Advertisement

ಕೋವಿಡ್‌ ನಿಯಂತ್ರಣ ಕಾರ್ಯ ಪರಿಣಾಮಕಾರಿಯಾಗಲಿ: ಪದ್ಮಾ

06:16 PM Oct 13, 2020 | Suhan S |

ದಾವಣಗೆರೆ: ಕೋವಿಡ್‌-19 ನಿಯಂತ್ರಣ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜಿಲ್ಲೆಯಾದ್ಯಂತ ಪರಿಣಾಮಕಾರಿಯಾಗಿ ಐಇಸಿ (ಮಾಹಿತಿ, ಶಿಕ್ಷಣ ಮತ್ತು ಸಂವಹನ) ಚಟುವಟಿಕೆಗಳನ್ನು ಕೈಗೊಳ್ಳಲು ಕ್ರಿಯಾಯೋಜನೆ ಸಿದ್ಧಪಡಿಸಬೇಕು ಎಂದು ಜಿಪಂ ಸಿಇಒ ಪದ್ಮಾಬಸವಂತಪ್ಪ, ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಸೋಮವಾರ ಜಿಲ್ಲಾ ಪಂಚಾಯತ್‌ ಮುಖ್ಯ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕೋವಿಡ್‌- 19 ನಿಯಂತ್ರಿಸಲು ಐಇಸಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಕುರಿತು ಕ್ರಿಯಾ ಯೋಜನೆ ಸಿದ್ದಪಡಿಸುವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚುನಾವಣೆಯ ಸ್ವೀಪ್‌ ಚಟುವಟಿಕೆ ರೀತಿಯಲ್ಲಿ ಕೋವಿಡ್‌ ನಿಯಂತ್ರಣ ಹಿನ್ನೆಲೆಯಲ್ಲಿ ಐಇಸಿ ಚಟುವಟಿಕೆಗಳನ್ನು ಜಿಲ್ಲಾದ್ಯಂತ ಕೈಗೊಳ್ಳಬೇಕು. ಸರ್ಕಾರದ ಸೂಚನೆಯಂತೆ ಇಲಾಖೆಗಳು ಕ್ರಿಯಾ ಯೋಜನೆ ಸಿದ್ಧಪಡಿಸಿ ಕಾರ್ಯಾರಂಭ ಮಾಡಬೇಕು ಎಂದರು.

ಎಲ್ಲಾ ಸರ್ಕಾರಿ ಕಚೇರಿಗಳ ಅಧಿಕೃತ ಪತ್ರಗಳ ಮೇಲೆ ಮಾಸ್ಕ್ ಕಡ್ಡಾಯವಾಗಿ ಬಳಸಿ, ಅಂತರ ಕಾಯ್ದುಕೊಳ್ಳಿ ಹಾಗೂ ಸ್ಯಾನಿಟೈಸರ್‌ ಬಳಸಿ.. ಈ ರೀತಿಯ ಜಾಗೃತಿ ಮೂಡಿಸುವ ಘೋಷಣೆಗಳನ್ನು ಮುದ್ರಿಸಬೇಕು. ಕೋವಿಡ್ ನಿಯಂತ್ರಣ ಕುರಿತು ಕರಪತ್ರಗಳು, ಪೋಸ್ಟರ್‌ಗಳು, ಗೋಡೆ ಬರಹ ಮಾಡುವ ಮೂಲಕ ಮತ್ತು ತಮ್ಮ ವ್ಯಾಪ್ತಿಯ ವಾಟ್ಸಪ್‌, ಇತರೆ ಸಾಮಾಜಿಕ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸಬೇಕು. ಕ್ರಿಯಾ ಯೋಜನೆಯಂತೆ ಕಾರ್ಯ ನಿರ್ವಹಿಸಿ ಪ್ರತಿ ದಿನ ಜಿಪಂಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.

ದಾವಣಗೆರೆ ನಗರದ ರಾಂ ಅಂಡ್‌ ಕೋ, ಗುಂಡಿ ವೃತ್ತಗಳಲ್ಲಿ ಹಾಗೂ ಇತರೆ ಚಾಟ್ಸ್‌ ಅಂಗಡಿಗಳ ಬಳಿ ಸಂಜೆ ಹೊತ್ತು ಜನರು ಸಾಮಾಜಿಕ ಅಂತರ ಪಾಲಿಸದಿರುವುದು ಕಂಡು ಬಂದಿದೆ. ಅಂತಹ ಸ್ಥಳಗಳಲ್ಲಿ ಜಾಗೃತಿ ಮೂಡಿಸುವ ಹಾಗೂ ಪೋಸ್ಟರ್‌ಗಳ ಮೂಲಕ ಅಥವಾ ಮೈಕ್‌ ಘೋಷಣೆ ಮೂಲಕ ಅರಿವು ಮೂಡಿಸಬೇಕು.ಹೋಂ ಐಸೋಲೇಷನ್‌ ನಿಯಮಗಳ ಜೊತೆಗೆ ಕೊರೊನಾ ಪಾಸಿಟಿವ್‌ಬಂದವರಿಗೆ ಆತ್ಮಸ್ಥೈರ್ಯ ತುಂಬಿ ಅವರನ್ನು ಚೆನ್ನಾಗಿ ನೋಡಿಕೊಳ್ಳುವ ಕೆಲಸ ಆಗಬೇಕೆಂದರು.

ಡಿಡಿಪಿಐ ಸಿ.ಆರ್‌, ಪರಮೇಶ್ವರಪ್ಪ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ| ಶ್ರೀನಿವಾಸ್‌ ಚಿಂತಾಲ್‌, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ| ನಟರಾಜ್‌, ಆರ್‌ಸಿಎಚ್‌ಒ ಡಾ| ಮೀನಾಕ್ಷಿ, ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ಎಸ್‌.ಆರ್‌. ಗಂಗಪ್ಪ, ಡಾ| ಶಂಕರೇಗೌಡ ಇತರರು ಇದ್ದರು.

Advertisement

ಬಸ್‌ ನಿಲ್ದಾಣಗಳಲ್ಲಿ ಕೋವಿಡ್ ನಿಯಂತ್ರಣ ಜಾಗೃತಿ ಮೂಡಿಸಲು ದೊಡ್ಡ ಬ್ಯಾನರ್‌, ಬಸ್‌ಗಳ ಮೇಲೆ ಮತ್ತು ಒಳಭಾಗದಲ್ಲಿ ಸ್ಟಿಕ್ಕರ್‌ಗಳು ಹಾಗೂಬಸ್‌ ಟಿಕೆಟ್‌ಗಳ ಮೇಲೆ ಕೋವಿಡ್ ನಿಯಂತ್ರಣ ಕುರಿತಾದ ಬರಹಗಳನ್ನು ಮುದ್ರಿಸಬೇಕು. ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಕಸ ಸಂಗ್ರಹಿಸುವ ಗಾಡಿಗಳಲ್ಲಿ ಕೋವಿಡ್ ಜಾಗೃತಿ ಕುರಿತಾದ ಹಾಡುಗಳು (ಜಿಂಗಲ್ಸ್‌) ಹಾಕುವ ವ್ಯವಸ್ಥೆ ಮಾಡಬೇಕು. -ಪದ್ಮಾ ಬಸವಂತಪ್ಪ, ಜಿಪಂ ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next