ಹಾರರ್ ಸಿನಿಮಾ ಎಂದ ಮೇಲೆ ಭಯ ಬೀಳಲೇಬೇಕು ಎಂದು ನಂಬಿಕೊಂಡು ಸಿನಿಮಾ ಮಾಡುವ ನಿರ್ದೇಶಕರದ್ದ ಒಂದು ಕೆಟಗರಿಯಾದರೆ, ಇನ್ನೊಂದಿಷ್ಟು ನಿರ್ದೇಶಕರು ಭಯಕ್ಕಿಂತ ಪ್ರೇಕ್ಷಕ ನಗುತ್ತಲೇ, ಕುತೂಹಲ ಹೆಚ್ಚಿಸಿಕೊಳ್ಳಬೇಕು ಎಂದು ನಂಬಿರುತ್ತಾರೆ. ಈ ವಾರ ತೆರೆಕಂಡಿರುವ “ಮ್ಯಾಟ್ನಿ’ ಸಿನಿಮಾದ ನಿರ್ದೇಶಕ ಇಲ್ಲಿ ಎರಡನೇ ಕೆಟಗರಿಗೆ ಸೇರಿದವರು. ಏಕೆಂದರೆ “ಮ್ಯಾಟ್ನಿ’ ಒಂದು ಹಾರರ್ ಸಿನಿಮಾ. ಆದರೆ, “ಆ ಫೀಲ್’ನಿಂದ ಹೊರತಾಗಿ ಪ್ರೇಕ್ಷಕರನ್ನು ನಗಿಸುತ್ತಾ ಸಾಗುವ ಸಿನಿಮಾವಿದು ಎಂದರೆ ತಪ್ಪಲ್ಲ. ಈ ಸಿನಿಮಾದಲ್ಲಿ ಆತ್ಮದ ಆಟವಿದೆ. ಆದರೆ, ಆ ಆತ್ಮ ಸಿಕ್ಕಾಪಟ್ಟೆ “ಫ್ರೆಂಡ್ಲಿ’. ತುಂಬಾ ಭಯಬೀಳಿಸುವುದಿಲ್ಲ.
“ನಮ್ಮ-ನಿಮ್ಮ ಜೊತೆ ಕೂತು ಮಾತನಾಡುವ ಆತ್ಮ’. ಹಾಗಾದರೆ, ಸಿನಿಮಾದ ಕಥೆ ಏನು, ಅಷ್ಟೊಂದು “ಒಳ್ಳೆಯ’ ಆತ್ಮದ ಹಿಂದಿನ “ವ್ಯಕ್ತಿ’ ಯಾರು ಎಂಬ ಕುತೂಹಲವೇ ಸಿನಿಮಾದ ಹೈಲೈಟ್. ಸಾಮಾನ್ಯವಾಗಿ ಹಾರರ್ ಸಿನಿಮಾಗಳಲ್ಲಿ ಇರುವ ಕಿಟಾರನೇ ಕಿರುಚುವ ಪಾತ್ರಗಳು, ಗೆಜ್ಜೆ ಸದ್ದು, ದಪ್ ಎಂದು ಏಕಾಏಕಿ ಬೀಳುವ ಬಾಗಿಲು, ಪಾಸಿಂಗ್ ಶಾಟ್‌ನಲ್ಲಿ ಓಡಾಡುವ ಆತ್ಮ… ಇವೆಲ್ಲವೂ “ಮ್ಯಾಟ್ನಿ’ಯಲ್ಲಿ ಇದ್ದರೂ ಪ್ರೇಕ್ಷಕರನ್ನು ಹೆಚ್ಚು ಭಯಬೀಳಿಸದೇ, ಮುಂದಿನ ಕುತೂಹಲ ಹೆಚ್ಚಿಸುತ್ತಾ ಸಾಗುವುದು “ಮ್ಯಾಟ್ನಿ’ಯ ಪ್ಲಸ್.
ಈ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಗಂಭೀರವಾದ ಕಥೆಯೇನು ಇಲ್ಲ. ಆದರೆ, ನಿರ್ದೇಶಕರು ಸನ್ನಿವೇಶಗಳ, ಸಂಭಾಷಣೆಯ ಮೂಲಕ ಸಿನಿಮಾವನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಸಿನಿಮಾದ ಮೊದಲರ್ಧ ಸ್ನೇಹಿತರ ಆಟ, ಕಾಟವಾದರೆ, ದ್ವಿತೀಯಾರ್ಧ ಪ್ರೇಮ ಮತ್ತು ತಿರುವು. ಇದೇ ಸಿನಿಮಾದ ಹೈಲೈಟ್. ಈ ಹಂತದಲ್ಲಿ ಒಂದಷ್ಟು ವಿಚಾರಗಳನ್ನು ಸಿನಿಮಾ ಪ್ರೇಕ್ಷಕರ ಮಡಿಲಿಗೆ ಹಾಕುತ್ತಾ ಸಾಗುತ್ತದೆ. ಈ ಪಯಣದಲ್ಲಿ ಒಂದೆರಡು ಸುಂದರ ಹಾಡುಗಳು ಕೂಡಾ “ಹಾರರ್’ ಫೀಲ್ ಅನ್ನು ಮರೆಸುತ್ತದೆ ಕೂಡಾ.
ನಾಯಕ ನೀನಾಸಂ ಸತೀಶ್ ಅವರಿಗೆ ಈ ಪಾತ್ರ ತುಂಬಾ ಹೊಸದು. ಪಾತ್ರವಾಗಿ ಇಷ್ಟವಾಗುವ ಅವರು, ಸಖತ್ ಸ್ಟೈಲಿಶ್ ಆಗಿಯೂ ಕಾಣಿಸಿಕೊಂಡಿದ್ದಾರೆ. ನಾಯಕಿ ರಚಿತಾ, ಅದಿತಿ ನಾಯಕಿಯರು. ಕ್ಲೈಮ್ಯಾಕ್ಸ್ ನಲ್ಲಿ ರಚಿತಾ ಪಾತ್ರ ಗಮನ ಸೆಳೆಯುತ್ತದೆಯಷ್ಟೇ. ಉಳಿದಂತೆ ಶಿವರಾಜ್ ಕೆ.ಆರ್.ಪೇಟೆ, ಪೂರ್ಣ ಇತರರರು ನಟಿಸಿದ್ದಾರೆ. ಹಾರರ್ ಸಿನಿಮಾವನ್ನು “ನಗುತ್ತಾ’ ನೋಡಬಯಸುವವರಿಗೆ “ಮ್ಯಾಟ್ನಿ’ ಇಷ್ಟವಾಗಬಹುದು.
ರವಿಪ್ರಕಾಶ್ ರೈ