ಕಾಪು : ಭಾರೀ ಮಳೆ ಮತ್ತು ಮಳೆಯಿಂದಾಗಿ ಮಲ್ಲಾರು ಮೌಲಾನಾ ಆಜಾದ್ ಆಂಗ್ಲ ಮಾಧ್ಯಮ ಮಾದರಿ ಶಾಲೆಯ ಕೊಠಡಿಯೊಳಗೆ ನೀರು ತುಂಬಿ ಭಾರೀ ಅವಾಂತರ ಸೃಷ್ಟಿಯಾಗಿದೆ.
ಶತಮಾನ ಪೂರೈಸಿದ ಉರ್ದು ಶಾಲೆಯ ಹಳೆ ಕಟ್ಟಡದಲ್ಲಿ ಮೌಲಾನಾ ಆಜಾದ್ ಶಾಲೆಯು ನಡೆಯುತ್ತಿದ್ದು ಕೊಠಡಿ ಕೋಣೆಗಳು ಬಿರುಕು ಬಿಟ್ಟು, ಗಾಳಿ ಮಳೆಯಿಂದಾಗಿ ಕೆಲವು ಕೋಣೆಗಳ ಮೇಲ್ಚಾವಣಿಯ ಹಂಚುಗಳು ಕೂಡಾ ಹಾರಿ ಹೋಗಿವೆ. ಇದರಿಂದಾಗಿ ಮೇಲ್ಚಾವಣಿಯ ಒಳಗಿನಿಂದ ಮತ್ತು ಬಿರುಕು ಬಿಟ್ಟಿರುವ ಗೋಡೆ ಹಾಗೂ ಕಿಟಕಿಯೊಳಗಿಂದ ತರಗತಿ ಕೋಣೆಯೊಳಗೆ ಮಳೆ ನೀರು ತುಂಬಿಕೊಳ್ಳುವಂತಾಗಿದೆ.
ಮೇಲ್ಚಾವಣಿಯಿಂದ ಕೊಠಡಿಯೊಳಗೆ ನೀರು ಹರಿದು ಬಂದ ಪರಿಣಾಮ ವಿದ್ಯುತ್ ಶಾರ್ಟ್ ಸಕ್ಯೂಟ್ ಉಂಟಾಗಿ ವಯರಿಂಗ್ ಸಂಪೂರ್ಣ ಸುಟ್ಟು ಹೋಗಿದ್ದು ಇದರಿಂದ ಹೆದರಿಕೆಯಿಂದ ತರಗತಿ ಕೋಣೆಯೊಳಗೆ ತೆರಳಲು ಹಿಂಜರಿದು ಹೊರಗೆ ಕುಳಿತುಕೊಂಡಿದ್ದರು. ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಮಲ್ಲಾರು – ಪಕೀರಣಕಟ್ಟೆ ಪರಿಸರದ ರಿಕ್ಷಾ ಚಾಲಕರು ಶಾಲೆಗೆ ಆಗಮಿಸಿ, ಎಲ್ಲಾ ಮಕ್ಕಳನ್ನೂ ಉಚಿತವಾಗಿ ಶಾಲೆಗೆ ತಲುಪಿಸುವಲ್ಲಿ ಸಹಕರಿಸಿದ್ದಾರೆ.
ಇದನ್ನೂ ಓದಿ : ಮಹಾರಾಷ್ಟ್ರದ ಸಿಎಂ ಆಗಿ ಏಕನಾಥ್ ಶಿಂಧೆ, ಡಿಸಿಎಂ ಆಗಿ ಫಡ್ನವೀಸ್ ಪ್ರಮಾಣ ವಚನ ಸ್ವೀಕಾರ
ಪುರಸಭೆ ಸದಸ್ಯ ನೂರುದ್ದೀನ್, ಮಲ್ಲಾರು ಗ್ರಾ. ಪಂ. ಮಾಜಿ ಅಧ್ಯಕ್ಷ ಸಾಧಿಕ್ ಮಹಮ್ಮದ್, ಸಾಮಾಜಿಕ ಕಾರ್ಯಕರ್ತ ರಶೀದ್ ನೇತೃತ್ವದಲ್ಲಿ ಕೊಠಡಿಯೊಳಗಿನ ನೀರು ತೆರವು ಕಾರ್ಯಾಚರಣೆ ನಡೆಸಲಾಗಿದೆ. ಗ್ರಾಮ ಕರಣಿಕ ಮಥಾಯಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.