ನಮ್ಮೆಲ್ಲರಿಗಿಂತ ಮುಂಚಿತವಾಗಿಯೇ ಬಂದು, ಯಾರಿಗೂ ತೋರಿಸದೆ ಕಾಲೇಜ್ ಗಾರ್ಡನ್‌ಲ್ಲಿ ಅವಳ ಕೈಗೆ ಲವ್‌ಲೆಟರ್ ತಲುಪಿಸಿದ್ದ. ಅದನ್ನವಳು ಖುಷಿಯಿಂದ ಓದಿದವಳೇ ಬಿಚ್ಚಿದ ಪತ್ರವನ್ನು ಮಡಚಿ, ರಪ್ಪನೆ ಅವನ ಮುಖಕ್ಕೆ ಎಸೆದಳು.
ಅದು ನಾನು ಡಿಗ್ರಿ ಓದುತ್ತಿದ್ದ ಸಮಯ. ಕಾಲೇಜ್‌ನಲ್ಲಿ ಲವ್‌ಸ್ಟೋರಿಗಳಿಗೆ ಬರವಿರಲಿಲ್ಲ, ಅದರೊಳಗೆ ನಮ್ಮದೊಂದು ದೊಡ್ಡ ಫ್ರೆಂಡ್ಸ್‌ಗ್ರೂಪ್ ಇತ್ತು. ಅಲ್ಲಿ ಪ್ರೀತಿ, ಸ್ನೇಹ, ನಂಬಿಕೆ, ತುಂಟಾಟ ತುಂಬಿ ತುಳುಕುತ್ತಿತ್ತು. ನಮ್ಮ ಫ್ರೆಂಡ್‌ಶಿಪ್ ಯಾವ ರೀತಿಯದ್ದು ಎಂದರೆ, ನಮ್ಮೊಳಗೆ ಯಾರಾದರೂ ಒಬ್ಬರು ಕ್ಲಾಸ್‌ಗೆ ಗೈರಾದರೇ ಅಂದು ನಾವೆಲ್ಲರೂ ಗೈರೇ.
ನಮ್ಮ ಗ್ರೂಫ್ನ ಹುಡುಗನೊಬ್ಬ ನಮ್ಮದೇ ಕ್ಲಾಸಿನ ಹುಡುಗಿಯೊಬ್ಬಳನ್ನು ಬಹುದಿನಗಳಿಂದ ಪ್ರೀತ್ಸೋದಕ್ಕಿಂತ ಹೆಚ್ಚಾಗಿ ತುಂಬಾ ಆರಾಧಿಸುತ್ತಿದ್ದ. ಅವಳ ಕುರಿತು ಅಸಂಖ್ಯಾತ ಕನಸುಗಳನ್ನು ಕಟ್ಟಿಕೊಂಡಿದ್ದ. ಅವಳು ಹೇಳುವ ಮೂರೇ ಮೂರಕ್ಷರದ ಪ್ರತ್ಯುತ್ತರಕ್ಕಾಗಿ ಹಗಲಿರುಳು ಪರಿತಪಿಸುತ್ತಿದ್ದ. ಸಾಕಷ್ಟು ಸಾರಿ ಲವ್‌ಲೆಟರ್ ಕೊಟ್ಟು, ಹಲವು ಬಾರಿ ತನ್ನ ಮನದ ತುಮುಲಗಳನ್ನು ನೇರಾನೇರ ಅವಳೆದುರು ಹೇಳಿಕೊಂಡರೂ, ಅವಳ ಕಡೆಯಿಂದ ಮರು ಉತ್ತರ ಬರದಿದ್ದರಿಂದ ಕಂಗಾಲಾಗಿ ಹೋಗಿದ್ದ.
ಒಂದು ದಿನ ಕಾಲೇಜ್ ಕ್ಯಾಂಟಿನ್‌ನಲ್ಲಿ ನಾವೆಲ್ಲ ಹರಟುತ್ತಾ ಕೂತಿದ್ದಾಗಲೇ, ನಮ್ಮ ಲವರ್ ಬಾಯ್ ಆಕಾಶವೇ ಕಳಚಿ ಬಿದ್ದವನಂತೆ ಚಿಂತಾಕ್ರಾಂತನಾಗಿ ಬಂದು ಕುಳಿತುಕೊಂಡ. ನಾವೆಲ್ಲರೂ ವಿಚಾರಿಸತೊಡಗಿದೆವು. ಆತ ಕಣ್ಣೀರಿನೊಂದಿಗೆ ಅವಳ ಪ್ರೀತಿಯ ಕತೆ ಹೇಳ್ಳೋಕೆ ಶುರುಮಾಡಿದ. ಅವಳಿಲ್ಲದ ನನ್ನ ಬದುಕೇ ಶೂನ್ಯವೆಂದ. ಸಮಸ್ಯೆಗೊಂದು ಶಾಶ್ವತ ಪರಿಹಾರ ನೀಡಲೇಬೇಕೆಂದು ದಯನೀಯವಾಗಿ ಕೇಳಿಕೊಂಡ. ಆಗ ಎಲ್ಲರೂ ಆತನ ಕಷ್ಟ ಪರಿಹಾರಕ್ಕೆ ಉಪಾಯ ಹುಡುಕಿದ್ದೇ ಹುಡುಕಿದ್ದು. ಕೊನೆಗೆ ನಾನು ಕೊಟ್ಟ ಐಡಿಯಾವನ್ನೇ ಗೆಳೆಯರೆಲ್ಲರೂ ಅನುಮೋದಿಸಿದರು. ಆಮೇಲೆ, ನೀನು ಇಲ್ಲಿಯವರೆಗೆ ಅವಳಿಗೋಸ್ಕರ ಮಾಡಿದ ಎಲ್ಲ ಖರ್ಚುವೆಚ್ಚಗಳನ್ನು ಒಂದು ಪಟ್ಟಿ ಮಾಡಿಕೊಂಡು ಬಾರೋ, ಅದರ ಮುಂದಿನ ಆಟವನ್ನು ನೀನೇ ನಿನ್ನ ಕಣ್ಣಾರೆ ನೋಡುವೆಯಂತೆ ಎಂದೆವು.
ಆತ ಮರುದಿನವೇ ಬಿಳಿ ಹಾಳಿಯೊಂದರಲ್ಲಿ ಲವ್‌ಲೆಟರ್ ಎಂಬ ದೊಡ್ಡ ಶೀರ್ಷಿಕೆಯಡಿ ರೆಡ್ ರೋಸ್‌ಗೆ 30 ರೂ, ಡೈರಿ ಮಿಲ್ಕ್ ಚಾಕೊಲೇಟ್‌ಗೆ 50 ರೂ, ಮೊಬೈಲ್ ಕರೆನ್ಸಿಗೆ 500 ರೂ, ಒಂದು ಜೊತೆ ಡ್ರೆಸ್700 ರೂ, ಎರಡು ಜೊತೆ ಚಪ್ಪಲಿಗಳು 600 ರೂ, ಹೀಗೆ.. ದೊಡ್ಡ ಬಿಲ್ಲನ್ನು ಬರೆದು ಕೊಂಡು ಬಂದಿದ್ದ. ಅವಳ ಮೇಲೆ ಎಲ್ಲಿಲ್ಲದ ಕೋಪವನ್ನು ವ್ಯಕ್ತಪಡಿಸಿದ್ದು ಈ ಲೆಟರ್‌ನಲ್ಲಿ ಸ್ಪಷ್ಟವಾಗಿ ಎದ್ದು ಕಾಣುತ್ತಿತ್ತು.
ಅಂದು ನಮ್ಮೆಲ್ಲರಿಗಿಂತ ಮುಂಚಿತವಾಗಿಯೇ ಬಂದು, ಯಾರಿಗೂ ತೋರಿಸದೆ ಕಾಲೇಜ್ ಗಾರ್ಡನ್‌ಲ್ಲಿ ಅವಳ ಕೈಗೆ ಲವ್‌ಲೆಟರ್ ತಲುಪಿಸಿದ್ದ. ಅದನ್ನವಳು ಖುಷಿಯಿಂದ ಓದಿದವಳೇ ಬಿಚ್ಚಿದ ಪತ್ರವನ್ನು ಮಡಚಿ, ರಪ್ಪನೆ ಅವನ ಮುಖಕ್ಕೆ ಎಸೆದಳು. ನಿನ್ನ ಮೇಲೆ ನನ್ನಲ್ಲೂ ಹೇಳಿಕೊಳ್ಳಲಾಗದಷ್ಟು ಪ್ರೀತಿಯಿತ್ತು. ಆದರೆ ಈಗ ಎಳ್ಳಷ್ಟೂ ಇಲ್ಲಾ, ಇನ್ನೊಮ್ಮೆ ನಿನ್ನ ಮುಖವನ್ನು ತೋರಿಸಬೇಡ, ಹೊರಟು ಹೋಗು ಎಂದು ಕಣ್ಣೀರಿಡುತ್ತಾ ಹೊರಟು ಹೋದಳು. ದೂರದಿಂದಲೇ ನಿಂತು ನೋಡುತ್ತಿದ್ದ ನಾವೆಲ್ಲರೂ ಆತನನ್ನು ಸಮಾಧಾನಿಸಿದೆವು. ಕ್ಷಣದೊಳಗೆ ಕಾಲೇಜ್‌ನಲ್ಲಿ ಈ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತು. ಹಾಗೋ ಹೀಗೋ ಲವ್‌ಲೆಟರ್ ಕಾಲೇಜಿನ ಎಲ್ಲರ ಕೈಯಿಂದ ಕೈಗೆ ಪಾರಾಗಿ ಕೊನೆಗೆ ನಾಲ್ಕು ತುಂಡಾಗಿ ನಮ್ಮ ಕೈ ಸೇರಿತು. ಖರಾಬ್ ಐಡಿಯಾ ಕೊಟ್ಟಿದ್ದಕ್ಕಾಗಿ ನಾನಂತೂ ಎಲ್ಲರೆದುರು ನಗೆಪಾಟಲಿಗೆ ಈಡಾಗಬೇಕಾಯಿತು. ಡಿಗ್ರಿ ಮುಗಿಯುವ ತನಕ ನನ್ನನ್ನು ಲವ್‌ಲೆಟರ್ ಎಂಬ ನಿಕ್ಕಿ ಹೆಸರಿನಿಂದಲೇ ಕರೆದು ರೇಗಿಸುತ್ತಿದ್ದರು. ಈಗಲೂ ಲವ್‌ಲೆಟರ್ ಎಂದರೆ ಸಾಕು ಮೊಗದೊಳಗೆ ನಗು ಹಾಗೂ ಭಯ ಎರಡೂ ಏಕಕಾಲಕ್ಕೆ ಮೂಡಿ ಮರೆಯಾಗುತ್ತವೆ.
ರಂಗನಾಥ್ ಗುಡಿಮನಿ