Advertisement
ಶುಕ್ರವಾರ ಇದರ ಆಮಂತ್ರಣ ಪತ್ರಿಕೆಯನ್ನು ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಬಿಡುಗಡೆಗೊಳಿಸಿದರು. ಸುತ್ತುಪೌಳಿಯ ಮರ, ಕಂಬಗಳು ಶಿಥಿಲಗೊಂಡಿ ದ್ದವು. ಹೀಗಾಗಿ ನವೀಕರಣ ಮಾಡಿದ್ದೇವೆ. ಗಾಳಿ, ಬೆಳಕು ಬರುವಂತೆ ಮತ್ತು ದಾರುಶಿಲ್ಪದೊಂದಿಗೆ ನವೀಕರಿಸಲಾಗಿದೆ. ಇದುವರೆಗೆ ಸುಮಾರು 2.9 ಕೋ.ರೂ. ಖರ್ಚಾಗಿದ್ದು ಒಟ್ಟು 3.5ರಿಂದ 4 ಕೋ.ರೂ. ಖರ್ಚು ತಗಲಬಹುದು. ಮರದ ಖರ್ಚು ಹೆಚ್ಚಿಗೆ ಆಗಿದೆ ಎಂದು ಶ್ರೀಪಾದರು ಸುದ್ದಿಗಾರರಿಗೆ ತಿಳಿಸಿದರು. ಕೇಂದ್ರ, ರಾಜ್ಯದ ಮಂತ್ರಿಗಳಿಗೆ ಆಹ್ವಾನ ನೀಡಿದ್ದೇವೆ. ಇದು ಸದ್ಯವೇ ಅಂತಿಮಗೊಳ್ಳಲಿದೆ ಎಂದರು.
ಪಾರ್ಕಿಂಗ್ ಪ್ರದೇಶದ ಪಕ್ಕ ಈಗಾಗಲೇ 2 ಕೋ.ರೂ. ವೆಚ್ಚದಲ್ಲಿ ಶ್ರೀ ವಿಶ್ವಮಾನ್ಯ ಮಂದಿರ ಛತ್ರವನ್ನು ನಿರ್ಮಿಸಿದ್ದು, ಇದರ ಎದುರು ಸಾಮಾನ್ಯ ಯಾತ್ರಾರ್ಥಿಗಳಿಗೆ ಉಳಿದುಕೊಳ್ಳಲು ಅನುಕೂಲವಾಗುವಂತಹ 2 ಕೋ.ರೂ. ವೆಚ್ಚದ ಛತ್ರವನ್ನು ನಿರ್ಮಿಸಲಿದ್ದೇವೆ. ಅದರ ಶಂಕುಸ್ಥಾಪನೆ ಎ. 29ರ ಬೆಳಗ್ಗೆ 10.30ಕ್ಕೆ ನಡೆಯಲಿದೆ. ಇದರಲ್ಲಿ 16 ದೊಡ್ಡ ಹಾಲುಗಳು (ಡಾರ್ಮೆಟರಿ) ಇರುತ್ತವೆ. ಪಾರ್ಕಿಂಗ್ ಏರಿಯಾದ ಸ್ಥಳಕ್ಕೆ ತೊಂದರೆಯಾಗುತ್ತದೆಂಬ ಅಭಿಪ್ರಾಯ ಮೂಡಿಬಂದ ಕಾರಣ ಮಧ್ವಾಂಗಣದ ಯೋಜನೆ ಕೈಬಿಟ್ಟಿದ್ದೇವೆ. ಇದರ ಬದಲು ನೂತನ ಛತ್ರ ನಿರ್ಮಿಸಲಿದ್ದೇವೆ. ರಾಜಾಂಗಣದಲ್ಲಿ ನಿರಂತರ ಕಾರ್ಯಕ್ರಮ ನಡೆಯುತ್ತಿದ್ದ ಕಾರಣ ಅದರ ನವೀಕರಣ ಸಾಧ್ಯವಾಗಲಿಲ್ಲ. ಮಳೆಗಾಲದಲ್ಲಿ ಮಳೆಯ ಶಬ್ದ ಬರುವುದನ್ನು ತಪ್ಪಿಸಲು ಪರಿಶೀಲನೆ ನಡೆಸುತ್ತೇವೆ. ಪಾಜಕದಲ್ಲಿ ನಡೆಯುವ ವಿದ್ಯಾಸಂಸ್ಥೆ ಯೋಜನೆ ಮುಂದುವರಿಯಲಿದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇತ್ತೀಚೆಗೆ ಪತ್ರಕರ್ತರ ಪ್ರಶ್ನೆಗೆ ಶ್ರೀಕೃಷ್ಣ ಮಠಕ್ಕೆ ಬರಲು ಅವಕಾಶವಾಗಲಿಲ್ಲ ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ನಾವು ಅವಕಾಶ ಕೊಟ್ಟಿದ್ದೆವು ಎಂದರು.