Advertisement

Aditya-L1 ದೇಶದ ಚೊಚ್ಚಲ ಸೂರ್ಯ ಶಿಕಾರಿ ಯಶಸ್ವಿಯಾಗಲಿ

11:28 PM Sep 01, 2023 | Team Udayavani |

ದೇಶದ ಪ್ರತಿಷ್ಠಿತ ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ(ಇಸ್ರೋ) ಚಂದ್ರಯಾನ-3 ಯೋಜನೆಯ ಯಶಸ್ಸಿನ ಬೆನ್ನಲ್ಲೇ ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೂಂದು ಮೈಲುಗಲ್ಲು ಸ್ಥಾಪಿಸಲು ಮುಂದಾಗಿದೆ. ನಮ್ಮ ಹೆಮ್ಮೆಯ ಬಾಹ್ಯಾಕಾಶ ವಿಜ್ಞಾನಿಗಳು ದೇಶದ ಪ್ರಪ್ರಥಮ ಸೂರ್ಯಯಾನಕ್ಕೆ ಅಣಿಯಾಗಿದ್ದಾರೆ. ಸೂರ್ಯನ ಸಂಶೋಧನೆಗಾಗಿ ಆದಿತ್ಯ-ಎಲ್‌1 ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಉಡಾಯಿಸಲು ಕ್ಷಣಗಣನೆ ಆರಂಭಿಸಿರುವ ಇಸ್ರೋ ವಿಜ್ಞಾನಿಗಳ ತಂಡ ಶನಿವಾರ ಬೆಳಗ್ಗೆ ಆದಿತ್ಯ-ಎಲ್‌1 ಉಪಗ್ರಹವನ್ನು ಹೊತ್ತ ಪಿಎಸ್‌ಎಲ್‌ವಿ-ಸಿ57 ರಾಕೆಟ್‌ ಅನ್ನು ಗಗನಕ್ಕೆ ಉಡಾಯಿಸಲು ಸಜ್ಜಾಗಿದ್ದಾರೆ.

Advertisement

ಸೌರ ಮಂಡಲ ಮಾತ್ರವಲ್ಲದೆ ಇಡೀ ಬಾಹ್ಯಾಕಾಶ ಕ್ಷೇತ್ರದಲ್ಲಿ ಕೌತುಕಕ್ಕೆ ಕಾರಣವಾಗಿರುವ ಬೆಂಕಿಯ ಉಂಡೆಯಂತಿರುವ ಸೂರ್ಯನ ಸನಿಹಕ್ಕೆ ಉಪಗ್ರಹವನ್ನು ರವಾನಿಸುವ ಮೂಲಕ ಅದರ ಸಮಗ್ರ ಅಧ್ಯಯನ ನಡೆಸುವ ಯೋಚನೆ, ಯೋಜನೆ ನಮ್ಮ ವಿಜ್ಞಾನಿ ಗಳದ್ದಾಗಿದೆ. ಭೂಮಿ ಮತ್ತು ಸೂರ್ಯನ ನಡುವಣ ದೂರದಲ್ಲಿ ಭೂಮಿಗೆ ಸಮೀಪ ಅಂದರೆ ಸುಮಾರು 15 ಲಕ್ಷ ಕಿ.ಮೀ. ದೂರದಲ್ಲಿ ಇವೆರಡರ ಗುರುತ್ವ ನಮ್ಮ ಕೃತಕ ಉಪಗ್ರಹಕ್ಕೆ ಸಮಾನವಾಗಿರಲಿದ್ದು ಇದನ್ನು ಲ್ಯಾಗ್ರಾಂಜಿಯನ್‌ ಪಾಯಿಂಟ್‌ ಎಲ್‌ 1 ಎಂದು ಗುರುತಿಸ ಲಾಗಿದೆ. ಇಲ್ಲಿ ಆದಿತ್ಯ-ಎಲ್‌ 1 ಉಪಗ್ರಹವನ್ನು ಇರಿಸಿ ಸೂರ್ಯನ ಅಧ್ಯಯನದ ದೂರಗಾಮಿ ಚಿಂತನೆ ವಿಜ್ಞಾನಿಗಳದಾಗಿದೆ. ಉಪಗ್ರಹ ನಿಗದಿತ ಕಕ್ಷೆ ಸೇರಿದ ಬಳಿಕ ಅದರಲ್ಲಿನ 7 ಪೇ ಲೋಡ್‌ಗಳ ಪೈಕಿ ಒಂದು ಪೇ ಲೋಡ್‌ ಸೂರ್ಯನ ನಿಖರ ಛಾಯಾಚಿತ್ರಗಳನ್ನು ನಿರಂತರವಾಗಿ ಸೆರೆಹಿಡಿದು ಇಸ್ರೋ ನಿಯಂತ್ರಣ ಕೊಠಡಿಗೆ ರವಾನಿಸಲಿದೆ. ಸೂರ್ಯನ ಹೊರಕವಚದ ಭಾಗಗಳಾಗಿರುವ ಫೋಟೋಸ್ಪಿಯರ್‌, ಕ್ರೋಮೋಸ್ಪಿಯರ್‌ ಮತ್ತು ಕರೊನಾದ ಬಗೆಗೆ ಸಂಶೋಧನೆ ಕೈಗೊಳ್ಳುವ ಜತೆಯಲ್ಲಿ ಸೂರ್ಯನಿಂದ ಚಿಮ್ಮುವ ಕಾಂತಿ ಸಮೂಹ, ಸೌರ ಕಲೆಗಳು, ವಿದ್ಯುತ್ಕಾಂತೀಯ ಕಿರಣಗಳು, ತಾಪಮಾನದಲ್ಲಿನ ಬದಲಾವಣೆಗಳು, ಸೌರ ಮಾರುತಗಳ ಸಹಿತ ವಿವಿಧ ಅಂಶಗಳ ಬಗೆಗೆ ಈ ಉಪಗ್ರಹ ಅಧ್ಯಯನ ನಡೆಸಲು ವಿಜ್ಞಾನಿಗಳಿಗೆ ನೆರವಾಗಲಿದೆ.

ಆದಿತ್ಯ-ಎಲ್‌ 1 ಉಪಗ್ರಹದ ಉಡಾವಣೆಗೆ ಸಜ್ಜಾಗಿರುವ ಭಾರತೀ ಯ ಬಾಹ್ಯಾಕಾಶ ವಿಜ್ಞಾನಿಗಳ ಈ ಸಾಹಸವನ್ನು ಕಣ್ತುಂಬಿಕೊಳ್ಳಲು ದೇಶ ಮಾತ್ರವಲ್ಲದೆ ಇಡೀ ವಿಶ್ವದ ಜನತೆ ಕಾತರವಾಗಿದೆ. ಸೂರ್ಯನ ಸಂಶೋ ಧನೆಯ ಕಾರ್ಯದಲ್ಲಿ ಈಗಾಗಲೇ ವಿದೇಶಿ ಉಪಗ್ರಹಗಳು ತೊಡಗಿಕೊಂಡಿವೆ. ಈ ನಿಟ್ಟಿನಲ್ಲಿ ವಿಶ್ವದ ಬಲಾಡ್ಯ ರಾಷ್ಟ್ರಗಳು ಈ ಹಿಂದೆ ಸಾಕಷ್ಟು ಪ್ರಯತ್ನ ನಡೆಸಿವೆಯಾದರೂ ಹೆಚ್ಚಿನವು ಸೂರ್ಯನ ಉರಿಯಲ್ಲಿ ಸುಟ್ಟು ಭಸ್ಮವಾಗಿವೆ. ಭಾರತ ಮತ್ತು ಇಸ್ರೋದ ಪಾಲಿಗೆ ಇದು ಮೊದಲ ಪ್ರಯತ್ನವಾದರೂ ಬಾಹ್ಯಾಕಾಶಕ್ಕೆ ಈಗಾಗಲೇ ಸಾಕಷ್ಟು ಉಪಗ್ರಹಗಳನ್ನು ರವಾನಿಸಿದ ಅನುಭವ ಹೊಂದಿರುವ ಪರಿಣತ ವಿಜ್ಞಾನಿಗಳು ದಿನಕರನ ಕದ ತಟ್ಟುವ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ.

ಸರಕಾರದಿಂದಲೂ ಇಸ್ರೋ ವಿಜ್ಞಾನಿಗಳ ಈ ಮಹತ್ವಾಕಾಂಕ್ಷೆಯ ಯೋಜನೆಗೆ ಸಂಪೂರ್ಣ ಸಹಕಾರ ಮತ್ತು ಅಗತ್ಯ ಆರ್ಥಿಕ ನೆರವು ಲಭಿಸಿದ್ದು ದೇಶದ ಜನರೂ ವಿಜ್ಞಾನಿಗಳಿಗೆ ಶುಭಹಾರೈಕೆಗಳ ಸುರಿಮಳೆಗರೆದಿದ್ದಾರೆ. ದೇಶದ ಬಾಹ್ಯಾಕಾಶ ವಿಜ್ಞಾನಿಗಳ ಮಹತ್ವಾಕಾಂಕ್ಷೆ ಈಡೇರಿ ಆದಿತ್ಯ-ಎಲ್‌1 ಉಪಗ್ರಹ ಯಶಸ್ವಿಯಾಗಿ ನಿಗದಿತ ಕಕ್ಷೆ ಸೇರಲಿ ಎಂಬುದು ದೇಶವಾಸಿಗಳೆಲ್ಲರ ಹಾರೈಕೆ ಮಾತ್ರವಲ್ಲದೆ ಹೆಬ್ಬಯಕೆ ಕೂಡ.

Advertisement

Udayavani is now on Telegram. Click here to join our channel and stay updated with the latest news.

Next