ಮುಂಬಯಿ: ಮ್ಯಾಟ್ರಿಮೋನಿಯಲ್‌ನಲ್ಲಿ ಮಾಹಿತಿ ಸಂಗ್ರಹಿಸಿ, ಮದುವೆ ಪ್ರಸ್ತಾವ ಸಲ್ಲಿಸಿದ್ದ ನಕಲಿ ವೈದ್ಯನನ್ನು ನಂಬಿ ಮಹಿಳೆಯೊಬ್ಬರು 3.12 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಆರೋಪಿ ತನ್ನನ್ನು ಯುಕೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೃದ್ರೋಗ ತಜ್ಞ ಡಾ| ಅಹಮದ್ ಹಕೀಂ ಎಂದು ಪರಿಚಯಿಸಿಕೊಂಡು, ಬೂಲೇಶ್ವರದ ನಿವಾಸಿಯಾದ ಮಹಿಳೆಗೆ ಮದುವೆ ಪ್ರಸ್ತಾವ ಮಾಡುವ ಎರಡು ವಾರಗಳ ಹಿಂದಿನಿಂದಲೇ ಸಂದೇಶಗಳನ್ನು ರವಾನಿಸುತ್ತಿದ್ದ.
ಎ. 28ರಂದು ದಿಲ್ಲಿ ವಿಮಾನ ನಿಲ್ದಾಣದಲ್ಲಿ ಕಸ್ಟಂ ಆಫೀಸರ್ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಮಹಿಳೆಗೆ ಕರೆ ಮಾಡಿ ಡಾ| ಹಕೀಂ ಅವರನ್ನು ಕಸ್ಟಂ ಆಫೀಸಿನಲ್ಲಿ ತಡೆಹಿಡಿಯಲಾಗಿದೆ ಎಂದು ತಿಳಿಸಿದ್ದಾನೆ. ಅನಂತರ ನಕಲಿ ಕಸ್ಟಂ ಆಫೀಸರ್ ಡಾ| ಹಕೀಂ ಮಹಿಳೆ ಜತೆ ಮಾತನಾಡಬೇಕು ಎನ್ನುತ್ತಿದ್ದಾರೆ ಎಂದಿದ್ದಾನೆ. ಬಳಿಕ ಮಹಿಳೆ ಬಳಿ ಹಕೀಂ ತಾನು ಬೆಂಗಳೂರಿನಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲು ಹಣವನ್ನು ತಂದಿರುವುದಾಗಿ ಹೇಳಿ, ತನ್ನನ್ನು ಬಿಡುಗಡೆಗೊಳಿಸಲು 58,600 ರೂ. ಪಾವತಿಸಲು ಕೇಳಿಕೊಂಡಿದ್ದಾನೆ ಎಂದು ಮಲಬಾರ್ ಹಿಲ್ಸ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ಮಹಿಳೆ ತತ್‌ಕ್ಷಣ ಹಣವನ್ನು ವರ್ಗಾಯಿಸಿದ್ದಾರೆ. ವಂಚಕನೂ ಇನ್ನು ಹಣ ಪಾವತಿಸುವಂತೆ ಕೇಳಿಕೊಂಡಿದ್ದು, ಮಹಿಳೆ ಆತನಿಗೆ 89,000 ರೂ. ಮತ್ತು 1,65,000 ರೂ. ಗಳನ್ನು ಪ್ರತ್ಯೇಕವಾಗಿ ವರ್ಗಾವಣೆ ಮಾಡಿದ್ದಾರೆ.