Advertisement
ಭಾರತ ಸಂವಿಧಾನದ ಹುಟ್ಟು ಬೆಳವಣಿಗೆಯ ಯಶೋಗಾಥೆಯನ್ನು ನೆನಪಿಸಿಕೊಂಡಾಗ ನಮ್ಮ ಸಂವಿಧಾನ ಕಾನೂನು ತಜ್ಞರ ಅಪರಿಮಿತ ಪರಿಶ್ರಮ, ಜ್ಞಾನ, ಅನುಭವದ ಮೂಸೆಯಲ್ಲಿ ಹುಟ್ಟಿಬಂದ ನಮ್ಮೆಲ್ಲರ ಬದುಕನ್ನು ಕಟ್ಟುವ ರೂಪಿಸುವ ಮಹಾಕಾವ್ಯ ಅನ್ನುವುದು ವೇದ್ಯವಾಗುತ್ತದೆ. ಸಂವಿಧಾನದ ರಚನಾ ಸಭೆ ಒಟ್ಟು ಎರಡು ವರ್ಷ, ಹನ್ನೊಂದು ತಿಂಗಳು ಹದಿನೆಂಟು ದಿನಗಳನ್ನು ತೆಗೆದುಕೊಂಡು, ಸುಮಾರು 165ಗಂಟೆಗಳ ಅಧಿವೇಶನವನ್ನು ಹಮ್ಮಿಕೊಂಡು ನಮಗೊಂದು ಭವ್ಯವಾದ ಸಂವಿಧಾನವನ್ನು ರೂಪಿಸಿ ಕೊಟ್ಟ ಕೀರ್ತಿ ಭಾರತ ಸಂವಿಧಾನದ ಸಮಿತಿಗೆ ಸಲ್ಲುತ್ತದೆ. 1949 ನವಂಬರ್ 26ರಂದು ಸಂವಿಧಾನಕ್ಕೆ ಒಪ್ಪಿಗೆ ಕೊಟ್ಟ ದಿನವಾದ ಇಂದು ಭಾರತ ಸಂವಿಧಾನದ ಹುಟ್ಟು ದಿನವಾಗಿ ಆಚರಿಸುತ್ತಿ¤ದ್ದೇವೆ. 1950 ಜನವರಿ 26ರಂದು ಇದು ಅಧಿಕೃತವಾಗಿ ಜಾರಿಗೆ ಬಂದ ದಿನವೂ ಹೌದು.
Related Articles
Advertisement
ಪ್ರಜಾಸತ್ತಾತ್ಮಕ ಪದದಲ್ಲಿ ಪ್ರಜಾಪ್ರಭುತ್ವದ ಎಲ್ಲ ಸತ್ವ- ತತ್ವಗಳನ್ನು ಮೈಗೂಡಿಸಿಕೊಂಡು ಉತ್ತರದಾಯಿತ್ವವುಳ್ಳ; ಸಂಸದೀಯ ಸರಕಾರವನ್ನು ರೂಪಿಸುವ ಹೊಣೆಗಾರಿಕೆಯನ್ನು ಬಿಂಬಿಸಲಾಗಿದೆ. ಪರಮಾಧಿಕಾರ ಪದದಲ್ಲಿ ಜನರು ತಮಗೆ ಬೇಕಾಗುವ ಸರಕಾರ; ಕಾನೂನು ರೂಪಿಸಿಕೊಳ್ಳುವ ಅಥವಾ ಕಾಲಕಾಲಕ್ಕೆ ತಿದ್ದುಪಡಿ ಮಾಡಿಕೊಳ್ಳುವ ಸರ್ವ ಶ್ರೇಷ್ಠ ಅಧಿಕಾರವನ್ನು ಜನರ ಕೈಗೆ ನೀಡಲಾಗಿದೆ. ಇದನ್ನೇ ಸಂವಿಧಾನದ 368ನೇ ವಿಧಿಯಲ್ಲಿ ಸಂವಿಧಾನದ ತಿದ್ದುಪಡಿ ವಿಧಾನಗಳ ಕುರಿತು ಸಮಗ್ರವಾಗಿ ಚಿತ್ರಿಸಲಾಗಿದೆ.
ಸಂವಿಧಾನ ಅನ್ನುವುದು ದೇಶದ ಶ್ರೇಷ್ಠ ಕಾನೂನು- ಮಾತ್ರವಲ್ಲ ಸಂವಿಧಾನ ನಿಂತ ನೀರಾಗಬಾರದು. ಬದಲಾಗಿ ಕಾಲಕ್ಕೆ ಅನುಗುಣವಾಗಿ ತಿದ್ದುಪಡಿ ಮಾಡಿಕೊಳ್ಳುವ ಗುಣಹೊಂದಿರಬೇಕು. ಇದು ಯಾವುದೇ ಸಂವಿಧಾನದ ಜೀವಂತಿಕೆಯ ಲಕ್ಷಣವೂ ಹೌದು. ಭಾರತೀಯ ಸಂವಿಧಾನ ಕೂಡಾ ಇದಕ್ಕೆ ಹೊರತಾಗಿಲ್ಲ. ಕಾಲ, ಅಗತ್ಯಗಳಿಗೆ ಅನುಗುಣವಾಗಿ ಜನರ ಆಶೋತ್ತರಗಳಿಗೆ ಸ್ಪಂದಿಸುವ ತರದಲ್ಲಿ ಸಾಕಷ್ಟು ತಿದ್ದುಪಡಿಗಳಿಗೂ ಒಳಪಟ್ಟು ಬೆಳೆದು ಬಂದಿದೆ. ಹಾಗಾಗಿ ಇದೊಂದು ಜೀವಂತಿಕೆಯ ಮಾದರಿ ಸಂವಿಧಾನ ಅನ್ನಿಸಿಕೊಂಡಿದೆ. ಭಾರತದ ಸಂವಿಧಾನ ಅನ್ನುವುದು ಈ ನೆಲದ ಶ್ರೇಷ್ಠ ಗ್ರಂಥ. ಅದೊಂದು ಸೈದ್ಧಾಂತಿಕ ನೆಲೆಗಟ್ಟು. ಇಲ್ಲಿ ಸರಕಾರ ಅನ್ನುವುದು ಚಲಿಸುವ ಆಡಳಿತ ಯಂತ್ರ. ಸಂವಿಧಾನ ಮತ್ತು ಸರಕಾರ ಒಂದೇ ದಿಕ್ಕಿನಲ್ಲಿ ಶ್ರಮಿಸಿದಾಗ ಜನರಿಗೆ ಯಾವುದೇ ಗೊಂದಲವಾಗಲಿ; ಸಂಶಯವಾಗಲಿ ಉಂಟಾಗುವುದಿಲ್ಲ. ಜನರಿಗೂ ಕೂಡಾ ವ್ಯವಸ್ಥೆಯ ಮೇಲೆ ವಿಶ್ವಾಸ ನಂಬಿಕೆ ಮೂಡಿಬರುತ್ತದೆ. ಇದರಿಂದಾಗಿ ರಾಷ್ಟ್ರದಲ್ಲಿ ನ್ಯಾಯ, ಸಮಾನತೆ, ಐಕ್ಯತೆ ಪ್ರಾಪ್ತವಾಗುತ್ತದೆ.
ಶಿಕ್ಷಣ ತಜ್ಞರು, ಸಂವಿಧಾನ ಸಮಿತಿಯ ಸದಸ್ಯರಾದ ಡಾ| ಎಸ್. ರಾಧಾ ಕೃಷ್ಣನ್‌ರವರ ಮಾತನ್ನು ನೆನಪಿಸಿಕೊಳ್ಳುವುದು ಇಂದಿನ ಪರಿಸ್ಥಿತಿಯಲ್ಲಿ ಹೆಚ್ಚು ಪ್ರಸ್ತುತವೆನ್ನಿಸಿಕೊಳ್ಳುತ್ತದೆ. ದಿನದ ಊಟ, ಕೆಲಸಕ್ಕಾಗಿ ಅಲೆದಾಡುವ, ಹಸಿವಿನಿಂದ ಬಳಲುವ, ಕಿತ್ತು ತಿನ್ನುವ ಬಡತನವುಳ್ಳ ಜನರಿಗೆ, ಸಂವಿಧಾನ ಕಾನೂನು, ಸಮಾನತೆಯಂತಹ ಸಾಂವಿಧಾನಿಕ ಪದಗಳು ಎಷ್ಟರ ಮಟ್ಟಿಗೆ ಅರ್ಥೈಸಲು ಸಾಧ್ಯ. ಹಾಗಾಗಿ ಸಂವಿಧಾನಕ್ಕೆ ಜೀವಂತಿಕೆ ಬರಬೇಕಾದರೆ ಮೊದಲು ನಾವು ಮಾಡಬೇಕಾದದ್ದು, ಸಂವಿಧಾನದ ಮೂಲಭೂತ ಆಶಯಗಳನ್ನು ಪೂರೈಸಲು ಸಾಧ್ಯವಾದಾಗ ಮಾತ್ರ; ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಅಕ್ಷರಗಳಿಗೂ ಮೌಲ್ಯ ತುಂಬಿ ಬರುತ್ತದೆ.
– ಪ್ರೊ| ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ