ಹುಬ್ಬಳ್ಳಿ: ಇದು ರಾಜಕೀಯ ಕಾಕತಾಳೀಯವೋ ಏನೋ, ಮೇ 23ರಂದು ದೇಶ, ವಿಶ್ವವೇ ಎದುರು ನೋಡುತ್ತಿರುವ ಬಹು ನಿರೀಕ್ಷಿತ ಲೋಕಸಭೆ ಚುನವಾಣೆ ಫಲಿತಾಂಶ ಪ್ರಕಟವಾಗಲಿದೆ. ಅದೇ ದಿನ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷ ಪೂರ್ಣಗೊಳ್ಳಲಿದೆ. ಫಲಿತಾಂಶ ಸಮ್ಮಿಶ್ರ ಸರ್ಕಾರಕ್ಕೆ ಸಂಭ್ರಮಾಚರಣೆ ತರುತ್ತದೆಯೋ ಅಥವಾ ಸೂತಕದ ಛಾಯೆ ಸೃಷ್ಟಿಸಲಿದೆಯೋ ಎಂಬುದು ಯಕ್ಷಪ್ರಶ್ನೆಯಾಗಿದೆ.
ರಾಜ್ಯದಲ್ಲಿನ ಪ್ರಸಕ್ತ ವಿದ್ಯಮಾನ ಮೇಲಿನ ಪ್ರಶ್ನೆಯನ್ನು ಹುಟ್ಟು ಹಾಕುವಂತೆ ಮಾಡಿದೆ. ಎಚ್. ಡಿ. ಕುಮಾರಸ್ವಾಮಿ ಅವರು 2018, ಮೇ 23ರಂದು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ದೇಶದ ವಿವಿಧ ಭಾಗಗಳ ಬಿಜೆಪಿಯೇತರ ನಾಯಕರು ಸಮಾರಂಭದಲ್ಲಿ ಭಾಗಿಯಾಗಿ ‘ಮಹಾಘಟಬಂಧನ್’ಕ್ಕೆ ಶ್ರೀಕಾರ ಹಾಕಿದ್ದರು.
ಮೇ 23ರಂದು ಲೋಕಸಭೆ ಚುನವಾಣೆ ಫಲಿತಾಂಶದ ಜತೆಗೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಸವಾಲೊಡ್ಡಬಹುದಾದ 2 ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶವೂ ಬರಲಿದೆ. ಮೇ 23ರ ನಂತರದಲ್ಲಿ ರಾಜ್ಯ ರಾಜಕೀಯದಲ್ಲಿ ಮಹತ್ವ ಬದಲಾವಣೆಗಳಾಗುತ್ತವೆ ಎಂಬ ನಿರೀಕ್ಷೆ, ಅನಿಸಿಕೆಗಳು ಯಾವ ಪರಿಣಾಮ ಬೀರಲಿವೆ ಎಂಬ ಕುತೂಹಲ ಹೆಚ್ಚಿಸುವಂತೆ ಮಾಡಿದೆ.
ಸವಾಲಿನ ಸರಮಾಲೆ: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಒಂದಲ್ಲ ಒಂದು ಸವಾಲು, ಅಸಮಾಧಾನ, ಆಪರೇಷನ್ ಕಮಲ ಭೀತಿ ಹೀಗೆ ಸಮಸ್ಯೆಗಳ ಸರಮಾಲೆಯನ್ನೇ ಸೃಷ್ಟಿಸಿದೆ. ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಲ್ಲಿ ಆರಂಭದಲ್ಲಿ ಪರಸ್ಪರ ವಿಶ್ವಾಸದ ಕೊರತೆ, ಹೊಂದಿಕೊಳ್ಳುವುದಕ್ಕೆ ಕಷ್ಟಕರ ಸ್ಥಿತಿ ಸಹಜ. ಆದರೆ, ಅಧಿಕಾರಕ್ಕೆ ಬಂದು ಒಂದು ವರ್ಷ ಪೂರ್ಣವಾಗುತ್ತಿದೆ. ಪಾಲುದಾರ ಪಕ್ಷಗಳ ನಾಯಕರಲ್ಲಿ ಹೊಂದಾಣಿಕೆ ಬದಲು ಅಸಮಾಧಾನದ ಕಂದಕ ಹೆಚ್ಚತೊಡಗಿದೆ. ಈಗಾಗಲೇ ಹಲವು ವಿಚಾರಗಳಲ್ಲಿ ಉಂಟಾದ ಅಸಮಾಧಾನಕ್ಕೆ ತೇಪೆ ಹಾಕಿದ್ದರೂ ಎಲ್ಲವೂ ಸರಿ ಇಲ್ಲ ಎಂಬುದನ್ನು ಆಯಾ ಸನ್ನಿವೇಶಗಳು ಸಾಕ್ಷಿ ಹೇಳುತ್ತಿವೆ. ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಸೆಳೆಯಲು ಬಿಜೆಪಿ ನಿರಂತರ ಯತ್ನದ ಆರೋಪ ಒಂದು ಕಡೆಯಾದರೆ, ಕಾಂಗ್ರೆಸ್ ಶಾಸಕ ಡಾ| ಉಮೇಶ ಜಾಧವ ರಾಜೀನಾಮೆ ನೀಡಿದ್ದು, ಇನ್ನೊಬ್ಬ ಶಾಸಕ ರಮೇಶ ಜಾರಕಿಹೊಳಿ ರಾಜೀನಾಮೆಗೆ ತುದಿಗಾಲ ಮೇಲೆ ನಿಂತಿದ್ದಾರೆ.
ಅಳಿವು-ಉಳಿವಿನ ಲೆಕ್ಕಾಚಾರ: ಲೋಕಸಭೆ ಹಾಗೂ ಎರಡು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶದ ಆಧಾರದಲ್ಲಿ ಸಮ್ಮಿಶ್ರ ಸರ್ಕಾರದ ಅಳಿವು-ಉಳಿವಿನ ಲೆಕ್ಕಾಚಾರ ಶುರುವಾಗಿದೆ. ಪಾಲುದಾರ ಪಕ್ಷಗಳು ಸಮ್ಮಿಶ್ರ ಸರ್ಕಾರಕ್ಕೆ ಧಕ್ಕೆ ಇಲ್ಲ ಎನ್ನುತ್ತಿದ್ದರೆ, ಬಿಜೆಪಿಯವರು ಸರ್ಕಾರ ಪತನ ಖಚಿತ ಎನ್ನುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಅಥವಾ ಯುಪಿಎ ಮೈತ್ರಿಕೂಟದಲ್ಲಿ ಯಾವುದು ಅಧಿಕಾರ ಹಿಡಿದರೂ ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರದ ಮೇಲೆ ತನ್ನದೇಯಾದ ಪರಿಣಾಮ ಬೀರಲಿದೆ. ಕಾಂಗ್ರೆಸ್ ಶಾಸಕರಲ್ಲಿ ಅಸಮಾಧಾನ ಕುದಿಯುತ್ತಿದ್ದರೆ, ಜೆಡಿಎಸ್‌ನಲ್ಲಿ ಅಧಿಕಾರ ಹಂಚಿಕೆಯಾಗದ ಕುದಿಮೌನ ಸ್ಫೋಟ ಹಂತಕ್ಕೂ ಬಂದು ನಿಂತಿದೆ.
ಅಸಮಾಧಾನ ಹೆಚ್ಚಿಸಿದ ಸಿಎಂ ಹುದ್ದೆ ಹೇಳಿಕೆ
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು, ಆಗುತ್ತಾರೆ ಎಂಬ ಕೆಲವರ ಹೇಳಿಕೆಗಳು ಸಂಚಲನ ಮೂಡಿಸುತ್ತಿವೆ. ಮೈತ್ರಿ ಸರ್ಕಾರದಲ್ಲಿ ಅಪನಂಬಿಕೆ, ಅಸಮಾಧಾನ ಹೆಚ್ಚುವಂತೆ ಮಾಡಿದೆ. ಮೂಲಗಳ ಪ್ರಕಾರ ಲೋಕಸಭೆ ಚುನಾವಣೆ ಪ್ರಕ್ರಿಯೆಯಿಂದಾಗಿ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ನಡುವೆ ಹಿಂದೆ ಇದ್ದ ಮುನಿಸು ಕೊಂಚ ತಿಳಿಯಾಗಿದೆ. ಆದರೆ ಸಿಎಂ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ನಡುವೆ ಹೇಳಿಕೊಳ್ಳುವಂತಹ ಸಂಬಂಧ ಇಲ್ಲ ಎಂದು ಹೇಳಲಾಗುತ್ತಿದೆ.
-ಅಮರೇಗೌಡ ಗೋನವಾರ