ನಾಗರಿಕ ಸೇವಾ ಹುದ್ದೆಗಳ ಭರ್ತಿಗಾಗಿ ಕಳೆದ ಸಾಲಿನಲ್ಲಿ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು 933 ಮಂದಿ ತೇರ್ಗಡೆ ಹೊಂದಿದ್ದಾರೆ. ಮೊದಲ 4 ರ್‍ಯಾಂಕ್‌ಗಳೂ ಮಹಿಳೆಯರ ಪಾಲಾಗಿದ್ದು, ಈ ಬಾರಿ ಸ್ತ್ರೀಶಕ್ತಿ ಅನಾವರಣಗೊಂಡಿದೆ. ಆಲ್ ಇಂಡಿಯಾ ರ್‍ಯಾಂಕಿಂಗ್‌ನಲ್ಲಿ ಇಶಿತಾ ಕಿಶೋರ್ ಮೊದಲನೇ ರ್‍ಯಾಂಕ್ ಗಳಿಸಿಕೊಂಡಿದ್ದು ಇಡೀ ದೇಶಕ್ಕೇ ಹೆಮ್ಮೆ ತಂದಿದ್ದಾರೆ.
ಗರೀಮಾ ಲೋಹಿಯಾ, ಉಮಾ ಹರಥಿ ಎನ್. ಕ್ರಮವಾಗಿ 2 ಮತ್ತು 3ನೇ ರ್‍ಯಾಂಕ್ ಗಳಿಸಿಕೊಂಡಿದ್ದಾರೆ. ಸ್ಮತಿ ಮಿಶ್ರಾ 4ನೇ ರ್‍ಯಾಂಕ್ ಬಂದಿದ್ದಾರೆ. ಕರ್ನಾಟಕದ ಪಾಲಿಗೆ ಭಾವನಾ ಎಚ್.ಎಸ್. ಅವರು ಮೊದಲನೇ ರ್‍ಯಾಂಕ್ ಪಡೆದಿದ್ದರೆ, ಎಐಆರ್‌ನಲ್ಲಿ 55ನೇ ರ್‍ಯಾಂಕ್ ಗಳಿಸಿಕೊಂಡಿದ್ದಾರೆ.
ಈ ಬಾರಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಕರ್ನಾಟಕದ ಒಟ್ಟು 34ಕ್ಕೂ ಹೆಚ್ಚು ಮಂದಿ ರ್‍ಯಾಂಕ್ ಪಡೆದಿರುವುದು ವಿಶೇಷ. ಈ ಬಾರಿ ವೈದ್ಯರು, ಐಆರ್‌ಎಸ್ ಅಧಿಕಾರಿಗಳು, ಕೆಎಎಸ್ ಅಧಿಕಾರಿಗಳೂ ರ್‍ಯಾಂಕ್ ಪಟ್ಟಿಯಲ್ಲಿದ್ದಾರೆ. ರೈತರ ಮಕ್ಕಳು, ಕಂಡಕ್ಟರ್ ಪುತ್ರನಿಗೂ ಯುಪಿಎಸ್‌ಸಿ ಗೌರವ ಸಿಕ್ಕಿದೆ.
ಭಾರತದಾದ್ಯಂತ 12 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಿದ್ದರು. ಎರಡನೇ ಸುತ್ತಿನ ಅನಂತರ 3ನೇ ಸುತ್ತಿನಲ್ಲಿ ಎರಡೂವರೆ ಸಾವಿರ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಬಾರಿ 933ರಲ್ಲಿ 613 ಪುರುಷರು ಮತ್ತು 320 ಮಹಿಳೆಯರು ತೇರ್ಗಡೆಯಾಗಿದ್ದಾರೆ. ಟಾಪ್ 25ರಲ್ಲಿ 14 ಮಹಿಳೆಯರು ಮತ್ತು 11 ಪುರುಷರು ಇದ್ದಾರೆ.
Related Articles
ವಿಶೇಷವೆಂದರೆ ಟಾಪ್ 25 ಅಭ್ಯರ್ಥಿಗಳು ದೇಶದ ಅತ್ಯುನ್ನತ ಕಾಲೇಜುಗಳು, ವಿ.ವಿ.ಗಳಲ್ಲಿ ಅಧ್ಯಯನ ನಡೆಸಿದ್ದಾರೆ. ಅಂದರೆ, ಐಐಟಿ, ಎನ್‌ಐಟಿ, ದಿಲ್ಲಿ ವಿ.ವಿ., ಗುಜರಾತ್ ರಾಷ್ಟ್ರೀಯ ಕಾನೂನು ಕಾಲೇಜು, ಜಾಧವ್‌ಪುರ ವಿ.ವಿ., ಜಿವಾಜಿ ವಿ.ವಿ.ಯಲ್ಲಿ ವಿದ್ಯಾಭ್ಯಾಸ ಮಾಡಿ
ದವರಾಗಿದ್ದಾರೆ. ಈ ಬಾರಿಯ ಫಲಿತಾಂಶ ನೋಡಿದರೆ ಸತತ ಅಭ್ಯಾಸ ಮಾಡಿದವರಿಗೆ ನಾಗರಿಕ ಸೇವಾ ಪರೀಕ್ಷೆಗಳು ಕಬ್ಬಿಣದ ಕಡಲೆಯೇನಲ್ಲ ಎಂಬುದು ವೇದ್ಯವಾಗುತ್ತದೆ. ಕಷ್ಟಪಟ್ಟು ಅಭ್ಯಾಸ ಮಾಡಿದರೆ ಯಾರಿಗೆ ಬೇಕಾದರೂ ಈ ಪರೀಕ್ಷೆಗಳು ಒಲಿಯಬಹುದು ಎಂಬುದೂ ಸಾಬೀತಾಗಿದೆ.
ಬಹಳಷ್ಟು ಮಂದಿ ಈಗಾಗಲೇ ಬೇರೆ ಬೇರೆ ಕಡೆಗಳಲ್ಲಿ ಉದ್ಯೋಗದಲ್ಲಿದ್ದು, ಬಿಡುವು ಮಾಡಿಕೊಂಡು ಯುಪಿಎಸ್‌ಸಿ ಪರೀಕ್ಷೆಗೆ ಓದಿದ್ದಾರೆ. ಹಾಗೆಯೇ ಒಬ್ಬ ಅಭ್ಯರ್ಥಿಯ ತಂದೆ ತಾಯಿ ಕೂಲಿಕಾರರಾಗಿದ್ದು, ಅಣ್ಣನ ನೆರವಿನಿಂದಲೇ ಓದಿ ಪಾಸ್ ಮಾಡಿಕೊಂಡಿದ್ದಾರೆ.
ಸತತ ಪ್ರಯತ್ನ ಮಾಡಿದರೆ ಯಶಸ್ಸು ಸಾಧ್ಯ ಎಂಬುದನ್ನೂ ಈ ಕಲಿಗಳು ಸಾಧಿಸಿ ತೋರಿಸಿದ್ದಾರೆ. ಈ ಬಾರಿ ಪಾಸಾದವರಲ್ಲಿ ಬಹುತೇಕರು ನಾಲ್ಕೈದು ಬಾರಿ ಪರೀಕ್ಷೆ ತೆಗೆದುಕೊಂಡವರೇ ಆಗಿದ್ದಾರೆ. ಕೆಲವರು ಈ ಹಿಂದೆ ಪರೀಕ್ಷೆ ಬರೆದು, ಆಗ ರ್‍ಯಾಂಕ್ ಬಂದಿದ್ದರೂ, ಸಮಾಧಾನಗೊಳ್ಳದೇ ಮತ್ತಷ್ಟು ಓದಿ ಇನ್ನಷ್ಟು ಮೇಲಿನ ರ್‍ಯಾಂಕ್ ಪಡೆದಿದ್ದಾರೆ. ಒಂದು ರೀತಿಯಲ್ಲಿ ಇದು ಎಲ್ಲರಿಗೂ ಸ್ಫೂರ್ತಿಯ ಕಥೆಯಂತಾಗಿದೆ.
ಈಗಲೂ ವಿದ್ಯಾರ್ಥಿಗಳು ಕಡಿಮೆ ಅಂಕ ಬಂದರೆ ಅಥವಾ ಫಲಿತಾಂಶ ಒಂದಷ್ಟು ಏರುಪೇರಾದರೂ ಆಕಾಶವೇ ಕೆಳಗೆ ಬೀಳುವ ರೀತಿ ವರ್ತಿಸುತ್ತಾರೆ. ಆದರೆ ಈ ಐಎಎಸ್, ಐಪಿಎಸ್‌ಗೆ ಸೇರಬಯಸುವ ಅಭ್ಯರ್ಥಿಗಳು ಸೋಲನ್ನೇ ಗೆಲುವಿನ ಮೆಟ್ಟಿಲಾಗಿಸಿಕೊಂಡು ಹೋಗುತ್ತಾರೆ. ಇದೇ ಅವರ ಯಶಸ್ಸಿನ ಗುಟ್ಟು ಎಂಬುದನ್ನು ಅರಿತುಕೊಳ್ಳಬೇಕು. ಅಲ್ಲದೆ ಮುಂದಿನ ದಿನಗಳಲ್ಲಿ ಕರ್ನಾಟಕದಿಂದ ಇನ್ನಷ್ಟು ರ್‍ಯಾಂಕ್ ಬರುವಂತಾಗಬೇಕು. ಸರಕಾರವೂ ಈ ನಿಟ್ಟಿನಲ್ಲಿ ತರಬೇತಿ ಕೊಡಿಸುವ ಕೆಲಸ ಮಾಡಬೇಕು.