲ್ಲದೇ, ಯುಜಿಸಿ ನಿಯಮದ ಪ್ರಕಾರ ಅತಿಥಿ ಉಪನ್ಯಾಸಕರಿಗೆ ಕನಿಷ್ಟ 50,000 ವೇತನ ನೀಡಬೇಕೆಂಬ ನಿಯಮವನ್ನು ವಿಶ್ವವಿದ್ಯಾನಿಲಯ ಗಾಳಿಗೆ ತೂರಿದೆ. ಸಾಲದ್ದಕ್ಕೆ ನಿತ್ಯ ಸೇವೆ ಸಲ್ಲಿಸುವ ನಮ್ಮನ್ನು ಅತಿಥಿ ಎಂಬ ಹೆಸರಿನಿಂದ ಅವಮಾನಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಶೇ.62ರಷ್ಟಿರುವ ಉಪನ್ಯಾಸಕರು ಕಳೆದ ವರ್ಷ ಸತತ ಒಂದು ತಿಂಗಳುಗಳ ಕಾಲ ಅನಿರ್ದಿಷ್ಟ ಹೋರಾಟ ನಡೆಸಿ, 50,000ಕ್ಕೆ ವೇತನ ಹೆಚ್ಚಿಸಬೇಕು. ಮೂರು ವರ್ಷ ಮೆಲ್ಪಟ್ಟು ಸೇವೆ ಸಲ್ಲಿಸಿದ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಬೇಕು. ಮಹಿಳಾ ಉಪನ್ಯಾಸಕರಿಗೆ ವೇತನ ಸಹಿತ ಹೆರಿಗೆ ರಜೆ ನೀಡಬೇಕು. ಅತಿಥಿ ಎಂಬ ಪದನಾಮ ಬದಲಿಸಿ, ತಾತ್ಕಾಲಿಕ ಉಪನ್ಯಾಸಕ ಎಂದು ಬದಲಿಸಬೇಕು. ಮತ್ತೆ ಕಾಯಂ ಸಿಬಂದಿಗೆ ನೀಡುವ ಆರೋಗ್ಯ ಭತ್ಯೆ, ರಜೆ ಸೌಲಭ್ಯ ನೀಡಬೇಕು ಎಂದು ಹೋರಾಟ ನಡೆಸಲಾಯಿತು. ಈ ಬೇಡಿಕೆಗಳಿಗೆ ಪೂರಕವಾಗಿ ರಾಜ್ಯದ ಬೇರೆ ಬೇರೆ ವಿಶ್ವವಿದ್ಯಾನಿಲಯಗಳಲ್ಲಿ 50 ಸಾವಿರ ವೇತನ ನೀಡುತ್ತಿರು ವುದನ್ನು ಅತಿಥಿ ಉಪನ್ಯಾಸಕರ ಸಂಘ ದಾಖಲಾತಿಗಳೊಂದಿಗೆ ಮನವರಿಕೆ ಮಾಡಿಕೊಟ್ಟಿದೆ. ಇದುವರೆ ಗೂ ಇದಕ್ಕೆ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ.

-ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಸುಪ್ರೀಂ ಕೋರ್ಟ್‌ ಆದೇಶ ಹಾಗೂ ಯುಜಿಸಿ ನಿಯಮದಂತೆ ಅತಿಥಿ ಉಪನ್ಯಾಸಕರಿಗೆ ಕನಿಷ್ಠ 50,000 ವೇತನ ನೀಡಬೇಕು.
-ಖಾಲಿ ಇರುವ ಎಲ್ಲ ಬೋಧಕ ಹುದ್ದೆ ಭರ್ತಿ ಮಾಡಬೇಕು. ಇದರಲ್ಲಿ 5 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದವರನ್ನು ಆ ಹುದ್ದೆಗಳಿಗೆ ಪರಿಗಣಿಸಬೇಕು.
-ಮಹಿಳಾ ಉಪನ್ಯಾಸಕರಿಗೆ ವೇತನ ಸಹಿತ ಹೆರಿಗೆ ರಜೆ ನೀಡಬೇಕು.
– ಸಿಂಡಿಕೇಟ್‌ ಸಭೆಯಲ್ಲಿ ಅಂಗೀಕರಿಸಿದ ಸಹಾಯಕ ಉಪನ್ಯಾಸಕರಿಗೆ 40,000 ಹಾಗೂ ಅತಿಥಿ ಉಪನ್ಯಾಸಕರಿಗೆ 26,000 ಪ್ರಸಕ್ತ ವರ್ಷದಿಂದಲೇ ಜಾರಿಯಾಗುವಂತೆ ಆದೇಶ ಹೊರಡಿಸಬೇಕು.
– ಹನ್ನೊಂದು ತಿಂಗಳ ಬದಲಾಗಿ ವರ್ಷದ 12 ತಿಂಗಳು ವೇತನ ನೀಡಬೇಕು.
– ಅತಿಥಿ ಪದನಾಮಕ್ಕೆ ಬದಲಾಗಿ ತಾತ್ಕಾಲಿಕ ಉಪನ್ಯಾಸಕ ಅಥವಾ ಅಡಹಾಕ್‌ ಪ್ರೊಫೆಸರ್‌ ಎಂಬ ಪದನಾಮ ನೀಡಬೇಕು.
– ಕಾಯಂ ಉಪನ್ಯಾಸಕರಿಗೆ ನೀಡು ವಂತೆ ರಜೆ ಹಾಗೂ ಆರೋಗ್ಯ ಸೌಲಭ್ಯ ನೀಡಬೇಕು.
– ಇನ್ನು ಸರಕಾರ ವಿಶ್ವವಿದ್ಯಾನಿಲಯದ ಬಾಕಿ ಉಳಿಸಿಕೊಂಡಿರುವ ಅನುದಾನ Ê ‌ನ್ನು ತಕ್ಷಣ ಮಂಜೂರು ಮಾಡಬೇಕು. ಭವಿಷ್ಯದಲ್ಲಿ ಹಣಕಾಸಿನ ಕೊರತೆ ಎದುರಾಗದಂತೆ ಅನುದಾನ ಮುಂಚಿತವಾಗಿ ನೀಡಬೇಕು.
– ಉಪನ್ಯಾಸಕರ ನೇಮಕಾತಿ ಅಧಿಕಾರವನ್ನು ಕರ್ನಾಟಕ ನೇಮಕಾತಿ ಪ್ರಾಧಿಕಾರದಿಂದ ವಾಪಸ್‌ ಪಡೆದು ಮೊದಲಿನಂತೆ ವಿಶ್ವವಿದ್ಯಾನಿಲಯವೇ ನೇಮಕ ಮಾಡಿಕೊಳ್ಳಬೇಕು.
– ವಿಶ್ವವಿದ್ಯಾನಿಲಯದಲ್ಲಿ ಸರಕಾರ, ರಾಜಕೀಯ ಪಕ್ಷ ಗಳ ಹಸ್ತಕ್ಷೇಪ ಮಾಡದಂತೆ ನಿಯಮ ರೂಪಿಸಬೇಕು.
– ತಾರತಮ್ಯ ಸರಿದೂಗಿಸಲು ರಾಜ್ಯದ ಎಲ್ಲ ವಿಶ್ವವಿದ್ಯಾನಿಲಯಗಳಲ್ಲಿ ಅತಿಥಿ ಉಪನ್ಯಾಸಕರಿಗೆ ಕನಿಷ್ಠ 50,000 ವೇತನ ಮತ್ತು ಕಾಯಂ ಉಪನ್ಯಾಸಕರಿಗೆ ನೀಡುವ ಎಲ್ಲ ಸೌಲಭ್ಯಗಳು ದೊರೆಯುವಂತೆ ಮಾಡಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next