ಹುಮನಾಬಾದ: ಯುವಕರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನ್ ವೀರರ ಕುರಿತು ತಿಳಿಸುವುದಾಗಬೇಕು ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು.
ತಾಲೂಕು ಆಡಳಿತ ವತಿಯಿಂದ ಪಟ್ಟಣದಲ್ಲಿ ಏರ್ಪಡಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ರಾಮಚಂದ್ರ ವೀರಪ್ಪ, ಮಾಣಿಕರಾವ ಭಂಡಾರಿ, ಪುಂಡಲೀಕರಾವ ಸೇರಿದಂತೆ ಅನೇಕರು ನಿಜಾಮರ ವಿರುದ್ಧ ಹೋರಾಟ ನಡೆಸಿ ಜೈಲುವಾಸ ಅನುಭವಿಸಿದರು. ಮಲ್ಲಿಕಾರ್ಜುನ ಖರ್ಗೆ, ಧರಂಸಿಂಗ್, ಬಸವರಾಜ ಪಾಟೀಲ ಅವರು ಈ ಭಾಗದ ಅಭಿವೃದ್ಧಿ ಹಾಗೂ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ ಎಂದರು.
ಅನೇಕರು ಆ ಹೋರಾಟದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಚಿಟಗುಪ್ಪ- ಹುಮನಾಬಾದ ತಾಲೂಕಿನ ಹೆಚ್ಚಿನ ಜನರು ಸ್ವಾತಂತ್ರÂ ಹೋರಾಟದಲ್ಲಿ ಭಾಗಿಯಾಗಿದ್ದರು ಎಂದರು.
ಬೀದರ ಸಹಕಾರ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡಿದ ರೈತರಿಗೆ ಹಣ ಪಾವತಿಸುವ ನಿಟ್ಟಿನಲ್ಲಿ ಅಪೆಕ್ಸ್ ಬ್ಯಾಂಕ್ 10 ಕೋಟಿ ರೂ. ಸಾಲಕ್ಕೆ ಗ್ಯಾರಂಟಿ ನೀಡಿದೆ. ಈ ಕುರಿತು ಕಾರ್ಖಾನೆ ಅಧ್ಯಕ್ಷ ಸುಭಾಷ ಕಲ್ಲೂರ್ ಅವರಿಗೆ ಖುದ್ದು ಕರೆ ಮಾಡಿ ಮಾಹಿತಿ ಪಡೆದು ಅವರನ್ನು ಜತೆಯಲ್ಲಿ ಕರೆದುಕೊಂಡು ಹೋಗಿ ಮುಖ್ಯಮಂತ್ರಿ ಹಾಗೂ ಸಹಕಾರ ಸಚಿವರಿಗೆ ಭೇಟಿ ಮಾಡಿಸಿ ಕೂಡಲೇ ಹಣ ಬಿಡುಗಡೆ ಮಾಡುವಂತೆ ಮನವರಿಕೆ ಮಾಡಿದ್ದೇನೆ. ಶೀಘ್ರ ಹಣ ಬಿಡುಗಡೆ ಆಗುವ ನಿರೀಕ್ಷೆ ಇದೆ ಎಂದರು.
ಇದಕ್ಕೂ ಮುನ್ನ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಧ್ವಜಾರೊಹಣ ಮಾಡಿದರು. ಡಾ| ಚಂದ್ರಶೇಖರ ಪಾಟೀಲ, ನೀತು ಶರ್ಮಾ, ಸತ್ಯವತಿ ಮಠಪತಿ, ವಸತಿ ಯೋಜನೆ ಸದಸ್ಯ ಬಸವರಾಜ ಆರ್ಯ, ಮುರಗೆಪ್ಪಾ, ಶಿವರಾಜ ರಾಠೊಡ್, ಶರಣಬಸಪ್ಪ ಕೋಡ್ಲಾ, ವೆಂಕಟೇಶ, ಮಲ್ಲಿಕಾರ್ಜುನ ಮಾಶೆಟ್ಟಿ, ಟಿಎಪಿಎಂಎಸ್ ಅಧ್ಯಕ್ಷ ಅಭಿಷೇಕ್ ಪಾಟೀಲ ಇದ್ದರು.