Advertisement

ಅಫ್ಘಾನಿಸ್ಥಾನದಲ್ಲಿ ಆದಷ್ಟು ಬೇಗನೇ ಶಾಂತಿ ನೆಲೆಸಲಿ

11:23 PM Aug 17, 2021 | Team Udayavani |

ಎಲ್ಲವೂ ನಾಟಕೀಯವೆಂಬಂತೆ ಕಳೆದ 10 ದಿನಗಳಲ್ಲೇ ಇಡೀ ಅಫ್ಘಾನಿಸ್ಥಾನ ದೇಶ ತಾಲಿಬಾನಿಗರ ಕಪಿಮುಷ್ಠಿಗೆ ಸಿಲುಕಿದೆ. ಅತ್ತ ಅಮೆರಿಕ ಸೇನೆ ಅಫ್ಘಾನಿಸ್ಥಾನದಿಂದ ಹೊರಹೋಗುವ ನಿರ್ಧಾರ ಮಾಡುತ್ತಿದ್ದಂತೆ, ತಮ್ಮ ಬಾಹುಗಳನ್ನು ಇನ್ನಷ್ಟು ವಿಸ್ತಾರ ಮಾಡಿಕೊಂಡ ತಾಲಿಬಾನ್‌ ಉಗ್ರರು, 10 ದಿನಗಳಲ್ಲಿ ಅಫ್ಘಾನಿಸ್ಥಾನದ ಒಂದೊಂದೇ ಪ್ರಾಂತ್ಯಗಳನ್ನು ವಶಪಡಿಸಿಕೊಂಡು ಸಾಗಿ ಕಡೆಗೆ ಕಾಬೂಲ್‌ ಅನ್ನು ವಶಕ್ಕೆ  ತೆಗೆದುಕೊಂಡಿದ್ದಾರೆ.

Advertisement

ಈಗಷ್ಟೇ ಅಫ್ಘಾನಿಸ್ಥಾನವನ್ನು ತಮ್ಮ ವಶಕ್ಕೆ ತೆಗೆದುಕೊಂಡಿರುವ ತಾಲಿಬಾನಿಗರು, ಕೊಂಚ ಬದಲಾಗಿದ್ದೇವೆ ಎಂದು ತೋರಿಸಲು ಯತ್ನಿಸುತ್ತಿ ದ್ದಾರೆ. ಹಿಂದೆ ಇದ್ದಂತೆ ಈಗ ನಾವಿಲ್ಲ. ಬದಲಾಗಿದ್ದೇವೆ, ಮಹಿಳೆಯರನ್ನು ಸಂತ್ರಸ್ತರ ರೀತಿ ನೋಡುವುದಿಲ್ಲ. ಅವರಿಗೂ ನಮ್ಮ ಸರಕಾರದಲ್ಲಿ ಸ್ಥಾನ ಕೊಡುತ್ತೇವೆ ಎಂಬ ರೀತಿಯ ಮಾತುಗಳನ್ನಾಡಿದ್ದಾರೆ. ಆದರೆ ತಮ್ಮ ಮಾತಿಗೆ ಎಷ್ಟು ಬದ್ಧರಾಗುತ್ತಾರೆ ಎನ್ನುವುದರ ಮೇಲೆ ಮುಂದಿನ ಎಲ್ಲ ಬೆಳವಣಿಗೆಗಳು ನಿಂತಿವೆ. ತಾಲಿಬಾನ್ನರ ಹುಟ್ಟು ಮತ್ತು ಅವರ ಈವರೆಗಿನ ನಡವಳಿಕೆಯನ್ನು  ನೋಡಿದರೆ ಸಹಜ­ವಾಗಿಯೇ ಇಂಥದ್ದೊಂದು ಆತಂಕ, ಭೀತಿ ವ್ಯಕ್ತವಾಗುತ್ತದೆ.

ಅಮೆರಿಕ ಹಾಗೂ ಐರೋಪ್ಯ ರಾಷ್ಟ್ರಗಳು ತಾಲಿಬಾನ್‌ ಸರಕಾರದ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರೆ, ಚೀನ, ಪಾಕಿಸ್ಥಾನ, ರಷ್ಯಾ, ಟರ್ಕಿ ದೇಶಗಳು ತಾಲಿಬಾನ್‌ ನೇತೃತ್ವದ ಸರಕಾರದ ಜತೆ ಕೆಲಸ ಮಾಡುವ ಇರಾದೆಯನ್ನೂ ವ್ಯಕ್ತಪಡಿಸಿವೆ. ಹಿಂದಿನ ಘನಿ ಸರಕಾರಕ್ಕಿಂತ ತಾಲಿಬಾನ್‌ ಆಡಳಿತವೇ ಉತ್ತಮ ಎಂಬರ್ಥದ ಹೇಳಿಕೆ ನೀಡುವ ಮೂಲಕ ರಷ್ಯಾ ದೇಶ, ಅಮೆರಿಕದ ವಿರುದ್ಧದ ನಿಲುವನ್ನು ಖಚಿತಪಡಿಸಿದೆ. ಮುಂದಿನ ದಿನಗಳಲ್ಲಿ  ಅಮೆರಿಕ ಸಾಮ್ರಾಜ್ಯಶಾಹಿ ವಿರುದ್ಧ ಈ ದೇಶಗಳು ಒಂದಾಗುವ ಲಕ್ಷಣವನ್ನು ಅಫ್ಘಾನಿಸ್ಥಾನದ ಬೆಳವಣಿಗೆಗಳು ಸ್ಪಷ್ಟಪಡಿಸುತ್ತಿವೆ.  ಹಾಗೆಯೇ ಉಳಿದ ದೇಶಗಳೂ ಈ ರೀತಿಯೇ ಅಫ್ಘಾನಿಸ್ಥಾನದ ತಾಲಿಬಾನ್‌ ಸರಕಾರದ ಜತೆ ಕೆಲಸ ಮಾಡಬೇಕಾದ ಪ್ರಮೇಯ ಬಂದರೂ ಬರಬಹುದು.

ಇದರ ನಡುವೆಯೇ, ಈ ಹಿಂದೆ ಅಫ್ಘಾನಿಸ್ಥಾನದ ಜತೆಗೆ ಮಧುರ ಬಾಂಧವ್ಯ ಇಟ್ಟುಕೊಂಡಿದ್ದ ಭಾರತ ಈಗ ಅತ್ಯಂತ ಸೂಕ್ಷ್ಮವಾಗಿ ಹೆಜ್ಜೆ ಇಡಬೇಕಾದ ಅನಿವಾರ್ಯತೆ ಇದೆ. ಪಾಕಿಸ್ಥಾನ ಮತ್ತು ಚೀನ ಜತೆಗೂಡಿ ತಾಲಿಬಾನಿಗೆ ಬೆಂಬಲ ನೀಡಿರುವ ಈ ಸಂದರ್ಭದಲ್ಲಿ ಭಾರತ ತನ್ನ ಭೌಗೋಳಿಕ ರಣತಾಂತ್ರಿಕ ಹಿನ್ನೆಲೆಯಲ್ಲಿ ಈ ಬೆಳವಣಿಗೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಅಫ್ಘಾನ್ನರಿಗೆ ಇ-ವೀಸಾ ಪ್ರಕಟಿಸುವ ಮೂಲಕ ಭಾರತ ಮೊದಲ ರಾಜತಾಂತ್ರಿಕ ಹೆಜ್ಜೆಯನ್ನು ಇಟ್ಟಿದೆ.

ಇಡೀ ಜಗತ್ತಿನ ಆಶಯವೊಂದೇ. ಯಾವುದೇ ಕಾರಣಕ್ಕೂ  ಅಫ್ಘಾನಿಸ್ಥಾನದಲ್ಲಿ ಮತ್ತೆ ರಕ್ತ ಹರಿಯಬಾರದು. ತಾಲಿಬಾನ್‌ ಉಗ್ರರು ತಮ್ಮ ಹಿಂಸಾತ್ಮಕ ಮಾರ್ಗ ಬಿಡಬೇಕು. ಈ ರೀತಿ ಬಾಳುತ್ತಾರೆಯೇ ಎಂಬುದನ್ನು ಕಾದು ನೋಡುವುದಷ್ಟೇ ಜಗತ್ತಿನ ಕೆಲಸವಾಗಿದೆ. ಅಫ್ಘಾನಿಸ್ಥಾನ ಮತಾಂಧ ಶಕ್ತಿಗಳ ಕಪಿಮುಷ್ಟಿಯಿಂದ ಹೊರಬಂದು ಇತರೆ ಪ್ರಜಾಸತ್ತಾತ್ಮಕ ರಾಷ್ಟ್ರಗಳ ದಾರಿ ಹಿಡಿದರೆ ಮಾತ್ರ ಅದನ್ನು ನಂಬಬಹುದು.

Advertisement

ಆದರೆ ಇದು ತಾಲಿಬಾನ್‌ ಜೈಶ್‌ ಎ ಮೊಹಮ್ಮದ್‌, ಅಲ್‌ ಕಾಯಿದಾ, ಐಸಿಸ್‌ ಸೇರಿದಂತೆ ಇತರ ಉಗ್ರ ಸಂಘಟನೆಗಳ ಜತೆ ಹೇಗೆ ವ್ಯವಹರಿಸಲಿದೆ ಎಂಬುದರ ಮೇಲೆ ನಿಂತಿದೆ.

Advertisement

Udayavani is now on Telegram. Click here to join our channel and stay updated with the latest news.

Next