Advertisement
ಪರಸ್ಪರ ಸಹಕಾರ, ಸೌಹಾರ್ದತೆ, ಸಹಾಯ,ಅವಲಂಬನೆ, ತ್ಯಾಗ, ಪ್ರೀತಿ, ಸ್ನೇಹ ಎಲ್ಲವೂ ಒಂದು ಆರೋಗ್ಯ ಪೂರ್ಣ ಸಮಾಜದ ಲಕ್ಷಣಗಳು. ದಾನ ನೀಡುವುದು ಕೂಡಾ ಇದರಲ್ಲಿ ಪ್ರಮುಖವಾದುದು. ಸಾಮಾನ್ಯವಾಗಿ ಇರುವವರು ಇಲ್ಲದವರಿಗೆ ನೀಡುವಂತಹ ಯಾವುದೇ ರೀತಿಯ ವಸ್ತುಗಳಿರಲಿ ಹಣಕಾಸಿನ ಸಹಾಯವಿರಲಿ ಅದು ದಾನ ಎಂದು ಕರೆಯಲ್ಪಡುತ್ತದೆ.
Related Articles
Advertisement
ಈ ದಿನಗಳಲ್ಲಿ ಕಷ್ಟದಲ್ಲಿದ್ದವರಿಗೆ ಉಪಕಾರ ಮಾಡಿದ ಬಗೆಗೆ ದಾನ ನೀಡಿದ ಬಗೆಗೆ ಮಾಹಿತಿಯ ಜೊತೆಗೆ ದಾನ ಅಥವಾ ಸಹಾಯಧನ ನೀಡುತ್ತಿರುವ ತಮ್ಮ ಫೋಟೋಗಳನ್ನು ಪತ್ರಿಕೆಗಳಲ್ಲಿ ಹಾಕಿಕೊಳ್ಳುವುದು ಮಾಮೂಲಿ ಎನ್ನುವಂತಾಗಿಬಿಟ್ಟಿದೆ. ಕೆಲವೊಂದು ಸಂದರ್ಭದಲ್ಲಿ ಅದು ತಪ್ಪೇನಲ್ಲ. ಕೆಲವೊಮ್ಮೆ ಕಾನೂನಿನ ಪರಿಧಿಯಲ್ಲೂ ಅದು ಅವಶ್ಯಕವಾಗಿರಬಹುದು. ಆದರೆ ತೀರಾ ವೈಯಕ್ತಿಕವಾಗಿ ಬಡತನದಲ್ಲಿರುವವರಿಗೆ ಅನಾರೋಗ್ಯ ಪೀಡಿತರಿಗೆ, ಅಂಗವಿಕಲರಿಗೆ ಸಹಾಯವನ್ನು ನೀಡುವಾಗ ಅವರ ಜೊತೆಗೆ ನಿಂತು ಫೋಟೋಗಳನ್ನು ತೆಗೆಸಿಕೊಂಡು ಅದನ್ನು ಪತ್ರಿಕೆಗಳಲ್ಲಿ ಅಥವಾ ಇನ್ನಿತರ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಿಕೊಳ್ಳುವುದು ಕೆಲವರಿಗೆ ಒಂದು ರೀತಿಯ ಖಯಾಲಿ ಎನ್ನುವಂತಾಗಿಬಿಟ್ಟಿದೆ. ಇಂತಹ ನಿಲುವುಗಳು ಖಂಡಿತಾ ಸರಿಯಲ್ಲ.
ಇಂತಹ ಫೋಟೋಗಳು ಪ್ರಕಟವಾದಾಗ ಒಂದರ್ಥದಲ್ಲಿ ಅವು ಅವರ ಹೀನ ಸ್ಥಿತಿಯನ್ನು ಅವಮಾನಿಸುವಂತಿರುತ್ತವೆ. ಅಂತಹ ಚಿತ್ರಗಳು ಕೆಲವೊಮ್ಮೆ ಸಹಾಯ ಪಡೆದವರ ಕೀಳರಿಮೆಗೂ ಕಾರಣವಾಗಬಲ್ಲವು. ನಿಮ್ಮ ಫೋಟೋ ಬಂದಿದೆಯಲ್ಲಾ ಮರಾಯೆ ಅಂತ ಸುತ್ತಲಿನವರು ತಿಳಿಸಿದಾಗ ಬಹಳಷ್ಟು ಸಲ ಅದು ಒಂದು ರೀತಿಯ ಮುಜುಗರವನ್ನುಂಟು ಮಾಡಿ ಸಹಾಯ ಪಡೆದವರು ತಲೆತಗ್ಗಿಸುವಂತೆ ಮಾಡುತ್ತದೆ. ಕೆಲವು ಸಲ ಸಹಾಯ ಪಡೆದ ಅಪ್ಪ ಅಮ್ಮಂದಿರ ಚಿತ್ರಗಳು ಪತ್ರಿಕೆಗಳಲ್ಲಿ ಪ್ರಕಟವಾದಾಗ ಅವರ ಮಕ್ಕಳು ಸಮಾಜದ ಕೊಂಕು ಮಾತುಗಳಿಗೆ ತುತ್ತಾಗುವುದುಂಟು. ಎಷ್ಟೋ ಸಲ ಅಸಹಾಯಕನೊಬ್ಬನಿಗೆ ಕೆಲವು ಸಾವಿರಗಳನ್ನು ಕೊಟ್ಟು ದೊಡ್ಡ ದಾನಿ ತಾನೆಂದು ಬಿಂಬಿಸಿಕೊಳ್ಳುವ ಭರದಲ್ಲಿ ಅದನ್ನು ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟಿಸಿಕೊಳ್ಳುವ ಹುಚ್ಚುತನ ಹಲವರಲ್ಲಿದೆ. ಅಂತಹ ಸಹಾಯವನ್ನು ದಾನವೆನ್ನಲು ಸಾಧ್ಯವಿಲ್ಲ.
ಇತ್ತೀಚೆಗೆ ನಾಲ್ಕು ಜನ ಕೇವಲ ಎರಡು ಬಾಳೆಹಣ್ಣನ್ನು ಮಂಚದ ಮೇಲೆ ಕುಳಿತಿರುವ ರೋಗಿಯೊಬ್ಬನಿಗೆ ನೀಡುತ್ತಿರುವ ಚಿತ್ರ ಜಾಲತಾಣಗಳಲ್ಲಿ ಬಹಳ ವೈರಲ್ ಆಗಿತ್ತು. ಇಂತಹ ಸಣ್ಣ ಪುಟ್ಟ ದಾನ ಮಾಡಿದ್ದನ್ನೆಲ್ಲಾ ಪೇಪರ್‌ಗಳಲ್ಲಿ ಹಾಕಲು ಹೊರಟರೆ ದಿನಪತ್ರಿಕೆಗಳ ಬದಲಿಗೆ ದಿನಪುಸ್ತಕಗಳನ್ನೇ ಮುದ್ರಿಸಬೇಕಾದೀತು.
ಒಟ್ಟಿನಲ್ಲಿ ಒಂದು ವಿಚಾರವನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ. ಬೇರೆಯವರಿಗೆ ಮಾಡುವ ಸಹಾಯ ಅವರನ್ನು ಬೇರಾವುದೇ ರೀತಿಯಲ್ಲಿ ಘಾಸಿಗೊಳಿಸುವಂತಿ ರಬಾರದು. ಅವರ ವ್ಯಕ್ತಿತ್ವವನ್ನು ಗೌರವವನ್ನು ಕುಂದಿಸ ಬಾರದು. ದಾನ ಮಾಡಿದ್ದನ್ನು ನಾಲ್ಕು ಜನರಿಗೆ ತಿಳಿಸುವು ದಕ್ಕಿಂತ ನಾವು ಹೊಂದುವ ಆತ್ಮತೃಪ್ತಿ ದೊಡ್ಡದು. ಅಂತಹ ಮನೋಭಾವ ನಮ್ಮಲ್ಲಿ ಒಡಮೂಡಬೇಕು. ಪರೋಪ ಕಾರಾರ್ಥಂ ಇದಂ ಶರೀರಂ ಎನ್ನುವ ಮಾತಿಗನುಗುಣವಾಗಿ ಬದುಕಿರುವಷ್ಟು ದಿನ ನಮ್ಮಿಂದ ಸಾಧ್ಯವಾದಷ್ಟು ಸಹಾಯವನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಅರ್ಹರಿಗೆ ಮಾಡಿ ಆ ಮೂಲಕ ಅವರ ಮನೆ ಮನಗಳಲ್ಲಿ ಕೊಂಚವಾದರೂ ಬೆಳಕನ್ನು ಮೂಡಿಸಿದರೆ ಅದು ಜಗತ್ತಿನ ಶ್ರೇಷ್ಠ ದಾನ ಎನ್ನಿಸಿಕೊಳ್ಳುತ್ತದೆ.
ನರೇಂದ್ರ ಎಸ್. ಗಂಗೊಳ್ಳಿ