Advertisement
ದುಬಾೖಯಿಂದ ಅಂದು ಮುಂಜಾನೆ ಬಜಪೆ (ಈಗ ಮಂಗಳೂರು ಅಂತಾರಾಷ್ಟ್ರೀಯ) ವಿಮಾನ ನಿಲ್ದಾಣಕ್ಕೆ ಬಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಇಳಿಯುತ್ತಿದ್ದಂತೇ ತನ್ನ ನಿಯಂತ್ರಣ ಕಳೆದುಕೊಂಡಿತು. ಸಮೀಪದ ಕೆಂಜಾರು ಎಂಬಲ್ಲಿ ಪತನಗೊಂಡಿತ್ತು.
1951ರ ಡಿಸೆಂಬರ್ 31ರಂದು ಆಗಿನ ಬಜಪೆ ವಿಮಾನ ನಿಲ್ದಾಣ ಉದ್ಘಾಟನೆ ಆಗಿತ್ತು. ಮುಂಬಯಿ ಯಿಂದ ಮೊದಲ ವಿಮಾನದಲ್ಲಿ ಆಗಿನ ಪ್ರಧಾನಿ ಆಗಮಿಸಿದ್ದರು. ಮುಂದೆ ಹಂತ ಹಂತದಲ್ಲಿ ನಿಲ್ದಾಣ ವಿಸ್ತರಣೆ ಆಗುತ್ತಾ ಸಾಗಿತು. ಬೆಂಗಳೂರಿಗೂ ಸಂಪರ್ಕವಾಯಿತು. 80ರ ದಶಕದ ಕೊನೆಯ ಭಾಗದಲ್ಲಿ ಒಂದು ಸಂಭಾವ್ಯ ದುರಂತ (ಬೆಂಗಳೂರಿನಿಂದ ಬಂದಿಳಿದ ವಿಮಾನ ರನ್‌ವೇ ಯಲ್ಲಿ ನಿಯಂತ್ರಣ ತಪ್ಪಿ ಜಾರುತ್ತಾ, ಎದುರಿನ ಬಂಡೆಕಲ್ಲುಗಳ ತಡೆಗೆ ಬಡಿದು ನಿಂತಿತ್ತು. ಜೀವಹಾನಿ ಉಂಟಾಗಿರಲಿಲ್ಲ.) ಒಟ್ಟಾರೆ ಯಾವುದೇ ಸಮಸ್ಯೆ ಉಂಟಾಗಿರಲಿಲ್ಲ. ರನ್‌ವೇಯ ಉದ್ದ ಪರಿಗಣಿಸಿದರೆ, ಸುರಕ್ಷತೆ ಬಗ್ಗೆ ಆಗಾಗ ವಿವಿಧ, ವಿಭಿನ್ನ ಅಭಿಪ್ರಾಯಗಳು ಕೇಳಿ ಬಂದರೂ ನಿಲ್ದಾಣ ಸುರಕ್ಷಿತವೇ ಆಗಿತ್ತು. ಮುಂದಿನ ಹಂತದಲ್ಲಿ ರನ್‌ವೇಗಳ ವಿಸ್ತರಣೆ ಆಯಿತು. ಹೊಸ ಟರ್ಮಿನಲ್ ಕಟ್ಟಡಗಳ ನಿರ್ಮಾ ಣವಾಯಿತು. ಅಂತಾರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣವಾಗಿ ವಿಸ್ತರಣೆಯಾಯಿತು.
Related Articles
Advertisement
ಅಂದು ಈ ದುರದೃಷ್ಟವಂತ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಎಲ್ಲ ಸುರಕ್ಷಾ ಸಂಕೇತಗಳ ವಿನಿಮಯದ ಬಳಿಕ ವಿಮಾನ ನಿಲ್ದಾಣದಲ್ಲಿ ವಸ್ತುಶಃ ಲ್ಯಾಂಡ್ ಆಗಿತ್ತು. ಆದರೆ ರನ್‌ವೇಯಲ್ಲಿ ನಿಲ್ಲದೇ, ಮುಂದಕ್ಕೆ ಚಲಿಸುತ್ತಲೇ, ಅಲ್ಲಿನ ಸೂಚನಾ ಗೋಪುರದ ಕಂಬಗಳಿಗೆ ಢಿಕ್ಕಿಯಾಗಿ, ಕಂಬ ಮುರಿದು ವಿಮಾನ ಅಲ್ಲಿಂದ 150 ಮೀಟರ್ ಅಂತರದಲ್ಲಿ ವಿದ್ಯುತ್ ತಂತಿಗಳಿಗೆ ಬಡಿಯುತ್ತಾ ತನ್ನ ರೆಕ್ಕೆಗಳನ್ನು ಮುರಿದುಕೊಂಡಿತು. ಅಲ್ಲಿಂದ ಬೆಂಕಿಯ ಉಂಡೆಯಾಗಿ ಕೆಂಜಾರು ಎಂಬಲ್ಲಿ ಪೂರ್ವ ದಿಕ್ಕಿನಲ್ಲಿ ಕೆಳಕ್ಕೆ ಉರುಳಿ ಬಿತ್ತು. ಮರಗಳ ನಡುವೆ ಭಾರೀ ಸ್ಫೋಟದೊಂದಿಗೆ ಬಿದ್ದ ವಿಮಾನ ದಟ್ಟ ಕಪ್ಪು ಹೊಗೆಯನ್ನು ಆಕಾಶಕ್ಕೆ ಚಿಮ್ಮುತ್ತಾ ಬೆಂಕಿಗೆ ಆಹುತಿಯಾಯಿತು.
ಬಳಿಕ, ಸ್ಥಳಕ್ಕೆ ಧಾವಿಸಿ ಬಂದ ವಿವಿಧ ಸುರಕ್ಷ ಮತ್ತು ರಕ್ಷಣ, ಪರಿಹಾರ ಇಲಾಖೆಯವರು ಸ್ಥಳೀಯ ಜನ ತೆಯ ಸಹಕಾರದೊಂದಿಗೆ ಪರಿಹಾರ ಕಾರ್ಯನಿರತ ರಾದರು. ಧಗಧಗಿಸುತ್ತಿದ್ದ ಬೆಂಕಿಯ ನಡುವೆ ಸಾಗಿ, ವಿಮಾನದಲ್ಲಿದ್ದವರನ್ನು ಹೊರಗೆ ತರಲು ಸುಲಭ ಸಾಧ್ಯವಾಗಿರಲಿಲ್ಲ. ಆ ಕ್ಷಣಕ್ಕೆ ಸ್ಥಳಕ್ಕೆ ತೆರಳಲು ಆಗುತ್ತಿರಲಿಲ್ಲ. ಬಹುತೇಕ ಶರೀರಗಳು ಸೀಟ್‌ಬೆಲ್ಟ್ ಧರಿಸಿದ ಸ್ಥಿತಿಯಲ್ಲಿಯೇ ಇದ್ದವು.
ವಿಮಾನದಲ್ಲಿ ಸಿಬಂದಿ ಸಹಿತ 166 ಮಂದಿ ಪ್ರಯಾಣಿಕರಿದ್ದರು. ಅವರಲ್ಲಿ 158 ಮಂದಿ ಸಜೀವವಾಗಿ ದಹನಗೊಂಡಿದ್ದರು. ಮರಕ್ಕೆ ಬಡಿದು ವಿಮಾನದ ಬಾಗಿಲು ತೆರೆದುಕೊಂಡಾಗ ಅಲ್ಲೇ ಕುಳಿತಿದ್ದ 8 ಮಂದಿ ಹೊರಗೆ ಎಸೆಯಲ್ಪಟ್ಟರು. ಓರ್ವ ಯುವತಿ ಮರಗಳ ರೆಂಬೆಗಳಲ್ಲಿ ಸಿಲುಕಿಕೊಂಡಿದ್ದು ಬಳಿಕ ರಕ್ಷಿಸಲಾಯಿತು. ಹೊರಕ್ಕೆ ಬಿದ್ದವರಲ್ಲಿ ಓರ್ವರು ನಡೆದೇ ವಿಮಾನ ನಿಲ್ದಾಣ ಕಚೇರಿಗೆ ಹೋಗಿ ಮಾಹಿತಿ ನೀಡಿದ್ದು ಬಳಿಕ ಗೊತ್ತಾಯಿತು. ಅಂತೆಯೇ ಬಜಪೆಯ ಎತ್ತರದ ಪ್ರದೇಶದಲ್ಲಿ ಪ್ರಾರ್ಥನೆ ಮುಗಿಸಿ ಬಂದ ಓರ್ವರು ಬೆಂಕಿಯ ಉಂಡೆ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ದುರಂತ ಸಂಭವಿಸಿದ್ದಾದರೂ ಹೇಗೆ?ವಿಮಾನದ ಬ್ಲ್ಯಾಕ್ ಬಾಕ್ಸ್‌ನ ವಿಶ್ಲೇಷಣೆಯ ಅನಂತರ ಈ ದುರಂತಕ್ಕೆ ಕಾರಣವೇನೆಂದು ತಿಳಿದು ಬಂತು. ಅದು ಆ ವಿಮಾನದ ಮುಖ್ಯ ಪೈಲಟ್ ಕ್ಯಾ|ಗ್ಲುಸಿಕಾ ಅವರು ಎಸಗಿದ ಪ್ರಮಾದ. ಸಹ ಪೈಲಟ್ ಕ್ಯಾ| ಅಹ್ಲುವಾಲಿಯಾ ಅವರ ಸಲಹೆ, ಎಚ್ಚರಿಕೆಯನ್ನು ಪರಿಗಣಿಸದೆ ಅವರು ವಿಮಾನವನ್ನು ಇಳಿಸಲು ನಿರ್ಧರಿಸಿದ್ದರು. ರನ್‌ವೇ ಅಂತರದ ನಿರ್ಧಾರವನ್ನು ಕೈಗೊಳ್ಳುವಲ್ಲಿ ಅವರಿಂದ ಪ್ರಮಾದವಾಗಿತ್ತು. ವಿಪರ್ಯಾಸವೆಂದರೆ, ಗ್ಲುಸಿಕಾ ಅವರು ಈ ಹಾದಿ ಯಲ್ಲಿ ಅನೇಕ ಬಾರಿ ವಿಮಾನ ಹಾರಾಟ ನಡೆಸಿದ್ದವರು. 19 ಬಾರಿ ಇಳಿಸಿದ್ದವರು. 10,200 ತಾಸು ವಿಮಾನ ಹಾರಾಟದ ಅನುಭವಿ ಆಗಿದ್ದವರು. ಸತತ ಡ್ನೂಟಿ ನಿರ್ವಹಣೆಯಿಂದ ಅವರು ನಿದ್ದೆಯ ಮಂಪರಿಗೆ ಜಾರಿದ್ದರೆ? ವಿಮಾನ ಇಳಿಯುವ ಪ್ರಕ್ರಿಯೆಯ ಸ್ವಲ್ಪ ಮೊದಲು ಅವರನ್ನು ಎಚ್ಚರ ಗೊಳಿಸಲಾಯಿತು. ವಿಮಾನ ಇಳಿಯುವ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ವಿವಿಧ ಸುರಕ್ಷ ವ್ಯವಸ್ಥೆಗಳು ಜಾಗೃತ ಸ್ಥಿತಿಯಲ್ಲಿ ಇರಲಿಲ್ಲವೇ? ಇಂತಹ ಅನೇ ಕಾನೇಕ ಪ್ರಶ್ನೆಗಳನ್ನು ಈ ದುರಂತ ಹುಟ್ಟು ಹಾಕಿತು. ಈ ದುರಂತ ಅನೇಕ ಕುಟುಂಬಗಳನ್ನು ಸರ್ವನಾಶ ಮಾಡಿತು. ಗಲ್ಫ್ನಲ್ಲಿ ದುಡಿದು, ಇಲ್ಲಿ ಊರಲ್ಲಿ ಕುಟುಂಬಕ್ಕೆ ಆಧಾರವಾಗಿದ್ದವರು ಮಡಿದರು. ಅನೇಕ ಮೃತ ಶರೀರಗಳ ಗುರುತು ಹಚ್ಚಲು ಡಿಎನ್‌ಎ ಪರೀಕ್ಷೆ ಅನಿವಾರ್ಯವಾಯಿತು. ಆ ಬಳಿಕ ಪರಿ ಹಾರದ ಮೊತ್ತವೂ (ವಾರಸುದಾರಿಕೆಗೆ ಸಂಬಂಧಿಸಿ) ಅನೇಕ ಕುಟುಂಬಗಳು ಒಡೆಯಲು ಕಾರಣವಾ ಯಿತು. ನ್ಯಾಯಾಲಯದ ಮೆಟ್ಟಿಲನ್ನು ಕೆಲವರು ಏರಿ ದರು. ಇವೆಲ್ಲವೂ ಭೀಕರ ವಿಮಾನ ಸ್ಫೋಟದ ಪಶ್ಚಾತ್ ಸ್ಫೋಟಗಳು. ಕಾಲವು ಹಾಗೆಲ್ಲ ಸುಲಭವಾಗಿ ಮರೆಸುವಂತಹ ಸ್ಫೋಟವಿದಲ್ಲ. ಮನೋಹರ ಪ್ರಸಾದ್