ಕಟಪಾಡಿ: ಈ ಬಾರಿ ದೀಪಾವಳಿ ಸಂದರ್ಭ ಜಿಐ ಮಾನ್ಯತೆಯೊಂದಿಗೆ ಪೇಟೆಂಟ್ ಪಡೆದಿರುವ ಮಟ್ಟುಗುಳ್ಳವು ಭರಪೂರವಾಗಿ ಮಾರುಕಟ್ಟೆಗೆ ಹರಿದು ಬರುವ ಸಾಧ್ಯತೆ ಇದೆ.
ಈಗಾಗಲೇ ಬೆಳೆದು ನಿಂತ ಅಲ್ಪಪ್ರಮಾಣದ ಮಟ್ಟುಗುಳ್ಳವು ಉಡುಪಿ, ಮಂಗಳೂರು ಹಾಗೂ ಸ್ಥಳೀಯವಾಗಿ ಮಾರುಕಟ್ಟೆಗೆ ಪ್ರವೇಶಿಸಿದ್ದು ಮಟ್ಟುಗುಳ್ಳ ಪ್ರಿಯರಿಗೆ ಸಂತಸದ ಸುದ್ದಿಯಾಗಿದೆ.
ನವರಾತ್ರಿಯ ಸಂದರ್ಭ ಮಾರುಕಟ್ಟೆ ಪ್ರವೇಶಿಸಲು ಸಿದ್ಧಗೊಳ್ಳುತ್ತಿದ್ದ ಮಟ್ಟುಗುಳ್ಳವು ಈ ಬಾರಿ ಪ್ರಕೃತಿ ವಿಕೋಪದಿಂದ ಪ್ರವಾಹಕ್ಕೆ ತುತ್ತಾಗಿ ಬೆಳೆಗಾರರು ಕೈ ಸುಟ್ಟು ಕೊಳ್ಳುವಂತಾಗಿತ್ತು. ಮಟ್ಟುಗುಳ್ಳ ಬೆಳೆಗಾರರು ಆತಂಕಕ್ಕೀಡಾಗಿದ್ದರು. ಆದರೆ ಮತ್ತೆ ಮಟ್ಟುಗುಳ್ಳ ಸಸಿ ನಾಟಿ ಮಾಡಿದ್ದು ಫಸಲನ್ನು ಕಂಡುಕೊಂಡ ಬೆಳೆಗಾರರು ಮಟ್ಟುಗುಳ್ಳವು ಬೇಡಿಕೆಯುಕ್ತವಾಗಿ ಮಟ್ಟುಗುಳ್ಳ ಪ್ರಿಯರಿಗೆ ಸಂತಸವನ್ನು ನೀಡಲು ಸಿದ್ಧಗೊಳ್ಳುತ್ತಿದ್ದಾರೆ.
ಇದನ್ನೂ ಓದಿ:ಇದ್ದೂ ಇಲ್ಲದಂತಾದ ಪಾದಚಾರಿ ಸುರಂಗ ಮಾರ್ಗ! ಜನ ಬಳಕೆಗೆ ದೊರೆಯದ ಸೌಕರ್ಯ
ಬೆಳೆ ನಾಶದಿಂದ ಚೇತರಿಕೆ ಕಂಡುಕೊಂಡ ಬೆಳೆಗಾರರು ಪುನರಪಿ ಸಸಿ ಮಾಡಿ ನಾಟಿ ಮಾಡಲಾಗಿದೆ. ಈ ಸಾಲಿನಲ್ಲಿ ಕಟಪಾಡಿ, ಉಡುಪಿ, ಮಂಗಳೂರು ಮಾರುಕಟ್ಟೆಗಳಿಗೆ ಲಗ್ಗೆ ಇರಿಸಿದ್ದ ಮಟ್ಟುಗುಳ್ಳವು ಕಿಲೋವೊಂದರ ಸುಮಾರು 160 ರೂ.ನಿಂದ 180 ರೂ. ವರೆಗೆ ಮಾರುಕಟ್ಟೆಯಲ್ಲಿ ಮಾರಾಟಗೊಳ್ಳುತ್ತಿದೆ. ಫಸಲು ಹೆಚ್ಚಿನ ಪ್ರಮಾಣದಲ್ಲಿ ಸಂಘಕ್ಕೆ ಬಂದಾಗ ಸ್ವಾಭಾವಿಕವಾಗಿ ದರವೂ ಕಡಿಮೆ ಆಗುವ ಸಾಧ್ಯತೆ ಇದೆ ಎಂದು ಮಟ್ಟುಗುಳ್ಳ ಬೆಳೆಗಾರರ ಸಂಘದ ಕಾರ್ಯದರ್ಶಿ ನಾಗರಾಜ್, ಆಡಳಿತ ಮಂಡಳಿ ಸದಸ್ಯರಾದ ಸುಧಾಕರ ಡಿ. ಅಮೀನ್ ಪಾಂಗಾಳ ಗುಡ್ಡೆಗರಡಿ, ನಾರಾಯಣ ಜಿ. ಬಂಗೇರ, ಯಶೋಧರ ಮಟ್ಟು, ಪ್ರವೀಣ್ ಎಸ್. ಪೂಜಾರಿ ತಿಳಿಸಿದ್ದು, ದೀಪಾವಳಿಯ ಸಂದರ್ಭದಲ್ಲಿ ಮಟ್ಟುಗುಳ್ಳದ ಫಸಲು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಯನ್ನು ಕಂಡುಕೊಳ್ಳುವ ಸಾಧ್ಯತೆ ಇದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಜಿಐ ಮಾನ್ಯತೆ:
ಇಲ್ಲಿನ ಕೃಷಿಕರು ಭತ್ತದ ಬೆಳೆಯನ್ನು ಬೆಳೆಯುವ ಗದ್ದೆಯಲ್ಲಿ ಪ್ರತೀವರ್ಷ ಗುಳ್ಳ ಕೃಷಿ ಮಾಡುತ್ತಾರೆ. ಅನೇಕರು ಜೂನ್, ಜುಲೈ ತಿಂಗಳಲ್ಲಿ ಬೆಳೆಯಲಾಗುವ ಕಾರ್ತಿ ಭತ್ತದ ಬೆಳೆಯನ್ನು ಮೊಟಕುಗೊಳಿಸಿ ಗುಳ್ಳಕೃಷಿಗಾಗಿ ಗದ್ದೆ ಹಡಿಲುಬಿಟ್ಟು ಗುಳ್ಳದ ಬಿತ್ತನೆ ನಡೆಸುತ್ತಾರೆ. ಮೂರು ತಿಂಗಳ ಕಾಲಾವಕಾಶದಲ್ಲಿ ಸಸಿ ಬಲಿತು ಸಮೃದ್ಧ ಗುಳ್ಳದ ಬೆಳೆಯಾಗುತ್ತದೆ. ಇದೀಗ ಜಿಐ ಮಾನ್ಯತೆಯೊಂದಿಗೆ ಪೇಟೆಂಟ್ ಪಡೆದು ಲಾಂಛನ (ಸ್ಟಿಕ್ಕರ್) ದೊಂದಿಗೆ ಮುಂಬಯಿ, ಬೆಂಗಳೂರು ಸೇರಿದಂತೆ ದೇಶ ವಿದೇಶಗಳಲ್ಲಿ ಮಟ್ಟುಗುಳ್ಳ ಪ್ರಿಯರಿದ್ದು, ಅಲ್ಲಿಗೂ ಕಾಲಕಾಲಕ್ಕೆ ಮಟ್ಟುಗುಳ್ಳ ಸರಬರಾಜು ಮಾಡಲಾಗುತ್ತಿತ್ತು. ಆದರೆ ಈ ಬಾರಿ ಪ್ರಾಕೃತಿಕ ವಿಕೋಪಕ್ಕೆ ಮಟ್ಟುಗುಳ್ಳ ಬೆಳೆಯೇ ನಾಶವಾಗಿದ್ದು, ಈ ಬಾರಿಯ ನವರಾತ್ರಿಯೂ ಮಟ್ಟುಗುಳ್ಳ ಪ್ರಿಯರಿಗೆ ನಿರಾಸೆ ಮೂಡಿಸಿತ್ತು. ದೀಪಾವಳಿಯ ಸಂದರ್ಭವು ಮಟ್ಟುಗುಳ್ಳ ಪ್ರಿಯರಿಗೆ ಸಂತಸ ತರಬಹುದು.
ಈ ಬಾರಿ ಸುಮಾರು 96 ಬೆಳೆಗಾರರಿಂದ ಸುಮಾರು 70 ಎಕರೆ ಪ್ರದೇಶದಲ್ಲಿ ಮಟ್ಟುಗುಳ್ಳ ಬೆಳೆಯಲಾಗಿದೆ. ಭತ್ತದ ಕೃಷಿಯ ಫಸಲು, ಕಟಾವಿನ ಅನಂತರ ಮತ್ತೆ ಎಲ್ಲಾ ಬೆಳೆಗಾರರು ಮಟ್ಟುಗುಳ್ಳ ಬೆಳೆಯುತ್ತಾರೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಫಸಲನ್ನು ನಿರೀಕ್ಷಿಸ ಬಹುದು. ದೀಪಾವಳಿ ಕಳೆದ ಕೂಡಲೇ ಹೆಚ್ಚಿನ ಪ್ರಮಾಣದ ಮಟ್ಟುಗುಳ್ಳವು ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎಂದು ಮಟ್ಟುಗುಳ್ಳ ಬೆಳೆಗಾರರ ಸಂಘದ ನಿರ್ದೇಶಕ ಯಶೋಧರ ಮಟ್ಟು ಪ್ರತಿಕ್ರಿಯಿಸಿದ್ದಾರೆ
ನೆರೆಯಿಂದಾಗಿ ಬೆಳೆಹಾನಿಯ ಕುರಿತು ತೋಟಗಾರಿಕಾ ಇಲಾಖೆಗೆ ಮನವಿ ನೀಡಲಾಗಿದೆ. ಸರಕಾರದಿಂದ ಯಾವುದೇ ಪರಿಹಾರ ಇದುವರೆಗೆ ಲಭಿಸಿಲ್ಲ. ಅಧಿಕಾರಿಗಳು ಪರಿಹಾರ ನೀಡುವ ಭರವಸೆ ನೀಡಿದ್ದಾರೆ ಎಂದು ಮಟ್ಟುಗುಳ್ಳ ಬೆಳೆಗಾರರ ಸಂಘದ ಕಾರ್ಯದರ್ಶಿ ನಾಗರಾಜ್ ತಿಳಿಸಿದ್ದಾರೆ.
ವಿಜಯ ಆಚಾರ್ಯ, ಉಚ್ಚಿಲ