Advertisement

ಅಡಿಕೆ, ರಬ್ಬರ್‌ ಬೆಳೆಗಾರರಿಗೆ ಗರಿಷ್ಠ ಸಹಕಾರ

11:21 PM Apr 08, 2019 | mahesh |

ಸುಳ್ಯ: ಅಡಿಕೆ, ರಬ್ಬರ್‌ ಕೃಷಿಕರಿಗೆ ಬಿಜೆಪಿ ಸರಕಾರ ಗರಿಷ್ಠ ಸಹಕಾರ ನೀಡಿದೆ. ಹಾಗಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಆರೋಪದಲ್ಲಿ ಹುರುಳಿಲ್ಲ ಎಂದು ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಪ್ರಭಾರಿ, ಕಾರ್ಕಳ ಶಾಸಕ ವಿ. ಸುನೀಲ್‌ ಕುಮಾರ್‌ ಹೇಳಿದ್ದಾರೆ.

Advertisement

ಬಿಜೆಪಿ ಚುನಾವಣ ಪ್ರಚಾರ ಕಚೇರಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರದ್ದು ಹಿಟ್‌ ಆ್ಯಂಡ್‌ ರನ್‌ ಥರಹದ ವರ್ತನೆ. ಪ್ರಚಾರದ ಸಂದರ್ಭ ಒಂದೊಂದು ಕ್ಷೇತ್ರದಲ್ಲಿ ಒಂದೊಂದು ಸುಳ್ಳು ಹೇಳುತ್ತಾರೆ ಎಂದರು.

ಒಂದು ದೇಶ ಒಂದು ತೆರಿಗೆ ವ್ಯವಸ್ಥೆಯಲ್ಲಿ ತೈಲ ಉತ್ಪನ್ನಗಳು ಸೇರದಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಇದಕ್ಕೆ ಕೇಂದ್ರ ಸರಕಾರ ಜವಾಬ್ದಾರಿಯಲ್ಲ. ಜಿಎಸ್‌ಟಿ ಸಮಿತಿಯಲ್ಲಿ ಎಲ್ಲ ದೇಶಗಳ ಪ್ರತಿನಿಧಿಗಳಿರುತ್ತಾರೆ. ಎಲ್ಲರ ಒಪ್ಪಿಗೆ ಪಡೆದು ಇದನ್ನು ಜಾರಿ ಮಾಡಬೇಕಿದೆ ಎಂದು ಹೇಳಿದರು.

ಮೋದಿ ಹೆಸರಲ್ಲೇ ಮತ ಕೇಳುತ್ತೇವೆ
ಮೋದಿ ಹೆಸರು ಹೇಳಿ ಮತ ಕೇಳುತ್ತಾರೆ ಎಂದು ಕಾಂಗ್ರೆಸ್‌ನವರು ಟೀಕಿಸುತ್ತಿದ್ದಾರೆ. ಮೋದಿ ಅಂದರೆ ವ್ಯಕ್ತಿಯಲ್ಲ. ಒಂದು ಕಾರ್ಯಕ್ರಮ, ಒಂದು ಪರಿಶ್ರಮ, ಒಂದು ಪ್ರಾಮಾಣಿಕತೆ, ಒಂದು ನೇತೃತ್ವ, ಒಂದು ನವಭಾರತ. ಹೀಗಾಗಿ ಅವರ ಹೆಸರಿನಲ್ಲಿಯೇ ಮತ ಕೇಳುತ್ತೇವೆ. ಐದು ವರ್ಷಗಳ ಕಾರ್ಯ ಮುಂದುವರಿಕೆಗೋಸ್ಕರ ಪೂರ್ಣ ಬಹು ಮತದ ಸರಕಾರಕ್ಕೆ ಜನ ಆಶೀರ್ವಾದ ಮಾಡಬೇಕು ಎಂದು ಸುನೀಲ್‌ ಕುಮಾರ್‌ ಹೇಳಿದರು.

ಬಿಜೆಪಿಯ ಮನೆ ಮನೆ ಪ್ರಚಾರದ 2ನೇ ಹಂತದ ಅಭಿಯಾನ ಯಶಸ್ವಿಯಾಗಿ ಪೂರ್ಣಗೊಂಡಿದೆ. ಎ. 10ರಿಂದ 3ನೇ ಹಂತದ ಅಭಿಯಾನ ನಡೆಯಲಿದೆ ಎಂದವರು ವಿವರಿಸಿದರು.
ಶಾಸಕ ಎಸ್‌. ಅಂಗಾರ, ಕ್ಷೇತ್ರ ಬೂತ್‌ ಪ್ರಭಾರಿ ಪ್ರತಾಪ್‌ಸಿಂಹ ನಾಯಕ್‌, ಕುಶಾಲಪ್ಪ ಗೌಡ, ಜಿ.ಪಂ. ಸದಸ್ಯ ಎಸ್‌.ಎನ್‌. ಮನ್ಮಥ, ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣ ಸಂಚಾಲಕ ಹರೀಶ್‌ ಕಂಜಿಪಿಲಿ, ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಸುಬೋಧ್‌ ಶೆಟ್ಟಿ ಮೇನಾಲ, ಹಿಂದುಳಿದ ವರ್ಗ ವಿಭಾಗದ ಜಿಲ್ಲಾಧ್ಯಕ್ಷ ಸುರೇಶ್‌ ಕಣೆಮರಡ್ಕ, ವಿನಯ ಕುಮಾರ್‌ ಕಂದಡ್ಕ ಪತ್ರಿಕಾಗೋಷ್ಠಿಯಲ್ಲಿದ್ದರು.

Advertisement

ಮೋದಿ ಸಮಾವೇಶಕ್ಕೆ ಲಕ್ಷ ಜನ
ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್‌ ಕುಮಾರ್‌ ಕಟೀಲು ಪರ ಚುನಾವಣಾ ಪ್ರಚಾರದ ಅಂಗವಾಗಿ ಎ. 13ರಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ವಿಜಯ ಸಂಕಲ್ಪ ಸಮಾವೇಶ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಒಂದು ಲಕ್ಷ ಕಾರ್ಯಕರ್ತರು ಇಲ್ಲಿ ಸೇರಲಿದ್ದಾರೆ. ಅಪರಾಹ್ನ 3.30ರೊಳಗೆ ಕಾರ್ಯಕರ್ತರು ಮೈದಾನ ತಲುಪಬೇಕು. ಸುಳ್ಯ ವಿಧಾನ ಸಭಾ ಕ್ಷೇತ್ರದಿಂದ 15 ಸಾವಿರ ಕಾರ್ಯಕರ್ತರು ಸಮಾವೇಶದಲ್ಲಿ ಭಾಗಿ ಯಾಗಲಿದ್ದಾರೆ ಎಂದು ಸುನೀಲ್‌ ಕುಮಾರ್‌ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next