Advertisement

ಮಾತೃವಂದನ –ಮಾತೃಶ್ರೀ ಕುರಿತು ಗೊಂದಲ

11:55 PM Jun 20, 2019 | mahesh |

ನಗರ: ಗರ್ಭಿಣಿಯರಿಗೆ ಸಂಬಂಧಿಸಿದಂತೆ ಇರುವ ಮಾತೃವಂದನ ಹಾಗೂ ಮಾತೃಶ್ರೀ ಯೋಜನೆಯ ಕುರಿತು ಜನರಲ್ಲಿ ಗೊಂದಲವಿದೆ ಎನ್ನುವ ವಿಚಾರ ಮಹಿಳಾ ಮತ್ತು ಮಕ್ಕಳ ರಕ್ಷಣೆಗೆ ಸಂಬಂಧಿಸಿದ ತಾಲೂಕು ಮಟ್ಟದ ಸಮನ್ವಯ ಸಮಿತಿಗಳ ಸಭೆಯಲ್ಲಿ ಗುರುವಾರ ಪ್ರಸ್ತಾವವಾಯಿತು. ಸಭೆ ತಾ.ಪಂ. ಸಭಾಂಗಣದಲ್ಲಿ ಉಪ ತಹಶೀಲ್ದಾರ್‌ ಶ್ರೀಧರ್‌ ಕೆ. ಅಧ್ಯಕ್ಷತೆಯಲ್ಲಿ ನಡೆಯಿತು. ತಾ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಹರೀಶ್‌ ಬಿಜತ್ರೆ ಈ ಕುರಿತು ಸಭೆಯ ಗಮನ ಸೆಳೆದರು.

Advertisement

ಉತ್ತರಿಸಿದ ಪ್ರಭಾರ ಸಿಡಿಪಿಒ ಭಾರತಿ, ಗರ್ಭಿಣಿಯರಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ಮಾತೃವಂದನ ಹಾಗೂ ರಾಜ್ಯ ಸರಕಾರದ ಮಾತೃಶ್ರೀ ಯೋಜನೆ ಚಾಲ್ತಿಯಲ್ಲಿವೆ. ಮಾತೃವಂದನದಲ್ಲಿ ಮೊದಲ ಹೆರಿಗೆಗೆ ಮಾತ್ರ ಹಣ ಪಾವತಿಯಾಗುತ್ತದೆ. ಇದಕ್ಕೆ ಎಲ್ಲ ವರ್ಗಗಳ ಮಹಿಳೆಯರೂ ಅರ್ಹರಾಗಿರುತ್ತಾರೆ. ಮಾತೃಶ್ರೀ ಯೋಜನೆ ಮೊದಲ ಹಾಗೂ ಎರಡನೇ ಹೆರಿಗೆಯಲ್ಲಿ ಹಣ ಪಾವತಿಯಾಗುತ್ತದೆ. ಈ ಯೋಜನೆ ಬಿಪಿಎಲ್ ಪಡಿತರ ಹೊಂದಿದವರಿಗೆ ಮಾತ್ರ ಅನ್ವಯವಾಗುತ್ತದೆ. ಮಾತೃಶ್ರೀಯಲ್ಲಿ ಪ್ರಸವಪೂರ್ವ 3 ಸಾವಿರ ರೂ. ಹಾಗೂ ಪ್ರಸವ ಅನಂತರದಲ್ಲಿ 3 ಸಾವಿರ ರೂ. ಸೇರಿ ಒಟ್ಟು 6 ಸಾವಿರ ರೂ. ನೀಡಲಾಗುತ್ತದೆ. ಯಾವ ಯೋಜನೆಯಲ್ಲಿ ಅರ್ಜಿ ನೀಡಿದರೂ ಸ್ವೀಕರಿಸಲಾಗುತ್ತದೆ ಎಂದರು.

ಮಾಹಿತಿ ನೀಡಬೇಕು
ಮಾದಕ ವಸ್ತು ಸೇವನೆ ನಿಷೇಧ ಸಮಿತಿಯ ಕುರಿತ ಚರ್ಚೆಯ ಸಂದರ್ಭದಲ್ಲಿ ಸದಸ್ಯನಾಗಿದ್ದರೂ ಜಾಗೃತಿ ಕಾರ್ಯಕ್ರಮಗಳ ಸಂದರ್ಭದಲ್ಲಿ ನನ್ನ ಗಮನಕ್ಕೆ ಬರುತ್ತಿಲ್ಲ ಎಂದು ಸಾಮಾಜಿಕ ನ್ಯಾಯ ಆಸಮಿತಿ ಅಧ್ಯಕ್ಷ ಹರೀಶ್‌ ಬಿಜತ್ರೆ ಅಸಮಾಧಾನ ವ್ಯಕ್ತಪಡಿಸಿದರು. ಪೊಲೀಸ್‌ ಇಲಾಖೆಯಿಂದ ನಡೆಸುವ ಜಾಗೃತಿ ಕಾರ್ಯಕ್ರಮಗಳಿಗೆ ನಾವು ಸಹಕಾರ ನೀಡುತ್ತೇವೆ. ಮುಂದೆ ಸಮರ್ಪಕ ಮಾಹಿತಿ ನೀಡಲಾಗುವುದು ಎಂದು ಸಿಡಿಪಿಒ ಹೇಳಿದರು.

ಮಾದಕ ವಸ್ತುಗಳ ಬಳಕೆಯ ಪರಿಣಾಮಕ್ಕೆ ಸಂಬಂಧಿಸಿದಂತೆ ಸಿಡಿಪಿಒ ಇಲಾಖೆಯಿಂದ ಶಾಲೆ, ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು. ಯಾವುದೇ ವಿದ್ಯಾರ್ಥಿ ಒಂದು ಬಾರಿ ಮಾದಕ ವಸ್ತುಗಳಿಗೆ ಮಾರುಹೋದರೆ ಕಷ್ಟ. ಈ ಕಾರಣದಿಂದ ಗಂಭೀರವಾಗಿ ಪರಿಗಣಿಸಬೇಕು ಎಂದು ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌ ಸಲಹೆ ನೀಡಿದರು.

ಬಸ್‌ನಲ್ಲಿ ಮಕ್ಕಳಿಗೆ ಕಿರುಕುಳ
ಕೆಎಸ್‌ಆರ್‌ಟಿಸಿ ಬಸ್ಸುಗಳಲ್ಲಿ ಮಕ್ಕ ಳನ್ನು ದೂಡುವುದು, ಎಲ್ಲೆಂದರಲ್ಲಿ ಇಳಿಸುವುದು ಕಂಡುಬರುತ್ತಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಹರೀಶ್‌ ಬಿಜತ್ರೆ ಹೇಳಿದರು. ಅಂತಹ ದೂರುಗಳು ಬಂದರೆ ಮಕ್ಕಳ ರಕ್ಷಣಾ ಘಟಕಕ್ಕೆ ತಿಳಿಸಬೇಕು. ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಬಹುದು. ಈ ಕುರಿತು ಜಿಲ್ಲಾಮಟ್ಟದ ಸಭೆಯಲ್ಲಿ ಪ್ರಸ್ತಾಪಿಸಲಾಗುವುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಜೀರ್‌ ಭರವಸೆ ನೀಡಿದರು. ತಾ.ಪಂ. ಮಾಜಿ ಅಧ್ಯಕ್ಷ ಭವಾನಿ ಚಿದಾನಂದ ಉಪಸ್ಥಿತರಿದ್ದರು. ಸಮನ್ವಯ ಸಮಿತಿಗಳ ಸದಸ್ಯತ್ವ ಹೊಂದಿರುವ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next