Advertisement

ಮೇ 7: ಮತಗಟ್ಟೆಗಳಲ್ಲಿಯೇ ಫೋಟೋ ವೋಟರ್ ಸ್ಲಿಪ್‌

09:00 AM May 05, 2018 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಮತದಾರರಿಗೆ ‘ಫೋಟೋ ವೋಟರ್ ಸ್ಲಿಪ್‌’ಗಳನ್ನು ಬಿ.ಎಲ್‌.ಒ.ಗಳು ಮೇ 6ರವರೆಗೆ ಮನೆ ಮನೆಗೆ ತೆರಳಿ ಹಂಚಲಿದ್ದಾರೆ. ಬಾಕಿ ಉಳಿಯುವ ಸ್ಲಿಪ್‌ ಗಳನ್ನು ಹಾಗೂ ಸ್ಲಿಪ್‌ ಪಡೆಯಲು ಬಾಕಿ ಇರುವವರು ಮೇ 7ರಂದು ತಮ್ಮ ಕ್ಷೇತ್ರದ ಆಯಾಯ ಮತಗಟ್ಟೆಗಳಿಗೆ ತೆರಳಿ ಅಲ್ಲಿರುವ ಬಿ.ಎಲ್‌.ಒ.ಗಳಿಂದ ಸ್ಲಿಪ್‌ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಹಂಚಿಕೆಯಾಗದ ಉಳಿದ ಸ್ಲಿಪ್‌ ಗಳನ್ನು ಮೇ 7ರ ಅನಂತರ ಆಯಾ ಮತದಾರರ ನೋಂದಣಾಧಿಕಾರಿ (ಇಆರ್‌ಒ) ಅವರ ಸುಪರ್ದಿಗೆ ನೀಡಲಾಗುವುದು. ಆ ಬಳಿಕ ವೋಟರ್ ಸ್ಲಿಪ್‌ ಹಂಚಿಕೆ ಮಾಡಲಾಗುವುದಿಲ್ಲ ಎಂದು ದ.ಕ. ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ಸ್ಪಷ್ಟಪಡಿಸಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಮತದಾನದಂದು ಸ್ಲಿಪ್‌ ನೀಡುವುದಿಲ್ಲ. ಆದರೆ ಮೊದಲು ಪಡೆದ ಸ್ಲಿಪ್‌ ಇದ್ದರೆ, ಮತದಾನ ಮಾಡಲು ಬೇರೆ ಯಾವುದೇ ದಾಖಲೆಯ ಅಗತ್ಯ ಇಲ್ಲ. ಸ್ಲಿಪ್‌ ಇಲ್ಲದಿದ್ದರೆ ಯಾವುದಾದರೂ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರಬೇಕಾಗುತ್ತದೆ. ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರಿಗೆ ಮತದಾನಕ್ಕೆ ಅವಕಾಶ ಇಲ್ಲ ಎಂದು ಅವರು ತಿಳಿಸಿದರು.

ಈ ಬಾರಿ ಚುನಾವಣಾ ಕರ್ತವ್ಯಕ್ಕೆ ಒಟ್ಟು 10,980 ಪೋಲಿಂಗ್‌ ಸಿಬಂದಿ ಯನ್ನು ನೇಮಕ ಮಾಡಲಾಗಿದೆ. ಇದರಲ್ಲಿ 3,992 ಪುರುಷರು ಹಾಗೂ 6,988 ಮಹಿಳೆಯರು. ಇದರಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರಿ ನೌಕರರು ಮತ್ತು ಬ್ಯಾಂಕ್‌ ನೌಕರರೂ ಸೇರಿದ್ದಾರೆ. ಇವರೊಂದಿಗೆ ಗ್ರೂಪ್‌ ಡಿ ನೌಕರರು, ವಾಹನ ಚಾಲಕರು, ಪೊಲೀಸ್‌ ಸಿಬಂದಿಯೂ ಕರ್ತವ್ಯ ನಿರ್ವಹಿಸಲಿದ್ದಾರೆ. ಶೇ.20ರಷ್ಟು ಸಿಬಂದಿಯನ್ನು ಹೆಚ್ಚುವರಿಯಾಗಿ ಇರಿಸಿಕೊಳ್ಳಲಾಗುತ್ತದೆ ಎಂದರು.

ಮತದಾರರ ಪಟ್ಟಿಗೆ ನಕಲಿ ಮತದಾರರ ಹೆಸರುಗಳು ಸೇರ್ಪಡೆಯಾಗಿವೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಅದು ಸುಲಭವಲ್ಲ. ಒಂದು ವೇಳೆ ಹಾಗೇನಾದರೂ ಆದರೆ, ಮತದಾನಕ್ಕೆ ಆಗಮಿಸಿದಾಗ ಮತದಾರರ ಪಟ್ಟಿಯನ್ನು ಪರಿಶೀಲಿಸಿದಾಗ ಬೆಳಕಿಗೆ ಬರುತ್ತದೆ. ಈ ಬಾರಿ ವೋಟರ್‌ ಸ್ಲಿಪ್‌ ನಲ್ಲಿ ಕೂಡ ಭಾವಚಿತ್ರ ಸೇರಿದಂತೆ ಅಗತ್ಯ ಮಾಹಿತಿಗಳನ್ನು ಮುದ್ರಿಸಲಾಗಿದೆ. ಮತದಾರ ವೋಟರ್‌ ಸ್ಲಿಪ್‌ ಅಥವಾ ಗುರುತಿನ ಚೀಟಿ ತೋರಿಸಿದಾಗ ಅದರಲ್ಲಿರುವ ಭಾವಚಿತ್ರವು ಮತದಾರರ ಪಟ್ಟಿಯಲ್ಲಿರುವ ಭಾವಚಿತ್ರಕ್ಕೆ ಹೊಂದಾಣಿಕೆಯಾಗುತ್ತದೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ. ಅಲ್ಲದೆ ವಾಸ್ತವ್ಯದ ವಿವರಗಳನ್ನೂ ಗಮನಿಸಲಾಗುತ್ತದೆ. ಹೀಗಾಗಿ ನಕಲಿ ಮತದಾರರು ಪಟ್ಟಿಗೆ ಸೇರ್ಪಡೆಗೊಳಿಸಿದರೂ ಸುಲಭದಲ್ಲಿ ಮತದಾನ ಮಾಡುವಂತಿಲ್ಲ’ ಎಂದು ಸ್ಪಷ್ಟಪಡಿಸಿದರು.

ಎಳನೀರು: ದೂರದ ಮತಗಟ್ಟೆ
ದ.ಕ. ಜಿಲ್ಲೆಯಲ್ಲಿ ಬೆಳ್ತಂಗಡಿಯ ಎಳನೀರು ಮತಗಟ್ಟೆ ಬಹುದೂರದ ಮತಗಟ್ಟೆಯಾಗಿದೆ. ಮಲವಂತಿಕೆಯಿಂದ ಸುಮಾರು 120 ಕಿ.ಮೀ. ಸುತ್ತು ಬಳಸಿ ಮತಗಟ್ಟೆಯನ್ನು ತಲುಪಬೇಕಾಗಿದೆ. ಈ ಮತಗಟ್ಟೆಯಲ್ಲಿ ಮತದಾನಕ್ಕೆ ಬೇಕಾದ ಎಲ್ಲ ಸೌಕರ್ಯಗಳನ್ನು ಏರ್ಪಡಿಸಲಾಗುತ್ತಿದೆ. ಇದೇ ರೀತಿ ಬಾಂಜಾರು ಮಲೆ ಮತಗಟ್ಟೆಯಲ್ಲೂ ಸೌಲಭ್ಯ ಕಲ್ಪಿಸಲಾಗುವುದು ಎಂದರು. ಅಂಚೆ ಮತಪತ್ರಕ್ಕಾಗಿ ಅರ್ಜಿ ಸ್ವೀಕರಿಸಲು ಮೇ 5ರಂದು ಕೊನೆಯ ದಿನ. ಮತ ಎಣಿಕೆಯಂದು ಮೊದಲು ಅಂಚೆ ಮತಗಳನ್ನು ಎಣಿಕೆ ಮಾಡಲಾಗುತ್ತದೆ. ಅಂಚೆ ಮತಗಳನ್ನು ಬಾರ್‌ಕೋಡ್‌ ಸ್ಕ್ಯಾನಿಂಗ್‌ ಮೂಲಕ ಮತ ಎಣಿಕೆ ಪ್ರಕ್ರಿಯೆ ನಡೆಸಲಾಗುವುದು ಎಂದರು. ಅಪರ ಜಿಲ್ಲಾಧಿಕಾರಿ ವೈಶಾಲಿ ಉಪಸ್ಥಿತರಿದ್ದರು.

Advertisement

ಮತಗಟ್ಟೆಗಳಲ್ಲಿ ಪ್ಯಾರಾ ಮಿಲಿಟರಿ ಪಡೆ ಭದ್ರತೆ
ದ.ಕ. ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ಕೇಂದ್ರೀಯ ಪ್ಯಾರಾ ಮಿಲಿಟರಿ ಪಡೆ (ಸಿಪಿಎಂಎಫ್‌) ಭದ್ರತೆ ನಿರ್ವಹಿಸಲಿದೆ. ಇದಕ್ಕಾಗಿ ಸುಮಾರು 25 ಸಿಪಿಎಂಎಫ್‌ ಪಡೆ ಜಿಲ್ಲೆಗೆ ಆಗಮಿಸಲಿದೆ. ಪ್ರತಿ ಮೂರು ಮತಗಟ್ಟೆ ಇರುವಲ್ಲಿ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗುವುದು. ಮತಗಟ್ಟೆಯಲ್ಲಿ ಏನೇ ಸಮಸ್ಯೆ ಇದ್ದರೂ ಮೇಲಧಿಕಾರಿಗಳ ಗಮನಕ್ಕೆ ತರಬೇಕು. ಅಲ್ಲದೆ ಚುನಾವಣಾ ಪ್ರಚಾರದ ವೇಳೆ ಅಥವಾ ಮನೆಗಳಿಗೆ ತೆರಳಿ ಧರ್ಮ ನಿಂದನೆ ಹಾಗೂ ಧರ್ಮದ ಆಧಾರದಲ್ಲಿ ಮತ ಕೇಳಲು ಅವಕಾಶ ಇಲ್ಲ. ಈ ಬಗ್ಗೆ ದೂರುಗಳಿದ್ದರೆ ನೇರವಾಗಿ ದಿನದ 24 ಗಂಟೆ ಕಾರ್ಯನಿರ್ವಹಿಸುವ ಹೆಲ್ಪ್ಲೈನ್‌ (ಟೋಲ್‌ ಫ್ರೀ ನಂಬರ್‌-1800-425-2099 ಅಥವಾ 0824-2420002/ 8277163522)ಗಳನ್ನು  ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next