ಮಹಾನಗರ : ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಆಶ್ರಯದಲ್ಲಿ ಮೇ 27ರಂದು ಅಡ್ಯಾರ್‌ಗಾರ್ಡನ್ ನಲ್ಲಿ ನಡೆಯುವ ‘ಯಕ್ಷಧ್ರುವ ಪಟ್ಲ ಸಂಭ್ರಮ-2018’ ಕಾರ್ಯಕ್ರಮದ ಕುರಿತು ಪೂರ್ವಭಾವಿ ಸಭೆ ನಗರದ ಓಶಿಯನ್ ಪರ್ಲ್ಸ್ ಹೊಟೇಲ್ ಸಭಾಂಗಣದಲ್ಲಿ ಜರಗಿತು.
ಅಧ್ಯಕ್ಷತೆಯನ್ನು ಪಟ್ಲ ಫೌಂಡೇಶನ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ವಹಿಸಿದ್ದರು. ಕಾರ್ಯಕ್ರಮದ ಯಶಸ್ಸಿಗಾಗಿ ಈಗಾಗಲೇ ರಚಿಸಿರುವ 30 ಘಟಕಗಳಿಗೆ ಜವಾಬ್ದಾರಿಯನ್ನು ಹಂಚಿ ಕೊಡಲಾಯಿತು. ಕಾರ್ಯಕ್ರಮದಲ್ಲಿ ಪಟ್ಲ ಪ್ರಶಸ್ತಿ, ಯಕ್ಷಧ್ರುವ ಕಲಾ ಗೌರವ ಪ್ರಶಸ್ತಿಯ ಜತೆಗೆ ಈ ವರ್ಷ ಮರಣೋತ್ತರ ಪ್ರಶಸ್ತಿಯನ್ನು ನೀಡಲು ತೀರ್ಮಾನಿಸಲಾಯಿತು.
ಕಳೆದ ವರ್ಷ ಕಟೀಲು ನಾಲ್ಕನೇ ಮೇಳದಲ್ಲಿ ಪ್ರಧಾನ ಭಾಗವತರಾಗಿದ್ದ ಕುಬಣೂರು ಶ್ರೀಧರ ರಾವ್ ನಿಧನ ಹೊಂದಿದ್ದು, ಇದೀಗ ಅವರ ಸ್ಮರಣಾರ್ಥ ಅವರ ಕುಟುಂಬಸ್ಥರಿಗೆ ಮರಣೋತ್ತರ ಪ್ರಶಸ್ತಿಯ ಜತೆಗೆ 25 ಸಾವಿರ ರೂ. ನೀಡಲಾಗುವುದು ಎಂದು ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು.
ಕತಾರ್ ಘಟಕದ ಅಧ್ಯಕ್ಷ ರವಿ ಶೆಟ್ಟಿ ಮೂಡಂಬೈಲ್, ಪ್ರಭಾಕರ ಜೋಶಿ, ನಿಟ್ಟೆಗುತ್ತು ರವಿರಾಜ್ ಶೆಟ್ಟಿ, ಸವಣೂರು ಸೀತಾರಾಮ ರೈ, ಭುಜಬಲಿ, ನಿತ್ಯಾನಂದ ಶೆಟ್ಟಿ, ಡಾ| ಮನುರಾವ್, ಸಿ.ಎ. ಸುದೇಶ್ ಕುಮಾರ್, ಆರತಿ ಆಳ್ವ, ಜಯ ಶೆಟ್ಟಿ ಪಡುಬಿದ್ರಿ, ಸತೀಶ್ ಶಟ್ಟಿ ವಾಮಂಜೂರು, ಪ್ರೇಮನಾಥ್ ಶೆಟ್ಟಿ ಪಡುಬಿದ್ರಿ, ಗೋಪಾಲ ಶೆಟ್ಟಿ ಕಾರ್ಕಳ, ರಾಜೀವ್ ಪೂಜಾರಿ ಕೈಕಂಬ, ಜಗದೀಶ್ ಶೆಟ್ಟಿ ಉಪ್ಪಿನಂಗಡಿ ಪ್ರದೀಪ್ ಆಳ್ವ, ಗಿರೀಶ್ ಶೆಟ್ಟಿ ಕಟೀಲು, ಪಟ್ಲ ದಾಮೋದರ ಶೆಟ್ಟಿ, ಸಂತೋಷ್ ಶೆಟ್ಟಿ ಸುರತ್ಕಲ್ ಹಾಗೂ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಂಘಟನ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ ಪ್ರಸ್ತಾವನೆಗೈದರು. ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್ ಕಾರ್ಯಕ್ರಮ ನಿರ್ವಹಿಸಿದರು.