Advertisement

ವಿದ್ಯೆಗೆ ಗರಿಷ್ಠ, ವಿತ್ತಕ್ಕೆ ಕನಿಷ್ಠ ಗೌರವ ಶಾಸ್ತ್ರಸೂಚಿ

01:57 AM Jul 22, 2019 | Sriram |

ಉಡುಪಿ: ಶಾಸ್ತ್ರದ ಪ್ರಕಾರ ಮೊದಲು ಗೌರವ ಸಲ್ಲಿಸಬೇಕಾದದ್ದು ವಿದ್ಯೆಗೆ, ಅನಂತರ ಕ್ರಮವಾಗಿ ಕಾರ್ಯ (ಸಾಧನೆ), ವಯಸ್ಸು, ಬಂಧುತ್ವ, ಕೊನೆಯಲ್ಲಿ ಸಂಪತ್ತಿಗೆ ಗೌರವ ಸಲ್ಲಬೇಕು. ಈಗ ಶಿಕ್ಷಕ, ಶಿಕ್ಷಣಕ್ಕೆ ಕೊನೆಯ ಸ್ಥಾನ ಪ್ರಾಪ್ತವಾಗಿದೆ ಎಂದು ಶ್ರೀ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು.

Advertisement

ಹಿರಿಯ ಸಮಾಜಶಾಸ್ತ್ರಜ್ಞ ಪ್ರೊ| ಪಾದೂರು ಶ್ರೀಪತಿ ತಂತ್ರಿಯವರ 80ನೆಯ ಜನ್ಮದಿನದ ಪ್ರಯುಕ್ತ ಉಡುಪಿ ವಿದ್ಯೋದಯ ಪಬ್ಲಿಕ್‌ ಸ್ಕೂಲ್ ಒಳಾಂಗಣ ಸಭಾಂಗಣದಲ್ಲಿ ರವಿವಾರ ನಡೆದ ಆಪ್ತರ ಸಮಾವೇಶದಲ್ಲಿ ಪ್ರೊ| ತಂತ್ರಿಯವರನ್ನು ಅಭಿನಂದಿಸಿ ಅವರು ಆಶೀರ್ವಚನ ನೀಡಿದರು.

ತನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡುವುದೇ ನನಗೆ ಮಾಡುವ ಪೂಜೆ ಎಂದು ಸ್ವಯಂ ಕೃಷ್ಣನೇ ಹೇಳಿದ್ದಾನೆ. ಅದರಂತೆ ತಂತ್ರಿಯವರು ತನ್ನ ಕರ್ತವ್ಯವನ್ನು ಪೂಜೆ ರೂಪದಲ್ಲಿ ಮಾಡಿದ್ದಾರೆ. ಅವರಿಂದ ಇನ್ನಷ್ಟು ಸೇವೆ ಲಭಿಸುವಂತಾಗಲಿ ಎಂದು ಸ್ವಾಮೀಜಿ ಹಾರೈಸಿದರು.

ತಕ್ಷಶಿಲೆ: ತಂತ್ರಿ ಮಾಹಿತಿ
ಪ್ರೊ| ತಂತ್ರಿಯವರು ತಮ್ಮ ಅಧ್ಯಯನದಲ್ಲಿ ತಕ್ಷಶಿಲೆಯ ಮೇಲೆ ಬೆಳಕು ಚೆಲ್ಲಿದ್ದಾರೆ. ಈಗ ಕೇಂದ್ರ ಸರಕಾರ ತಕ್ಷಶಿಲೆಯ ಕುರಿತು ಗಮನ ಹರಿಸುತ್ತಿದೆ. ಹೀಗಾಗಿ ಮಂಗಳೂರು ವಿ.ವಿ.ಯವರು ತಂತ್ರಿಯವರ ಮಾಹಿತಿಗಳನ್ನು ರಾಷ್ಟ್ರೀಯ ಸ್ತರದ ಸಮಿತಿಗೆ ಕಳುಹಿಸಿಕೊಡಬೇಕೆಂದು ಸಮಾರೋಪ ಭಾಷಣ ಮಾಡಿದ ವಿಶ್ರಾಂತ ಕುಲಪತಿ ಡಾ| ಕೆ. ಸುಧಾ ರಾವ್‌ ಹೇಳಿದರು.

ಮುಂದಿನ ಪೀಳಿಗೆಗೆ ತಂತ್ರಿಯವರ ಕೊಡುಗೆ ಏನು ಎನ್ನುವುದು ತಿಳಿಯಬೇಕಾಗಿದೆ ಎಂದು ವಿಶ್ರಾಂತ ಕುಲಪತಿ ಪ್ರೊ| ಕೆ. ಬೈರಪ್ಪ ಹೇಳಿದರು. ಕಲಬುರಗಿ ಕೇಂದ್ರೀಯ ವಿ.ವಿ. ಕುಲಾಧಿಪತಿ ಡಾ| ಎನ್‌.ಆರ್‌. ಶೆಟ್ಟಿಯವರು ತಂತ್ರಿಯವರ ವಿದ್ವತ್ತಿನ ಮೇಲೆ ಬೆಳಕು ಚೆಲ್ಲಿ ಶುಭ ಕೋರಿದರು.

Advertisement

ಏಕೆ? ಎಲ್ಲಿಂದ ಬಂದೆ?
ಅಭಿನಂದನೆಗೆ ಉತ್ತರಿಸಿದ ಪ್ರೊ| ತಂತ್ರಿಯವರು, ನಾನು ಮತ್ತು ದೇವರ ನಡುವೆ ಏನಿದೆ, ಇದ್ದರೆ ಏನಿರಬಹುದು, ನಾನು ಯಾರು, ಎಲ್ಲಿಂದ ಬಂದೆ, ಎಲ್ಲಿಗೆ ಹೋಗಬೇಕು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಪಡೆಯಲು ಅಧ್ಯ ಯನ ನಡೆಸಿದೆ. ನನ್ನನ್ನು ಅರ್ಥ ಮಾಡಿಕೊಳ್ಳಲು ಓದಿದ್ದೇನೆ, ಬರೆದಿದ್ದೇನೆ. ಉತ್ತರ ಮಾತ್ರ ಸಿಕ್ಕಿಲ್ಲ ಎಂದರು.

ಮಂಗಳೂರು ವಿ.ವಿ.ಯಲ್ಲಿ ಕರಾ ವಳಿಯವರು ಏಕೆ ಕುಲಪತಿಗಳಾಗ ಬಾರದು ಎಂದು ಚಳವಳಿ ಮಾಡಲು ಕೆಲವರು ಯೋಚಿಸಿದ್ದರು. ಇದುಸರಿಯಲ್ಲ. ಕರಾವಳಿಯವರು ಬೇರೆಡೆ ಕುಲಪತಿಗಳಾಗಲಿಲ್ಲವೆ? ಹಿಂದೆ ಶೇಖ್‌ ಅಲಿ, ಶಫಿಯುಲ್ಲಾ ಅವರು ಕುಲಪತಿಗಳಾದ ಸಂದರ್ಭ ಅವರೇಕೆ ಆಗಬೇಕು ಎಂದು ಆಕ್ಷೇಪ ಬಂತು. ಶಫಿಯುಲ್ಲಾ ಉತ್ತಮ ವ್ಯಕ್ತಿಯಾಗಿದ್ದರು. ಆಗ ನಾನು ಅವರನ್ನು ಪೇಜಾವರ ಶ್ರೀಗಳಲ್ಲಿ ಕರೆದುಕೊಂಡು ಬಂದು ವಿವರಿಸಿದಾಗ ಅವರು ಆಕ್ಷೇಪ ಹೇಳಿದವರಿಗೆ ತಿಳಿ ಹೇಳಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು ಎಂದು ತಂತ್ರಿ ನೆನಪಿಸಿಕೊಂಡರು.

ಅಭಿನಂದನ ಸಮಿತಿ ಅಧ್ಯಕ್ಷ ಕೆ. ಗಣೇಶ ರಾವ್‌ ಸ್ವಾಗತಿಸಿ, ವಾಸುದೇವ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಮುರಳಿ ಕಡೆಕಾರ್‌ ಸಮ್ಮಾನ ಪತ್ರ ವಾಚಿಸಿದರು. ಸಂಯೋಜಕ ಪ್ರೊ| ವರದೇಶ ಹಿರೆಗಂಗೆ, ಶ್ರೀಪತಿ ತಂತ್ರಿಯವರ ಪುತ್ರ ಭಾರ್ಗವ ತಂತ್ರಿ, ಪತ್ನಿ ರತ್ನಾ ತಂತ್ರಿ ಉಪಸ್ಥಿತರಿದ್ದರು.

ಡಿಲಿಟ್‌ಗೆ ಶಿಫಾರಸು
ಪ್ರೊ| ತಂತ್ರಿಯವರ ಎಲ್ಲ ಸಂಶೋಧನ ಗ್ರಂಥಗಳನ್ನು ಡಿಲಿಟ್ಗಾಗಿ ಮಂಗಳೂರು ವಿ.ವಿ. ಕಳುಹಿಸಬೇಕು ಎಂದು ಪ್ರೊ| ಕೆ. ಬೈರಪ್ಪ ಸಲಹೆ ನೀಡಿದಾಗ, ಇದಕ್ಕೆ ಬೇಕಾದ ಪ್ರಕ್ರಿಯೆಯನ್ನು ಮಾಡುತ್ತೇನೆ ಎಂದು ಪ್ರೊ| ಪಿ.ಎಸ್‌. ಎಡಪಡಿತ್ತಾಯ ಹೇಳಿದರು.

ವಿ.ವಿ.ಗೆ ಥಿಂಕ್‌ಟ್ಯಾಂಕ್‌
ಮಂಗಳೂರು ವಿ.ವಿ.ಯಲ್ಲಿ ಇದುವರೆಗೆ ಥಿಂಕ್‌ ಟ್ಯಾಂಕ್‌ ಇದ್ದಿರಲಿಲ್ಲ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನುಸಾರ ಗುಣಮಟ್ಟವನ್ನು ಹೆಚ್ಚಿಸಬೇಕಾಗಿದೆ. ಇದಕ್ಕಾಗಿ ಥಿಂಕ್‌ ಟ್ಯಾಂಕ್‌ ರಚಿಸಲಾಗಿದ್ದು ಇದರಲ್ಲಿ ಪ್ರೊ| ತಂತ್ರಿ ಮತ್ತು ಪ್ರೊ| ಸುಧಾ ರಾವ್‌ ಇರುತ್ತಾರೆ.
– ಪ್ರೊ| ಪಿ.ಎಸ್‌. ಎಡಪಡಿತ್ತಾಯ,
ಉಪ ಕುಲಪತಿ, ಮಂಗಳೂರು ವಿಶ್ವವಿದ್ಯಾನಿಲಯ

ದೇವರನ್ನು ಪೂಜಿಸದೆ ನಂಬುವವರು
ನಾನು ಚಿಕ್ಕ ಪ್ರಾಯದಲ್ಲಿ ಶಾಲೆಯಲ್ಲಿ ದೇವರನ್ನು ನಂಬುತ್ತೀರೋ ಇಲ್ಲವೋ ಎಂದು ಶಿಕ್ಷಕರು ಪ್ರಶ್ನಿಸಿದಾಗ ವ್ಯವಸ್ಥೆ ವಿರುದ್ಧ ಮಾತನಾಡುವ ಆ ಪ್ರಾಯದಲ್ಲಿ ನಂಬುವುದಿಲ್ಲ ಎಂದೆ. ಮನೆಗೆ ಬಂದು ತಂದೆಯಲ್ಲಿ ಕೇಳಿದಾಗ “ದೇವರನ್ನು ನಂಬುತ್ತೇನೆ’ ಎಂದರು. ನನಗೆ ಶಾಕ್‌ ಆಯಿತು. ಅವರು ದೇವರನ್ನು ನಂಬುವ ದೃಷ್ಟಿಯೇ ಬೇರೆ. ಹಬ್ಬ, ಆಚರಣೆ ಹೀಗೆ ಪ್ರತಿಯೊಂದನ್ನೂ ತಾರ್ಕಿಕವಾಗಿ ವಿಮರ್ಶೆ ಮಾಡುತ್ತಿದ್ದರು. 1960ರ ದಶಕದಲ್ಲಿ ಮುಂಬಯಿ ವಿ.ವಿ.ಯಲ್ಲಿ ಸಮಾಜಶಾಸ್ತ್ರದ ಎಂಎ ಪದವಿ ಪಡೆದ ನನ್ನ ತಾಯಿ ತಂದೆಯ ಯಶಸ್ಸಿಗೆ ಮುಖ್ಯ ಕಾರಣರು.
– ಡಾ| ಶಾರ್ವರಿ, ಶ್ರೀಪತಿ ತಂತ್ರಿಯವರ ಪುತ್ರಿ

Advertisement

Udayavani is now on Telegram. Click here to join our channel and stay updated with the latest news.

Next