Advertisement

May 10: ಮತದಾನದ ದಿನ ಜೋಗ ಜಲಪಾತ ವೀಕ್ಷಣೆಗೆ ನಿರ್ಬಂಧ

04:48 PM Apr 26, 2023 | Team Udayavani |

ಸಾಗರ: ಮೇ 10 ರಂದು ನಡೆಯಲಿರುವ ವಿಧಾನ ಸಭಾ ಚುನಾವಣೆಯ ನಿಮಿತ್ತ ಮತದಾರರು ತಪ್ಪದೇ ಮತ ಚಲಾಯಿಸುವ ಉದ್ದೇಶದಿಂದ ಸರ್ಕಾರ ರಜಾ ದಿನವಾಗಿ ಘೋಷಣೆ ಮಾಡಿದೆ. ಆದರೆ ಕೆಲವು ಮತದಾರರು ತಮ್ಮ ಹಕ್ಕನ್ನು ಚಲಾಯಿಸುವುದನ್ನು ಬಿಟ್ಟು ರಜಾ ಮಜಾ ಸವಿಯಲು ಪ್ರವಾಸಿ ತಾಣಗಳಿಗೆ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ ವಿಶ್ವ ವಿಖ್ಯಾತ ಜೋಗ ಜಲಪಾತ ವೀಕ್ಷಣೆಗೆ ಮತದಾನದ ದಿನದಂದು ನಿರ್ಬಂಧ ವಿಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ತಿಳಿಸಿದ್ದಾರೆ.

Advertisement

ಈ ಹಿಂದೆ ಮತದಾನ ದಿನಗಳಂದು ಜೋಗ ನಿರ್ವಹಣಾ ಪ್ರಾಧಿಕಾರದಲ್ಲಿ ದಾಖಲಾದ ಪ್ರವಾಸಿಗರ ಸಂಖ್ಯೆಯ ಅಂಕಿ ಅಂಶಗಳನ್ನು ಪರಿಶೀಲನೆ ಮಾಡುವುದರ ಜೊತೆಗೆ, ಮಾಧ್ಯಮಗಳು ಪ್ರವಾಸಿಗರ ಆಗಮನದ ವಿಷಯವನ್ನು ಗಮನ ಸೆಳೆದಿರುವ ಕಾರಣ ಈ ನಿರ್ಬಂಧ ಕ್ರಮವನ್ನು ಜಾರಿ ಮಾಡಲಾಗಿದೆ. ಚುನಾವಣೆ ದಿನದಂದು ನಿರ್ಬಂಧ ಹೇರದೇ ಇದ್ದ ಪಕ್ಷದಲ್ಲಿ ಬರುವ ಪ್ರವಾಸಿಗರಿಗಾಗಿ ನಿರ್ವಹಣಾ ಪ್ರಾಧಿಕಾರದ ಸಿಬ್ಬಂದಿ ಕರ್ತವ್ಯಪಾಲನೆ ಮಾಡಬೇಕಾಗುತ್ತದೆ. ಇವರಿಗೆ ಪೂರಕವಾಗಿ ಸ್ಥಳೀಯವಾಗಿರುವ ವ್ಯಾಪಾರಸ್ಥರು, ಛಾಯಾಚಿತ್ರಗಾರರು, ಸಣ್ಣ ಪುಟ್ಟ ಬೀದಿ ಬದಿ ವ್ಯಾಪಾರಿಗಳು, ಗೈಡ್‌ಗಳು, ಆಟೊ ಚಾಲಕರು, ಟ್ಯಾಕ್ಸಿ ಚಾಲಕರು, ಭದ್ರತಾ ಸಿಬ್ಬಂದಿ ಸೇರಿದಂತೆ ಅನೇಕರು ಕೊಂಡಿಯ ರೀತಿಯಲ್ಲಿ ಜೋಡಣೆಯಾಗಿ ಮತದಾನದಿಂದ ದೊಡ್ಡ ಪ್ರಮಾಣದಲ್ಲಿ ಇವರೆಲ್ಲಾ ಹೊರಗುಳಿಯುವ ಸಾಧ್ಯತೆಯಿದೆ. ಹೀಗಾಗಿ ಪ್ರಮುಖವಾಗಿ ಜಲಪಾತ ವೀಕ್ಷಣೆಗೆ ನಿರ್ಬಂಧವನ್ನು ಹೇರಲಾಗಿದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: 40% Commission; ಲಕ್ಷ್ಮಣ ಸವದಿ ಆರೋಪಕ್ಕೆ ಸಿಎಂ ಬೊಮ್ಮಾಯಿ ತಿರುಗೇಟು

ಜೋಗ ನಿರ್ವಹಣಾ ಪ್ರಾಧಿಕಾರದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳು ಪರ ಊರಿನಲ್ಲಿ ಮತ ಇದ್ದಲ್ಲಿ ಕಡ್ಡಾಯವಾಗಿ ಮತದಾನ ಮಾಡಿ ಬರಲು ತಿಳಿಸಲಾಗಿದೆ. ಪ್ರತಿಯೊಬ್ಬರು ತಪ್ಪದೇ ಮತದಾನದಲ್ಲಿ ಭಾಗವಹಿಸಿ ರಾಷ್ಟ್ರ ನಿರ್ಮಾಣದಲ್ಲಿ ಅತ್ಯಂತ ಪ್ರಮುಖ ಘಟ್ಟವಾದ ಮತದಾನ ಪ್ರಕ್ರಿಯೆಯಲ್ಲಿ ಮುಂದಾಗಲು ಈ ಕ್ರಮ ಕೈಗೊಳ್ಳಲಾಗಿದೆ. ರಜಾ ದಿನದ ಮಹತ್ವವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವ ಸದುದ್ದೇಶವನ್ನು ಪ್ರತಿಯೊಬ್ಬರು ಅರಿತು ನಡೆಯಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next