Advertisement

ಈ ಶಾಲೆಯಲ್ಲಿ ಗರಿಷ್ಠ ಶುಲ್ಕ ವರ್ಷಕ್ಕೆ 1750 ರೂ.!

11:04 AM Jun 14, 2020 | sudhir |

ಚಾಮರಾಜನಗರ: ಕೋವಿಡ್ ನಿಂದಾಗಿ ಶಾಲೆಗಳು ತೆರೆದಿಲ್ಲ. ಆದರೆ ಆಗಲೇ ಕೆಲವು ಖಾಸಗಿ ಶಾಲೆಗಳು ಶುಲ್ಕ ವಸೂಲಿ ಮಾಡುತ್ತಿವೆ ಎಂಬ ದೂರು ಕೇಳಿ ಬರುತ್ತಿದೆ. ಆದರೆ, ನಗರದ ಈ ಖಾಸಗಿ ಶಾಲೆ ಮಾತ್ರ, ತರಗತಿ ಆರಂಭವಾದಾಗಲಷ್ಟೇ ಶುಲ್ಕ ಪಡೆಯುವುದು ಎಂದು ನಿರ್ಧರಿಸಿದೆ. ಅಷ್ಟೇ ಅಲ್ಲ, ಇಲ್ಲಿ ಕನಿಷ್ಠ ಶುಲ್ಕ ವರ್ಷಕ್ಕೆ 500 ರೂ., ಗರಿಷ್ಠ ಶುಲ್ಕ ವರ್ಷಕ್ಕೆ 1750 ರೂ! ಮಾತ್ರವಲ್ಲ. ಮಧ್ಯಾಹ್ನದ ಊಟ ಉಚಿತ! ಈ ಶುಲ್ಕವನ್ನೂ ಕಂತುಗಳಲ್ಲಿ ಪಾವತಿ ಮಾಡಲು ಅವಕಾಶವಿದೆ!.

Advertisement

ಇವೆಲ್ಲಾ ಚಾಮರಾಜನಗರ ಪಟ್ಟಣದ ದೀನಬಂಧು ಶಾಲೆಯ ವಿಶೇಷ. ರಾಷ್ಟ್ರಕವಿ ಜಿ.ಎಸ್‌. ಶಿವರುದ್ರಪ್ಪನವರ ಪುತ್ರ ಪ್ರೊ.
ಜಿ.ಎಸ್‌.ಜಯದೇವ ಈ ಶಾಲೆಯ ಸಂಸ್ಥಾಪಕರು. ಈ ಶಾಲೆ ಆರಂಭವಾಗಿ 21 ವರ್ಷಗಳಾಗಿವೆ. ಯುಕೆಜಿಯಿಂದ 10ನೇ ತರಗತಿವರೆಗೆ ಶಾಲೆಯಲ್ಲಿ ಕಲಿಸಲಾಗುತ್ತದೆ. ಇನ್ನೊಂದು ವಿಶೇಷವೆಂದರೆ ಇದು ಕನ್ನಡ ಮಾಧ್ಯಮ ಶಾಲೆ.! ಖಾಸಗಿ
ಶಾಲೆಯೊಂದು ಇಂಗ್ಲಿಷ್‌ ಮಾಧ್ಯಮ ಶಾಲೆಗಳಷ್ಟೇ ಸಮರ್ಥವಾಗಿ ಕನ್ನಡ ಮಾಧ್ಯಮ ಶಾಲೆಯೊಂದನ್ನು ಎಷ್ಟು ಚೆನ್ನಾಗಿ ನಡೆಸ ಬಹುದು ಎಂಬುದಕ್ಕೆ ದೀನಬಂಧು ಶಾಲೆ ನಿದರ್ಶನ. ಉತ್ತಮ ಕಟ್ಟಡ, ಸುಸಜ್ಜಿತ ಪ್ರಯೋಗಾಲಯ, ಪ್ರತಿಭಾವಂತ ಶಿಕ್ಷಕರೂ ಇದ್ದಾರೆ.

ಕಳೆದ ಸಾಲಿನಲ್ಲಿ ಈ ಶಾಲೆಯಲ್ಲಿ 444 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಒಂದು ತರಗತಿಗೆ 35 ಮಕ್ಕಳಿಗಷ್ಟೇ ಅವಕಾಶ
ನೀಡಲಾಗಿದೆ.

ಕಡಿಮೆ ಶುಲ್ಕ ಪಾವತಿಸಲೂ 2-3 ಕಂತು
ದೀನಬಂಧು ಶಾಲೆ ಕೋವಿಡ್‌ ಸಂಕಷ್ಟ ಮುಗಿದು ತರಗತಿ ಆರಂಭವಾದಾಗಲೇ ಪೋಷಕರಿಂದ ಶುಲ್ಕ ಪಡೆಯುವುದು ಎಂದು ನಿರ್ಧರಿಸಿದೆ. ಎಲ್‌ ಕೆಜಿ-ಯುಕೆಜಿಗೆ ವಾರ್ಷಿಕ 500 ರೂ. ಶುಲ್ಕ. 1 ರಿಂದ 4ನೇ ತರಗತಿಗೆ 750 ರೂ. ವಾರ್ಷಿಕ ಶುಲ್ಕ.
5, 6, 7ನೇ ತರಗತಿಗಳಿಗೆ 1250 ರೂ., ಪ್ರೌಢಶಾಲೆಗೆ 1750 ರೂ. ವಾರ್ಷಿಕ ಶುಲ್ಕ. 2018-19ನೇ ಸಾಲಿನಿಂದಲೂ ಇದೇ ಶುಲ್ಕ ತೆಗೆದುಕೊಳ್ಳಲಾಗುತ್ತಿದೆ.ಆ ಹಿಂದಿನ ವರ್ಷಗಳಲ್ಲಿ ಇನ್ನೂ ಕಡಿಮೆ ಶುಲ್ಕ ಇತ್ತು!. ಈ ಶುಲ್ಕವನ್ನೂ ಪೋಷಕರು 2-3 ಕಂತುಗಳಲ್ಲಿ ಕೊಡಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ಇನ್ನೊಂದು ವಿಶೇಷವೆಂದರೆ, ತಾಯಿ ಅಥವಾ ತಂದೆ ಮಾತ್ರ ಇರುವ ಮಕ್ಕಳಿಗೆ
ಶುಲ್ಕದಿಂದ ಸಂಪೂರ್ಣ ವಿನಾಯ್ತಿ ನೀಡಲಾಗಿದೆ.

Advertisement

ಅಲ್ಲದೇ ಎಲ್ಲಾ ಮಕ್ಕಳಿಗೂ ಮಧ್ಯಾಹ್ನದ ಊಟ ಉಚಿತ. ಶನಿವಾರ ಬೆಳಗ್ಗೆ ಉಪಾಹಾರದ ವ್ಯವಸ್ಥೆಯೂ ಇದೆ.

– ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next