ವಿಧಾನಸಭೆ: “ಬಲಿತ ದಲಿತರು ಬಡ ದಲಿತರಿಗೂ ಅವಕಾಶ ಕೊಟ್ಟಾಗ ಸಂವಿಧಾನದ ಆಶಯಗಳು ನಿಜವಾಗಲೂ ಜಾರಿಗೆ ಬರುವಂತಾಗುತ್ತದೆ’ ಎಂದು ಸಚಿವ ಸಿ.ಟಿ.ರವಿ ಹೇಳಿದರು. ಸಂವಿಧಾನ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿ, ಬಲಿತ ದಲಿತರು ಬಡ ದಲಿತರ ಬಗ್ಗೆ ಯೋಚಿಸುವುದೇ ಇಲ್ಲ. ಹೆಸರಿಗೆ ಮಾತ್ರ ನಮ್ಮ ಸಮುದಾಯ ಎನ್ನುತ್ತಾರೆ. ಅಧಿಕಾರದ ವಿಷಯದಲ್ಲಿ ಬಿಟ್ಟುಕೊಡಬೇಕಾದಾಗ ಜಾಣ ಮೌನ ವಹಿಸುತ್ತಾರೆ ಎಂದರು.
ಸ್ವಾರ್ಥ, ಮತವಾದ, ಮತ ಬ್ಯಾಂಕ್ ರಾಜಕಾರಣ ಈಗ ನಡೆಯುತ್ತಿದೆ. ಅಂಬೇಡ್ಕರ್ ಅವರು ವಂಶ ಪಾರಂಪರ್ಯ ರಾಜಕಾರಣ ಹೇಳಿರಲಿಲ್ಲ. ಮಗ, ಮೊಮ್ಮಗ, ಸೊಸೆ ಎಲ್ಲರಿಗೂ ಅಧಿಕಾರ ಬೇಕು ಎಂಬ ಸ್ಥಿತಿ. ಸಮುದಾಯದಿಂದಲೇ ಅಸ್ತಿತ್ವ ಉಳಿಸಿ ಕೊಂಡಿರುವ ಪಕ್ಷಗಳೂ ಇವೆ ಎಂದು ಪರೋಕ್ಷವಾಗಿ ಜೆಡಿಎಸ್‌ಗೆ ಟಾಂಗ್ ನೀಡಿದರು.
ಆಗ ಜೆಡಿಎಸ್ ಸದಸ್ಯರು, ಬಿಜೆಪಿಯಲ್ಲಿ ವಂಶ ಪಾರಂಪರ್ಯ ಇಲ್ಲವೇ? ಯಡಿಯೂರಪ್ಪ ಪುತ್ರ ರಾಘವೇಂದ್ರ ಸಂಸದರಾಗಿಲ್ಲವೇ? ಎಂದು ಪ್ರಶ್ನಿಸಿದರು. ಬಿಜೆಪಿಯ ಎಂ.ಪಿ.ಕುಮಾರಸ್ವಾಮಿ, ಮೀಸ ಲಾತಿ ವಿಚಾರ ಬಂದಾಗ ದಲಿತರ ಬಗ್ಗೆ ಮಾತ್ರ ಯಾಕೆ ಮಾತನಾಡುತ್ತೀರಿ? ಎಲ್ಲ ಸಮುದಾಯದವರೂ ಬಿಟ್ಟು ಕೊಡಿ. ಬಲಿತ ಒಕ್ಕಲಿಗರು ಬಡ ಒಕ್ಕಲಿಗರಿಗೆ, ಬಲಿತ ಲಿಂಗಾಯಿತರು ಬಡ ಲಿಂಗಾಯಿತರಿಗೆ, ಬಲಿತ ಕುರುಬರು ಬಡ ಕುರುಬರಿಗೆ ಯಾಕೆ ಬಿಟ್ಟುಕೊಡಬಾರದು ಎಂದು ಪ್ರಶ್ನಿಸಿದರು.
ಇದಕ್ಕೆ ಜೆಡಿಎಸ್‌ನ ಅನ್ನದಾನಿ, ಇದಕ್ಕೆ ನನ್ನ ಸಹಮತ ವಿದೆ ಎಂದರು. ಆಗ, ಕಾಂಗ್ರೆಸ್‌ನ ಭೀಮಾನಾಯಕ್, ಸಿ.ಟಿ.ರವಿ ಅವರು ನಾಲ್ಕು ಬಾರಿ ಆರಿಸಿಬಂದು ಎರಡು ಬಾರಿ ಸಚಿವರಾಗಿದ್ದಾರೆ. ಈಗ ಅವರು ಬಲಿತ ಗುಂಪಿಗೆ ಸೇರಿದ್ದು ಬಡವರಿಗೆ ಬಿಟ್ಟುಕೊಡಬೇಕು ಎಂದು ಕಿಚಾಯಿಸಿದರು. ಮಾತು ಮುಂದುವರಿಸಿದ ಸಿ.ಟಿ.ರವಿ, ನಾನು ಯಾವುದೇ ಪಕ್ಷದ ಬಗ್ಗೆ ಮಾತನಾಡಿಲ್ಲ, ಯಾರನ್ನೂ ಕುಂಬಳ ಕಾಯಿ ಕಳ್ಳ ಎಂದೂ ಹೇಳಿಲ್ಲ. ವಾಸ್ತವ ಹೇಳಿದೆ ಅಷ್ಟೇ ಎಂದರು.
ಮತ್ತೂಂದು ಸಂದರ್ಭದಲ್ಲಿ ಸಿ.ಟಿ.ರವಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಾಣ ಕಳೆದುಕೊಂಡ ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ ಎಲ್ಲರ ಬಗ್ಗೆಯೂ ನನಗೆ ಗೌರವವಿದೆ. ಆದರೆ, ತುಕ್ಡೆ ತುಕ್ಡೆ ಗ್ಯಾಂಗ್ ಸಮರ್ಥಿಸಿಕೊಳ್ಳುವವರ ಬಗ್ಗೆಯೇ ನನ್ನ ತಕರಾರು. ಸಿಎಎ ಬಗ್ಗೆ ಇಲ್ಲ ಸಲ್ಲದ ಪುಕಾರು ಹಬ್ಬಿಸಿ ಗೊಂದಲ ಮೂಡಿಸಿ ರಾಜಕೀಯ ಲಾಭಕ್ಕೆ ಯತ್ನಿಸುತ್ತಿರುವವರ ವಿರುದ್ಧ ನನ್ನ ತಕರಾರು ಎಂದರು.
ಆಗ, ಕಾಂಗ್ರೆಸ್ ಸದಸ್ಯರು ಸಿ.ಟಿ.ರವಿ ವಿರುದ್ಧ ಮುಗಿಬಿದ್ದು, ಯಾರಾ ದರೂ ತಪ್ಪು ಮಾಡಿದ್ದರೆ ನಿಮ್ಮದೇ ಸರ್ಕಾರ ಇದೆ ಕ್ರಮ ಕೈಗೊಳ್ಳಿ. ಸಂವಿಧಾನ ಕುರಿತು ಚರ್ಚೆ ಮಾಡುವ ಬದಲು ಬೇರೆ ಮಾತನಾಡುತ್ತಿದ್ದೀರಿ ಎಂದರು. ಜೆಡಿಎಸ್‌ನ ಶಿವಲಿಂಗೇಗೌಡ, ಚರ್ಚೆ ಸರಿ ದಾರಿಯಲ್ಲಿ ನಡೆಯುತ್ತಿತ್ತು. ಸಿ.ಟಿ.ರವಿ ಅವರು ಟೈಂ ಬಾಂಬ್ ಇಟ್ಟಿದ್ದರಿಂದ ಹಾದಿ ತಪ್ಪುತ್ತಿದೆ ಎಂದರು. ಸ್ಪೀಕರ್ ಮಧ್ಯೆ ಪ್ರವೇಶಿಸಿ, ವಿಷಯಾಂತರ ಬೇಡ ಎಂದು ಸೂಚಿಸಿದರು.