Advertisement

ಚಿದಂಬರಂ ಬಂಧನ ತಾರ್ಕಿಕ ಅಂತ್ಯ ಸಿಗಲಿ

01:47 AM Aug 23, 2019 | Team Udayavani |

ಹಿರಿಯ ಕಾಂಗ್ರೆಸ್‌ ನಾಯಕ ಪಿ.ಚಿದಂಬರಂ ಅವರನ್ನು ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಕಟಕಟೆಗೆ ಎಳೆದು ತರುವಲ್ಲಿ ಸಿಬಿಐ ಕೊನೆಗೂ ಯಶಸ್ವಿಯಾಗಿದೆ. ಬುಧವಾರ ರಾತ್ರಿ ನಡೆದ ಸಿನಿಮೀಯ ಘಟನೆಗಳ ಬಳಿಕ ಚಿದಂಬರಂ ಸಿಬಿಐ ಬಂಧನಕ್ಕೆ ಒಳಗಾಗಿದ್ದಾರೆ. ಈ ಮೂಲಕ ಸೆರೆಯಾಗುವುದರಿಂದ ತಪ್ಪಿಸಿಕೊಳ್ಳಲು ಅವರು ಸುಮಾರು ಒಂದು ವರ್ಷ ನಡೆಸಿದ ಹೋರಾಟ ಮುಗಿದಂತಾಗಿದೆ.

Advertisement

ಐಎನ್‌ಎಕ್ಸ್‌ ಎಂಬ ಸಂಸ್ಥೆಯಿಂದ ಲಂಚ ಪಡೆದುಕೊಂಡ, ಏರ್‌ಸೆಲ್-ಮ್ಯಾಕ್ಸಿಸ್‌ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡಿದ, ವಿದೇಶಿ ಹೂಡಿಕೆ ನಿಯಮ ಉಲ್ಲಂಘಿಸಿ ಹಾಗೂ ಹಣಕಾಸು ಸಚಿವರಾಗಿರುವ ಸಂದರ್ಭದಲ್ಲಿ ಅಧಿಕಾರ ಮತ್ತು ಪ್ರಭಾವ ಬಳಸಿ ಪುತ್ರ ಕಾರ್ತಿ ಚಿದಂಬರಂ ಅವರಿಗೆ ಅಕ್ರಮ ಹಣಕಾಸು ವ್ಯವಹಾರಗಳನ್ನು ನಡೆಸಲು ಅನುಕೂಲ ಮಾಡಿಕೊಟ್ಟಂಥ ಹಲವು ಗಂಭೀರವಾದ ಆರೋಪಗಳು ಚಿದಂಬರಂ ಮೇಲಿವೆ. ಈ ಪೈಕಿ, ಪುತ್ರಿಯ ಹತ್ಯೆ ಆರೋಪದಲ್ಲಿ ಜೈಲು ಪಾಲಾಗಿರುವ ಐಎನ್‌ಎಕ್ಸ್‌ ಪಾಲುದಾರೆ ಇಂದ್ರಾಣಿ ಮುಖರ್ಜಿ ನೀಡಿದ ಹೇಳಿಕೆ ಈಗ ಚಿದಂಬರಂ ಕೊರಳಿಗೆ ಸುತ್ತಿಕೊಂಡಿದೆ.

2007ರಿಂದಲೇ ಚಿದಂಬರಂ ವಿರುದ್ಧ ಅವ್ಯವಹಾರದ ಆರೋಪಗಳು ಕೇಳಿ ಬಂದಿದ್ದವು. ಆದರೆ ಆಗ ಯುಪಿಎ ಸರಕಾರವೇ ಅಧಿಕಾರದಲ್ಲಿದ್ದ ಕಾರಣ ತನಿಖೆಗೆ ಹೆಚ್ಚಿನ ಬಲ ಬಂದಿರಲಿಲ್ಲ. 2014ರಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದ ಬಳಿಕ ತನಿಖೆಯನ್ನು ಚುರುಕುಗೊಳಿಸಲಾಯಿತಾದರೂ ಚಿದಂಬರಂಗೆ ಕಾನೂನಿನ ಕುಣಿಕೆ ಬಿಗಿಯಲು ಸಿಬಿಐಗೆ ಆರು ವರ್ಷ ಹಿಡಿಯಿತು. ಈ ನಡುವೆ ಕಾರ್ತಿ ಒಂದು ತಿಂಗಳ ಮಟ್ಟಿಗೆ ಜೈಲುವಾಸ ಅನುಭವಿಸಿ ಬಂದಾಗಿದೆ. ಚಿದಂಬರಂ ಪತ್ನಿ ನಳಿನಿ ಮೇಲೂ ಶಾರದಾ ಹಗರಣದಲ್ಲಿ ಶಾಮೀಲಾದ ಆರೋಪವಿದ್ದು, ಇಡೀ ಕುಟುಂಬವೇ ಪ್ರಸ್ತುತ ಕಾನೂನಿನ ಸಿಕ್ಕಿನಲ್ಲಿ ಸಿಲುಕಿದೆ.

ಕೋರ್ಟ್‌ ನಿರೀಕ್ಷಣ ಜಾಮೀನು ನೀಡಲು ನಿರಾಕರಿಸಿದಾಗಲೇ ಬಂಧನ ವಾಗುವುದು ಬಹುತೇಕ ಖಾತರಿಯಾಗಿತ್ತು. ಆದರೆ ಕಾನೂನಿಂದ ತಪ್ಪಿಸಿ ಕೊಳ್ಳಲು ಚಿದಂಬರಂ ಕೊನೇ ಗಳಿಗೆಯಲ್ಲಿ ನಡೆಸಿದ ಪ್ರಯತ್ನಗಳು ಮಾತ್ರ ಅವರಂಥ ಘನ ಸ್ಥಾನಮಾನವನ್ನು ಹೊಂದಿರುವ ವ್ಯಕ್ತಿಗೆ ತಕ್ಕುದಾಗಿರಲಿಲ್ಲ. ಇಡೀ ದಿನ ತಲೆಮರೆಸಿಕೊಂಡು ರಾತ್ರಿ ಹೊತ್ತು ಪಕ್ಷದ ಕಚೇರಿಯಲ್ಲಿ ಕಾಣಿಸಿ ಕೊಂಡು ಪತ್ರಿಕಾಗೋಷ್ಠಿ ನಡೆಸಿದ್ದು, ಬಳಿಕ ಮನೆಗೆ ಹೋಗಿ ಗೇಟು, ಬಾಗಿಲಿಗೆ ಬೀಗವಿಕ್ಕಿ ಅಡಗಿಕೊಂಡದ್ದೆಲ್ಲ ಮಾಮೂಲು ಅಪರಾಧಿಗಳು ನಡೆಸುವ ತಂತ್ರಗಳು. ಅಧಿಕಾರಿಗಳು ಗೋಡೆ ಹತ್ತಿಕೊಂಡು ಹೋಗಿ ಅವರನ್ನು ಬಂಧಿಸಿ ಕರೆದೊಯ್ಯಬೇಕಾಯಿತು. ಈ ವರ್ತನೆಯಿಂದ ಚಿದಂಬರಂ ತಮ್ಮ ವ್ಯಕ್ತಿತ್ವದ ಜತೆಗೆ ಪಕ್ಷಕ್ಕ್ಕೂ ಸಾಕಷ್ಟು ಹಾನಿ ಮಾಡಿಕೊಂಡಿದ್ದಾರೆ.

ದಿಲ್ಲಿ ಹೈಕೋರ್ಟ್‌ ಜಾಮೀನು ನಿರಾಕರಿಸಿದಾಗಲೇ ತಮ್ಮ ನಿಲುವನ್ನು ವ್ಯಕ್ತಪಡಿಸಿ ಸಿಬಿಐ ಮುಂದೆ ಹೋಗಿದ್ದರೆ ಚಿದಂಬರಂ ತಮಗೆ ಮತ್ತು ಪಕ್ಷಕ್ಕೆ ಆಗುವ ಮುಜುಗರವನ್ನು ಸ್ವಲ್ಪಮಟ್ಟಿಗಾದರೂ ತಪ್ಪಿಸಬಹುದಿತ್ತು. ಕಾಂಗ್ರೆಸ್‌ನ ಘಟಾನುಘಟಿ ವಕೀಲರ ದಂಡೇ ಚಿದಂಬರಂ ಪರವಾಗಿ ವಾದಿಸಲು ನಿಂತಿರು ವುದರಿಂದ ಅವರಿಗೆ ಜಾಮೀನು ಪಡೆದುಕೊಳ್ಳುವುದು ಕಷ್ಟವಾಗಲಾರದು. ಕೇಸನ್ನು ಕೂಡ ಅವರು ಗೆದ್ದುಕೊಂಡರೆ ಆಶ್ಚರ್ಯಪಡುವಂಥದ್ದೇನಿಲ್ಲ. ಸಾಮಾನ್ಯವಾಗಿ ರಾಜಕಾರಣಿಗಳ ವಿರುದ್ಧವಿರುವ ಭ್ರಷ್ಟಾಚಾರ ಪ್ರಕರಣಗಳು ಬಿದ್ದು ಹೋಗುವುದೇ ಹೆಚ್ಚು. ಲಾಲೂ ಪ್ರಸಾದ್‌ ಯಾದವ್‌ರಂಥ ಕೆಲವು ಮಂದಿ ಇದಕ್ಕೆ ಅಪವಾದಗಳಿರಬಹುದು. ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಹಾಸುಹೊಕ್ಕಾಗಿರುವ ಭ್ರಷ್ಟಾಚಾರಕ್ಕೆ ಈ ಪ್ರಕರಣ ಇನ್ನೊಂದು ಸೇರ್ಪಡೆಯಷ್ಟೆ. ಮೋದಿ ಸರಕಾರ ಭ್ರಷ್ಟಾಚಾರ ನಿರ್ಮೂಲನೆಯೇ ತನ್ನ ಆದ್ಯತೆ, ಇದಕ್ಕೆ ಅಗತ್ಯವಿರುವ ನೀತಿ ಮಾರ್ಪಾಡು ಮಾಡಿದ್ದೇವೆ ಹಾಗೂ ತನಿಖಾ ಸಂಸ್ಥೆಗಳಿಗೆ ಮುಕ್ತ ಸ್ವಾತಂತ್ರ್ಯ ನೀಡಿದ್ದೇವೆ ಎಂದು ಹೇಳುತ್ತಿದೆ.

Advertisement

ಈ ಉದ್ದೇಶ ಪ್ರಾಮಾಣಿಕವೇ ಆಗಿದ್ದರೆ ಭವಿಷ್ಯದಲ್ಲಾದರೂ ದೇಶದ ರಾಜಕೀಯ ವ್ಯವಸ್ಥೆ ಸ್ವಚ್ಛವಾಗುವುದನ್ನು ನಿರೀಕ್ಷಿಸಬಹುದು. ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಸ್ವಾಗತಾರ್ಹವೇ. ಆದರೆ ಹೀಗೆ ಕೈಗೊಳ್ಳುವ ಕ್ರಮದ ಪ್ರಕ್ರಿಯೆಗಳೂ ಕ್ರಮಬದ್ಧವಾಗಿರಬೇಕು.

ರಾಜಕಾರಣಿಗಳ ವಿರುದ್ಧ ಕೈಗೊಳ್ಳುವ ಕಾನೂನು ಕ್ರಮಗಳಿಗೆ ಸೇಡಿನ ಅಥವಾ ರಾಜಕೀಯ ಲಾಭದ ಆರೋಪಗಳ ಕಳಂಕ ಹತ್ತಿಕೊಂಡರೆ ಭ್ರಷ್ಟಾಚಾರದ ವಿರುದ್ಧ ನಡೆಸುವ ಎಲ್ಲಾ ಹೋರಾಟಗಳು ನಿರರ್ಥಕಗೊಳ್ಳುವ ಅಪಾಯವಿದೆ. ಪ್ರಸ್ತುತ ಆಡಳಿತದಲ್ಲಿ ಇರುವವರು ತಮಗಾಗದವರ ಮೇಲಷ್ಟೇ ತನಿಖಾ ಸಂಸ್ಥೆಗಳನ್ನು ಛೂ ಬಿಡುತ್ತಿದ್ದಾರೆ ಎಂಬ ಆರೋಪವಿದೆ. ಬಿಜೆಪಿಗೆ ಸೇರುವವರ ಎಲ್ಲ ತಪ್ಪುಗಳಿಗೆ ಕ್ಷಮೆ ಸಿಗುತ್ತದೆ ಎಂಬ ಕುಹಕಗಳು ಸುಳ್ಳು ಎಂಬುದನ್ನು ಸರಕಾರ ಸಾಬೀತುಪಡಿಸುವ ಅಗತ್ಯವಿದೆ.

ಚಿದಂಬರಂರನ್ನು ಬಂಧಿಸಲು ತೋರಿಸಿದಷ್ಟೇ ಬದ್ಧತೆಯನ್ನು ಸಿಬಿಐ ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೊಯ್ಯಲು ತೋರಿಸಬೇಕಿದೆ. ಹೀಗಾದರೆ ಮಾತ್ರ ಉನ್ನತ ತನಿಖಾ ಸಂಸ್ಥೆಗಳ ಮೇಲಿನ ವಿಶ್ವಾಸಾರ್ಹತೆ ಉಳಿಯಲು ಸಾಧ್ಯ.

Advertisement

Udayavani is now on Telegram. Click here to join our channel and stay updated with the latest news.

Next