ಕನ್ನಡದ ಬಹುತೇಕ ಹಿರಿಯ ಕಾಮಿಡಿ ಕಲಾವಿದರೇ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ಔಟ್ ಆ್ಯಂಡ್ ಔಟ್ ಕಾಮಿಡಿ ಕಥಾಹಂದರದ “ಮತ್ತೆ ಮತ್ತೆ’ ಸಿನಿಮಾ ಇದೇ ಜನವರಿ 19ಕ್ಕೆ ಬಿಡುಗಡೆಯಾಗುತ್ತಿದೆ. ಈಗಾಗಲೇ ತನ್ನ ಟೈಟಲ್, ಬೃಹತ್ ಕಲಾವಿದರ ತಾರಾಗಣದ ಮೂಲಕ ಗಮನ ಸೆಳೆಯುತ್ತಿರುವ ಸಿನಿಮಾವಿದು.”ಮತ್ತೆ ಮತ್ತೆ’ ಔಟ್ ಆ್ಯಂಡ್ ಔಟ್ ಕಾಮಿಡಿ ಕಥಾಹಂದರದ ಸಿನಿಮಾ. ಮೂಲತಃ ಉಪನ್ಯಾಸಕರಾಗಿರುವ, ಪತ್ರಕರ್ತರಾಗಿ ಗುರುತಿಸಿಕೊಂಡಿರುವ ಜೊತೆಗೆ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲೂ ಸಕ್ರಿಯವಾಗಿರುವ ಡಾ. ಅರುಣ್ ಹೊಸಕೊಪ್ಪ “ಮತ್ತೆ ಮತ್ತೆ’ ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ.
ಸಿನಿಮಾ ಮಾಡಲು ಹೊರಡುವ ಹುಡುಗರ ಸಂಕಟ, ಸವಾಲುಗಳು ಹೇಗಿರುತ್ತದೆ. ಎಂಬುದನ್ನು ಮನರಂಜನಾತ್ಮಕವಾಗಿ ತೆರೆಮೇಲೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಡಾ. ಅರುಣ್ ಹೊಸಕೊಪ್ಪ. ಸಿನಿಮಾದ ಕಥೆ ಮತ್ತು ಅದರಲ್ಲಿ ಹೇಳಿರುವ ವಿಷಯಗಳು ಆಗಾಗ್ಗೆ ನಮ್ಮ ನಡುವೆ ಪ್ರಸ್ತಾಪವಾಗುತ್ತಲೇ ಇರುತ್ತದೆ. ಹಾಗಾಗಿ ಸಿನಿಮಾಕ್ಕೆ “ಮತ್ತೆ ಮತ್ತೆ’ ಎಂಬ ಟೈಟಲ್ ಇಡಲಾಗಿದೆ ಎಂದಿದೆ ಚಿತ್ರತಂಡ.
ಬಹುತಾರಗಣದ “ಮತ್ತೆ ಮತ್ತೆ’ ಸಿನಿಮಾದಲ್ಲಿ ಕನ್ನಡದ ಹಿರಿಯ ಹಾಸ್ಯನಟರಾದ ಎಂ. ಎಸ್ ಉಮೇಶ್, ಡಿಂಗ್ರಿ ನಾಗರಾಜ್, ಮುಖ್ಯಮಂತ್ರಿ ಚಂದ್ರು, ಹೊನ್ನವಳ್ಳಿ ಕೃಷ್ಣ, ಕೋಟೆ ಪ್ರಭಾಕರ್, ತುಮಕೂರು ಮೋಹನ್, ಶ್ರೀನಿವಾಸ ಗೌಡ, ಸುಮಾರಾವ್, ಕುಳ್ಳ ಅನಂತ್, ರತ್ನಮಾಲಾ, ಅಂಜನಪ್ಪ, ಆರ್. ಜೆ. ವಿಕ್ಕಿ ಹೀಗೆ ಅನೇಕ ಹಿರಿಯ ಮತ್ತು ಕಿರಿಯ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ನಟಿ ಸಂಜನಾ ಗಲ್ರಾನಿ ಕೂಡ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಮಲೆನಾಡಿನ ಒಂದಷ್ಟು ಸ್ಥಳೀಯ ಕಲಾವಿದರಿಗೆ ಸಿನಿಮಾದಲ್ಲಿ ಅವಕಾಶ ನೀಡಲಾಗಿದೆ. ನೆಲಮಂಗಲ, ಬೆಂಗಳೂರು, ಮುರುಡೇಶ್ವರ, ತೀರ್ಥಹಳ್ಳಿ ಸುತ್ತಮುತ್ತ ಸುಮಾರು 70ಕ್ಕೂ ಹೆಚ್ಚು ದಿನಗಳ ಕಾಲ “ಮತ್ತೆ ಮತ್ತೆ’ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ.