ಮಂಗಳೂರು/ಉಡುಪಿ: ಈ ಬಾರಿಯ ಪವಿತ್ರ ಹಜ್ ಯಾತ್ರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಮೊದಲ ತಂಡ ಮೇ 9ರಂದು ಬೆಂಗಳೂರಿನಿಂದ ಹೊರಡಲಿದ್ದು, ಪೂರ್ವಸಿದ್ಧತೆಗಳನ್ನು ಮಾಡಲಾಗಿದೆ ಎಂದು ಕರ್ನಾಟಕ ಹಜ್ ಸಮಿತಿ ಸದಸ್ಯ ಸಯ್ಯಿದ್ ಅಶ್ರಫ್ ಅಸ್ಸಖಾತ್ ತಂಙಳ್ ಆದೂರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ದ.ಕ. ಜಿಲ್ಲೆಯಿಂದ ಈ ಬಾರಿ 1,044 ಮಂದಿ ಹಾಗೂ ಉಡುಪಿ ಜಿಲ್ಲೆಯಿಂದ 79 ಮಂದಿ ಹಜ್ಜಾಜ್‌ಗಳು ಹೊರಡುತ್ತಿದ್ದಾರೆ. ಈಗಾಗಲೇ ಎಲ್ಲರಿಗೂ ರೋಗನಿರೋಧಕ ಲಸಿಕೆ ನೀಡಲಾಗಿದೆ.
ಬೆಂಗಳೂರಿನಿಂದ ರಾಜ್ಯ ಹಜ್ ಸಮಿತಿ ಅಧಿಕಾರಿಗಳು ಇದನ್ನು ಮಾಡಿದ್ದಾರೆ. ಪ್ರತಿದಿನ ಹಜ್ ಯಾತ್ರಾರ್ಥಿಗಳಿಗೆ ಯಾತ್ರೆಯ ವಿವರಗಳನ್ನು ನೀಡಲಾಗುತ್ತಿದೆ. ತಮ್ಮ ಯಾತ್ರೆಯ ಮುಂಚಿನ ದಿನ ಬ್ಯಾಗೇಜ್ ನೀಡಿ ಹಾಗೂ ಅವರ ವರದಿಗಳನ್ನು ಒಪ್ಪಿಸಿ ಪಾಸ್ ಪಡೆದುಕೊಳ್ಳಬೇಕಾಗುತ್ತದೆ. ಬಳಿಕ ಬೆಂಗಳೂರು ಹಜ್‌ಭವನದಿಂದಲೇ ವಿಮಾನ ನಿಲ್ದಾಣಕ್ಕೆ ಬಸ್ ವ್ಯವಸ್ಥೆ ಹಜ್ ಸಮಿತಿ ಮಾಡಿದೆ ಎಂದರು.
ನೇರ ವಿಮಾನಕ್ಕೆ ಆಗ್ರಹ: ದಕ್ಷಿಣ ಕನ್ನಡ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಬಿ.ಎ. ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಜ್ಜಾಜ್‌ಗಳು ಯಾತ್ರೆ ಹೋಗುತ್ತಿದ್ದು, ಕೋವಿಡ್ ಬಳಿಕ ಇದು ಸ್ಥಗಿತಗೊಂಡಿದೆ. ಈ ಕಾರಣದಿಂದ ಬೆಂಗಳೂರು ಮತ್ತು ಕೇರಳ ಮೂಲಕ ಯಾತ್ರೆ ಕೈಗೊಳ್ಳಲಾಗುತ್ತಿದೆ. ಮುಂದಿನ ವರ್ಷದಿಂದ ಹಜ್ ಯಾತ್ರೆಗೆ ಮಂಗಳೂರಿನಿಂದಲೇ ಆರಂಭಿಸಲು ಕೇಂದ್ರ ಸರಕಾರವನ್ನು ಈಗಾಗಲೇ ಆಗ್ರಹಿಸಲಾಗಿದೆ. ಇದರಿಂದ ದ.ಕ, ಉಡುಪಿ, ಚಿಕ್ಕಮಗಳೂರು, ಕೊಡಗು ಹಾಸನ ಭಾಗದ ಯಾತ್ರಾರ್ಥಿಗಳಿಗೆ ನೆರವಾಗಲಿದೆ ಎಂದರು.
ಬ್ಯಾರಿ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ, ದಿ ಮುಸ್ಲಿಂ ಸೆಂಟ್ರಲ್ ಹಾಜಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ, ಬಿ.ಎಸ್. ಬಷೀರ್ ಹಾಜಿ, ಜನಾಬ್ ಹನೀಫ್ ಹಾಜಿ ಗೊಳ್ತಮಜಲು, ಮುಹಮ್ಮದ್ ರಫೀಕ್ ಉಪಸ್ಥಿತರಿದ್ದರು.