Advertisement

ಕಸಾಪ ಪರಾವಲಂಬಿ ಆಗದಿರಲಿ

09:37 PM May 05, 2019 | Lakshmi GovindaRaj |

ಮೈಸೂರು: ಕನ್ನಡ ಸಾಹಿತ್ಯ ಪರಿಷತ್‌ ಪರಾವಲಂಬಿ ಸಂಸ್ಥೆಯಾಗದೇ ಸ್ವ ಅಸ್ತಿತ್ವವನ್ನು ಕಾಪಾಡಿಕೊಳ್ಳುವ ಅಗತ್ಯವಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ಹೇಳಿದರು.

Advertisement

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ಕಸಾಪ 105ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಕವಿಗೋಷ್ಠಿ -ಗೀತ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾವು ಬೇರೆ ಸಂಸ್ಥೆಗಳ ಪ್ರಾಯೋಜಕತ್ವದಿಂದ ಕಾರ್ಯಕ್ರಮಗಳನ್ನು ಮಾಡಿದರೆ, ನಮ್ಮನ್ನು ನಾವು ಕುಗ್ಗಿಸಿಕೊಂಡಂತೆ. ನಾವು ಸಮ್ಮೇಳನಗಳನ್ನು ಮಾಡಲು ಸರ್ಕಾರವನ್ನು ಸಂಪೂರ್ಣವಾಗಿ ಅವಲಂಬಿಸುವುದು ಸರಿಯಲ್ಲ ಎಂದು ಹೇಳಿದರು.

ಕಸಾಪ ಕೊಡುಗೆ ಅಪಾರ: ಕಸಾಪ ತನ್ನದೇ ಇತಿಹಾಸ, ಏಳು ಬೀಳುಗಳನ್ನು ಕಂಡಿದ್ದು, ರಾಜ್ಯಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ಒಂದು ವಿಶ್ವವಿದ್ಯಾಲಯ ಯಾವ ರೀತಿ ಕಾರ್ಯ ನಿರ್ವಹಿಸುತ್ತದೆಯೋ ಅದೇ ರೀತಿ ಕಸಾಪ ಬಯಲು ವಿಶ್ವವಿದ್ಯಾಲಯವಾಗಿ ಕಾರ್ಯನಿರ್ವಹಿಸುತ್ತಿದೆ.

ವಿಶ್ವವಿದ್ಯಾಲಯಗಳು ಬೋಧನಾತ್ಮಕ ಸ್ವರೂಪದಲ್ಲಿದ್ದರೆ, ಕಸಾಪ ನಾಡಿನಾದ್ಯಂತ ಭಾಷೆ, ಸಾಹಿತ್ಯ, ಕಲೆಯನ್ನು ಪಸರಿಸುವ ಮೂಲಕ ಬಯಲು ವಿವಿಯಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.

Advertisement

ಸ್ಪರ್ಧಾತ್ಮಕ ಚಟುವಟಿಕೆ ಅವಶ್ಯ: ಕಸಾಪ ಉಗಮ ನಂತರ ಧಾರವಾಡದ ವಿದ್ಯಾವರ್ಧಕ ಸಂಘ ಇವೆರಡರಲ್ಲೂ ಅತ್ಯುತ್ತಮ ಸ್ಪರ್ಧೆ ಏರ್ಪಟ್ಟಿತ್ತು. ಇದರಿಂದ ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಹೊಸ ಬದಲಾವಣೆಗಳಾದವು. ಸ್ಪರ್ಧೆ ಇಲ್ಲದೇ ಯಾವುದೇ ಬೆಳವಣಿಗೆ ಇರುವುದಿಲ್ಲ. ಸ್ಪರ್ಧಾತ್ಮಕ ರೀತಿಯಲ್ಲಿ ಸಂಸ್ಥೆಗಳು ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಆರೋಗ್ಯಯುತ ಸಮಾಜ ಕಟ್ಟಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ವಿದೇಶದಲ್ಲಿ ಕನ್ನಡ ಶ್ರೇಷ್ಠತೆ ಸಾರಿ: ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ನೆಲದಲ್ಲಿ ಆಳವಾಗಿ ಬೇರುಬಿಟ್ಟಿದ್ದು, ಇದು ಹೊರ ರಾಜ್ಯ ಮತ್ತು ವಿದೇಶಗಳಲ್ಲಿ ಕನ್ನಡದ ಶ್ರೇಷ್ಠತೆ ಸಾರಲು ಕುವೆಂಪು ಅವರ, “ನೀ ಮೆಟ್ಟುವ ನೆಲ ಅದೆ ಕರ್ನಾಟಕ-ನೀ ಕುಡಿಯುವ ನೀರ್‌ ಅದೆ ಕಾವೇರಿ’ ಎಂಬ ಸಾಲನ್ನು ಕಸಾಪ ತನ್ನ ಧ್ಯೇಯವಾಕ್ಯವನ್ನಾಗಿ ಮಾಡಿಕೊಳ್ಳಬೇಕಿದೆ. ಇದರಿಂದ ಮಾತ್ರ ನಾವುಗಳು ಎಲ್ಲಾ ರಾಜ್ಯ ಮತ್ತು ದೇಶಗಳಲ್ಲಿ ಕನ್ನಡದ ಪತಾಕೆ ಹಾರಿಸಲು ಸಾಧ್ಯ. ಇಲ್ಲವಾದರೆ ಕನ್ನಡ ನಮ್ಮ ರಾಜ್ಯಕ್ಕೆ ಮಾತ್ರ ಸೀಮಿತವಾಗುತ್ತದೆ ಎಂದರು.

ಭಾಷೆಯನ್ನು ವಿಸ್ತರಿಸಿ: ನಮ್ಮ ಕನ್ನಡ ಭಾಷೆ ತಂತ್ರಜ್ಞಾನದೊಂದಿಗೆ ಬೆರೆತುಹೋಗಿದೆ. ಜೊತೆಗೆ ಆಂಗ್ಲಭಾಷೆ ಜೊತೆಗೆ ಸರಿಸಮಾನವಾಗಿ ನಿಲ್ಲುವ ಎಲ್ಲಾ ಸಾಮರ್ಥಯವನ್ನು ಕನ್ನಡ ಭಾಷೆ ಹೊಂದಿದೆ. ಈ ನಿಟ್ಟಿನಲ್ಲಿ ನಮ್ಮ ಭಾಷೆಯನ್ನು ಎಲ್ಲಾ ಕಡೆ ವಿಸ್ತರಿಸುವ ಅಗತ್ಯವಿದೆ ಎಂದು ಸಲಹೆ ನೀಡಿದರು. ಕಸಾಪಕ್ಕೆ ನಡೆಯುವ ಚುನಾವಣೆಗಳು ಗೊಂದಲಕ್ಕೆ ಆಸ್ಪದ ನೀಡಬಾರದು. ನೈತಿಕ ಚುನಾವಣೆ ಪರಿಭಾಷೆ ಮೂಲಕ ಚುನಾವಣೆ ನಡೆಯಬೇಕೆಂದರು.

ವ್ಯವಸ್ಥೆ ವಿರುದ್ಧ ಮಾತನಾಡಿ: ಮಹಾರಾಣಿ ಕಲಾ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಬಿ.ವಿ.ವಸಂತಕುಮಾರ್‌, ಕೆಟ್ಟದ್ದನ್ನು ಒಳ್ಳೆಯದ್ದನ್ನಾಗಿ ಮಾಡುವುದಕ್ಕೆ ಸಾಹಿತ್ಯ ಇರುವುದು. ನಮ್ಮ ಪ್ರಜ್ಞೆಯಲ್ಲಿ ಪರಿವರ್ತನೆ ಆದರೆ ಮಾತ್ರ ಬದಲಾವಣೆ ಸಾಧ್ಯ. ಆದರೆ ನಮ್ಮ ಸಾಹಿತಿಗಳು ಇಂದು ಸತ್ಯವನ್ನು ಹೇಳಿದರೆ, ಇರುವ ಸ್ಥಾನಮಾನ ಕಳೆದುಕೊಳ್ಳುತ್ತೇನೆ ಎಂಬ ಭೀತಿಯಲ್ಲಿದ್ದಾರೆ. ಇದರಿಂದ ವ್ಯವಸ್ಥೆ ವಿರುದ್ಧ ಮಾತನಾಡಲು ಹಿಂಜರಿಯುತ್ತಿದ್ದಾರೆಂದರು.

ಕಾರ್ಯಕ್ರಮದಲ್ಲಿ 15ಕ್ಕೂ ಹೆಚ್ಚು ಮಂದಿ ಕವಿತೆ ವಾಚನ ಮಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಸಂಸ್ಕೃತಿ ಚಿಂತಕ ಡಾ.ಕೆ.ರಘುರಾಂ ವಾಜಪೇಯಿ, ಕವಿ ಡಾ.ಜಯಪ್ಪ ಹೊನ್ನಾಳಿ ಮತ್ತಿತರರು ಉಪಸ್ಥಿತರಿದ್ದರು.

ಸಂಬಳದಲ್ಲಿ 10 ರೂ. ಕೊಡಿ: ಸಮ್ಮೇಳನ ಮತ್ತು ಕಾರ್ಯಕ್ರಮಗಳಿಗೆ ಸರ್ಕಾರದಿಂದ ಅನುದಾನ ಪಡೆದುಕೊಂಡರೆ ಸರ್ಕಾರದ ತಪ್ಪುಗಳ ಬಗ್ಗೆ ನಾವು ಮಾತನಾಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ಅವರ ಋಣ ನಮ್ಮ ಮೇಲಿರುತ್ತದೆ.

ಅದಕ್ಕಾಗಿ ಸರ್ಕಾರಿ ಸಂಬಳ ಪಡೆಯುವ ಎಲ್ಲಾ ನೌಕರರು ತಮ್ಮ ಪ್ರತಿ ತಿಂಗಳ ಸಂಬಳದಲ್ಲಿ ಹತ್ತು ರೂ.ವನ್ನು ಕಸಾಪಕ್ಕೆ ನೀಡಿದರೆ, ಕನ್ನಡ ಸಾಹಿತ್ಯ ಪರಿಷತ್ತು ಸ್ವಂತ ಕೋಶವನ್ನು ಹೊಂದಿ, ನಿರ್ಭೀತಿಯಿಂದ ಕಾರ್ಯನಿರ್ವಹಿಸಲು ಸಹಾಯವಾಗುತ್ತದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next