ಜು.28ಕ್ಕೆ ಉದ್ಘಾಟನೆಗೊಂಡ ಕಾಮನ್‌ವೆಲ್ತ್ ಗೇಮ್ಸ್ ಆ.8ಕ್ಕೆ ಮುಗಿದುಹೋಗಿದೆ. ಲಾನ್ ಬೌಲ್ಸ್‌ನಂತಹ ಭಾರತಕ್ಕೆ ತೀರಾ ಅಪರಿಚಿತ ಎನಿಸಿದ್ದ ಕ್ರೀಡೆಯಲ್ಲೂ ನಾವು ಪದಕ ಗೆದ್ದಿದ್ದೇವೆ. 2018ರ ಗೋಲ್ಡ್ ಕೋಸ್ಟ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಶೂಟಿಂಗ್ ಇತ್ತು. ಆಗ ಶೂಟಿಂಗ್‌ನ 16 ಪದಕ ಸೇರಿ ಭಾರತಕ್ಕೆ ಬಂದಿದ್ದು ಒಟ್ಟು 66 ಪದಕಗಳು. ಈ ಬಾರಿ ಶೂಟಿಂಗ್ ನಡೆದಿಲ್ಲ. ಅದರ ಗೈರಿನಲ್ಲೂ ಭಾರತೀಯರ ಒಟ್ಟು ಪದಕಗಳ ಸಂಖ್ಯೆ 61! ಅಂದರೆ ಇಲ್ಲಿ ಕಡಿಮೆಯಾಗಿದ್ದು ಕೇವಲ 5 ಪದಕಗಳು! ಇದರರ್ಥ ಇಷ್ಟೇ: ಭಾರತೀಯರು ಉಳಿದ ಕ್ರೀಡೆಗಳಲ್ಲಿ ಬಹಳ ಪ್ರಗತಿ ಸಾಧಿಸಿದ್ದಾರೆ. ಶೂಟಿಂಗ್ ಇಲ್ಲವೆಂಬ ಕಾರಣಕ್ಕೆ ಪದಕಪಟ್ಟಿ ಸೊರಗಲು ಬಿಟ್ಟಿಲ್ಲ. ಭಾರತೀಯರ ಪಾಲಿಗೆ ಇದು ಆಶಾದಾಯಕ ಸಂಗತಿ.
ಈ ಬಾರಿ ವೇಟ್‌ಲಿಫ್ಟಿಂಗ್ ಮೂಲಕ ಭಾರತೀಯರ ಪದಕ ಬೇಟೆ ಆರಂಭವಾಯಿತು. ಕುಸ್ತಿ, ಬಾಕ್ಸಿಂಗ್, ಬ್ಯಾಡ್ಮಿಂಟನ್, ಟಿಟಿಗಳಲ್ಲಿ ಅದ್ಭುತ ಸಾಧನೆ ಮಾಡಿದೆ. ಮಹಿಳಾ ಟಿ20, ಮಹಿಳಾ ಹಾಕಿಯಲ್ಲಿ ಅಂತಿಮ ಹಂತದಲ್ಲಿ ಭಾರತಕ್ಕೆ ನಿರಾಶೆ ಎದುರಾದರೂ, ಇಲ್ಲಿ ತಂಡದ ಆಟದ ಗುಣ ಮಟ್ಟದಲ್ಲಿ ಭಾರೀ ಏರಿಕೆಯಾಗಿದ್ದು ಮುಖ್ಯವಾಗುತ್ತದೆ. ಪುರುಷರ ಹಾಕಿಯಲ್ಲಿ ಭಾರತೀಯರು ನಿರೀಕ್ಷೆಯಂತೆ ಫೈನಲ್‌ಗೇರಿದರೂ ಆಸ್ಟ್ರೇಲಿಯ ದ ಅಭೇದ್ಯ ಕೋಟೆಯೆದುರು ಮತ್ತೆ ವೈಫಲ್ಯ ಅನುಭವಿಸಿ, ಬೆಳ್ಳಿಗೆ ಸಮಾಧಾನಪಟ್ಟರು. ಇಲ್ಲಿ ಮಾತ್ರ ಭಾರತ ಸುಧಾರಿಸಲೇ ಬೇಕಾಗಿದೆ!
ವಿಶೇಷವೆಂದರೆ ಭಾರತೀಯರು ಹೆಸರೇ ಕೇಳಿರದ ಲಾನ್ ಬೌಲ್ಸ್ ನಂತಹ ಕ್ರೀಡೆಯಲ್ಲೂ ಭಾರತಕ್ಕೆ ಒಂದು ಚಿನ್ನ, ಒಂದು ಬೆಳ್ಳಿ ಲಭಿಸಿದೆ. ಪ್ಯಾರಾ ಪವರ್‌ಲಿಫ್ಟಿಂಗ್, ಟೇಬಲ್ ಟೆನಿಸ್ ಸ್ಪರ್ಧೆಗಳಲ್ಲೂ ಪದಕಗಳು ಲಭಿ ಸಿದವು. ಇವೆಲ್ಲ ಐತಿಹಾಸಿಕ ಸಾಧನೆಗಳು. ಯಾವುದರಲ್ಲಿ ಹಿಂದೆಲ್ಲ ನಮಗೆ ನಿರೀಕ್ಷೆಗಳೇ ಇರಲಿಲ್ಲವೋ ಅಂತಹ ಕಡೆಯೂ ಭರವಸೆಗಳು ಹುಟ್ಟಿಕೊಂಡಿವೆ. ಬಹುಶಃ ಹೀಗೆಯೇ ಸಾಗಿದರೆ 2026 ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತೀಯರು ಅಗ್ರ 2 ಸ್ಥಾನಗಳಲ್ಲಿ ಒಂದು ಸ್ಥಾನ ಪಡೆಯುವುದು ಖಚಿತ.
ಈ ಬಾರಿ ಕುಸ್ತಿಯಲ್ಲಿ 6, ಟೇಬಲ್ ಟೆನಿಸ್ 4, ವೇಟ್‌ಲಿಫ್ಟಿಂಗ್, ಬಾಕ್ಸಿಂಗ್, ಬ್ಯಾಡ್ಮಿಂಟನ್‌ನಲ್ಲಿ ತಲಾ 3 ಚಿನ್ನದ ಪದಕಗಳು ಬಂದಿವೆ. ಈ ಸಾಧನೆಗಳನ್ನು ನಾವು ಮಹತ್ವದ್ದಾಗಿಯೇ ಪರಿಗಣಿಸಬೇಕು. ಭಾರತ ತೀವ್ರ ವೈಫಲ್ಯ ಕಾಣುತ್ತಿರುವ ಕ್ಷೇತ್ರವೆಂದರೆ ಅಥ್ಲೆಟಿಕ್ಸ್. ಇಲ್ಲಿ ಸುಧಾರಿಸಿಕೊಳ್ಳಲೇಬೇಕಾಗಿದೆ. ಭಾರತಕ್ಕೆ ಅಥ್ಲೆಟಿಕ್ಸ್ ಮೂಲಕ ಈ ಬಾರಿ ಬಂದಿದ್ದು 1 ಚಿನ್ನ, 4 ಬೆಳ್ಳಿ, 3 ಕಂಚು ಸೇರಿದಂತೆ ಒಟ್ಟು 8 ಪದಕಗಳು ಮಾತ್ರ. ಗರಿಷ್ಠ ಸ್ಪರ್ಧೆಗಳು ನಡೆಯುವ ವಿಭಾಗವಿದು. ಇಲ್ಲಿ ಯಾವುದೇ ದೇಶ ಕುಸಿತ ಕಂಡರೆ ಅದು ಒಟ್ಟಾರೆ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ. ಮುಂದಿನ ಒಲಿಂಪಿಕ್ಸ್‌ನಲ್ಲಿ ಹೆಚ್ಚು ಪದಕಗಳು ದಕ್ಕಬೇಕಾದರೆ ಅಥ್ಲೆಟಿಕ್ಸ್‌ನಲ್ಲಿ ಸುಧಾರಣೆ ಮುಖ್ಯವಾಗಿದೆ.
ಅಥ್ಲೆಟಿಕ್ಸ್ ಭಾರತದ ಪಾಲಿಗೆ ಮರಳುಗಾಡೇನು ಅಲ್ಲ. ಈ ಬಾರಿ ಟ್ರಿಪಲ್‌ಜಂಪ್‌ನಲ್ಲಿ ಭಾರತೀಯರೇ ಚಿನ್ನ ಮತ್ತು ಬೆಳ್ಳಿ ಗೆದ್ದುಕೊಂಡಿದ್ದಾರೆ. ಇದು ಶ್ರೇಷ್ಠ ಸಾಧನೆ. ಲಾಂಗ್‌ಜಂಪ್‌ನಲ್ಲಿ ಭಾರತಕ್ಕೆ ಕೇವಲ 1 ಸೆ.ಮೀ.ನಲ್ಲಿ ಚಿನ್ನ ತಪ್ಪಿದೆ. ಈ ಅಥ್ಲೀಟ್‌ಗಳೆಲ್ಲ ಮುಂದಿನ ಒಲಿಂಪಿಕ್ಸ್‌ಗೆ ಸಿದ್ಧವಾಗುತ್ತಿದ್ದಾರೆ. ಸಂಬಂಧಪಟ್ಟ ಕ್ರೀಡಾಸಂಸ್ಥೆಗಳು ಟೊಂಕಕಟ್ಟಿದರೆ ಮುಂದಿನ ದಿನಗಳಲ್ಲಿ ವಿಶ್ವ ಕ್ರೀಡಾರಂಗದಲ್ಲಿ ಭಾರತ ಪ್ರಬಲವಾಗುವುದರಲ್ಲಿ ಸಂಶಯವೇ ಇಲ್ಲ.