Advertisement

ಅರ್ಹರಿಗೆ ತಲುಪಲಿ ಮಾತೃಶ್ರೀ ಯೋಜನೆ

07:19 AM Mar 06, 2019 | |

ವಿಜಯಪುರ: ರಾಜ್ಯ ಸರ್ಕಾರ ಗರ್ಭೀಣಿಯರಿಗೆ ಕಲ್ಪಿಸಿರುವ ಮಾತೃಶ್ರೀ ಯೋಜನೆಯ ಎಲ್ಲ ಸೌಲಭ್ಯಗಳನ್ನು ಸಕಾಲಕ್ಕೆ ಅರ್ಹ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೊಹ್ಮದ್‌ ಮೊಹಸೀನ್‌ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಮಂಗಳವಾರ ನರಗದ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಇಲಾಖೆಗಳ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಈ ಸೂಚನೆ ನೀಡಿದ ಅವರು, ಗರ್ಭೀಣಿಯರಿಗೆ 6 ಸಾವಿರ ರೂ. ಪ್ರೋತ್ಸಾಹ ಧನ ನೀಡಲು ಮಾತೃಶ್ರೀ ಯೋಜನೆಯಲ್ಲಿ ಅವಕಾಶವಿದೆ. ಸದರಿ ಯೋಜನೆಯಲ್ಲಿ ಅರ್ಹರಿಂದ ಅರ್ಜಿ ಪಡೆಯಬೇಕು.
 
ಅಂಗನವಾಡಿ ಕೇಂದ್ರಗಳಲ್ಲಿ ಈಗಾಗಲೇ ಮಾತೃಪೂರ್ಣ ಯೋಜನೆಯಲ್ಲಿ 10 ಸಾವಿರ ಅರ್ಜಿದಾರರು ಸೌಲಭ್ಯ ಪಡೆಯುತ್ತಿದ್ದು, ಈ ಸೌಲಭ್ಯ ಕಲ್ಪಿಸಲು ಗಂಭೀರವಾಗಿ ಕೆಲಸ ಮಾಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಶಾಲಾ ಕೊಠಡಿಗಳ ನಿರ್ಮಾಣದಲ್ಲಿ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಹಾಗೂ ಪಿಆರ್‌ಇಡಿ ಇಲಾಖೆ ಅಧಿಕಾರಿಗಳ ಮಧ್ಯೆ ಸಮನ್ವಯ ಕೊರತೆ ಕಾಣುತ್ತಿದೆ. ಹೀಗಾಗಿ ಉಭಯ ಇಲಾಖೆ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾಮಗಾರಿಗಳನ್ನು ಆದ್ಯತೆ ಮೇಲೆ ಪೂರ್ಣಗೊಳಿಸಬೇಕು. ಜಿಪಂ ಸಿಇಒ ಹಾಗೂ ಉಪ ಕಾರ್ಯದರ್ಶಿಗಳು ಕಾಮಗಾರಿ ಪರಿಶೀಲನೆ ನಡೆಸಬೇಕು ಎಂದು ನಿರ್ದೇಶನ ನೀಡಿದರು.

ವಿವಿಧ ಅಭಿವೃದ್ಧಿ ನಿಗಮಗಳ ವ್ಯಾಪ್ತಿಯಲ್ಲಿ ಬರುವ ಗಂಗಾ ಕಲ್ಯಾಣ ಯೋಜನೆಯಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳು, ಕೊರೆಸಿದ ಕೊಳವೆ ಬಾವಿಗಳು, ವಿದ್ಯುತ್‌ ಸಂಪರ್ಕ ಕಲ್ಪಿಸುವುದು ಸೇರಿದಂತೆ ಪೂರ್ಣ ಅನುದಾನದ ಸದ್ಬಳಕೆ ಮಾಡಬೇಕು. ಅಲ್ಲದೇ ಈ ಕುರಿತು ಅಧಿಕಾರಿಗಳು ವರದಿ ಸಲ್ಲಿಸುವಂತೆ ತಾಕೀತು ಮಾಡಿದರು.

ಜಿಲ್ಲೆಯಲ್ಲಿ ವಿವಿಧ ಸಮುದಾಯ ಭವನಗಳಿಗೆ ಜಮೀನು ಇದ್ದಲ್ಲಿ ತಕ್ಷಣ ಜಮೀನು ಹಸ್ತಾಂತರಿಸಬೇಕು. ಜಮೀನು ಲಭ್ಯ ಇಲ್ಲದಿದ್ದಲ್ಲಿ, ದಾಖಲಾತಿ ನೀಡದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

Advertisement

ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ಅವಶ್ಯಕ ನೀರು ಪೂರೈಕೆ ಮಾಡಬೇಕು. ಮೇವಿನ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು. ಬಾಕಿ ಇರುವ ಪೋಡಿ ಪ್ರಕರಣಗಳನ್ನು ಶೀಘ್ರ ವಿಲೇವಾರಿ ಮಾಡಬೇಕು ಎಂದು ಸೂಚಿಸಿದರು.
 
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ನಡೆದಿರುವ ಕಾಮಗಾರಿ, ಈವರೆಗೆ ನೀಡಿದ ಹಾಗೂ ಬಳಕೆಯಾದ ಅನುದಾನದ ಕುರಿತು ಪರಿಶೀಲಿಸಬೇಕು. ಆಯುಷ್‌ ಇಲಾಖೆ ವ್ಯಾಪ್ತಿಯಲ್ಲಿ ಕೈಗೊಳ್ಳಲಾದ ವಿವಿಧ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪರಿಶೀಲನೆ ನಡೆಸಬೇಕು.

ಇತ್ತೀಚೆಗೆ ವಿಜಯಪುರದಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಹಾಗೂ ಉದ್ಯೋಗಾವಕಾಶ ಲಭ್ಯವಾಗಿರುವ ಕುರತು ಖಾತ್ರಿ ಪಡಿಸಿಕೊಂಡು ಬಗ್ಗೆ ಸಮಗ್ರ ಅಂಕಿ-ಅಂಶ ಸಂಗ್ರಹಿಸಬೆಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಾರಿಗೆ ಇಲಾಖೆಯಿಂದ ತಾಳಿಕೋಟೆ ಹಾಗೂ ಇಂಡಿ ಬಸ್‌ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಪಟ್ಟ ಸೂಕ್ತ ವರದಿಯನ್ನು ಸಲ್ಲಿಸುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವೈ. ಎಸ್‌. ಪಾಟೀಲ, ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆಯಾದ ಅನುದಾನ, ಶಂಕುಸ್ಥಾಪನೆ ಹಂತದಲ್ಲಿರುವ ಕಾಮಗಾರಿಗಳು, ಉದ್ಘಾಟನೆ ಹಂತದಲ್ಲಿರುವ ಕಾಮಗಾರಿ, ಆರಂಭವಾಗಿರುವ ಹಾಗೂ ಆರಂಬಿಸದ ಕಾಮಗಾರಿಗಳ ಬಗ್ಗೆ ಎಲ್ಲ ಇಲಾಖಾಧಿಕಾರಿಗಳು ಎರಡು ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದರು. ಜಿಪಂ ಸಿಇಒ ವಿಕಾಸ ಸುರಳಕರ ಅವರು ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಗುರಿಗೆ ತಕ್ಕಂತೆ ಪ್ರಗತಿ ಸಾಧಿಸಬೇಕು.

ಅನುದಾನ ಸಮರ್ಪಕವಾಗಿ ಬಳಕೆಯಾಗುವಂತೆ ನೋಡಿಕೊಳ್ಳಬೇಕು. ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧ ಸಿಆರ್‌ ವರದಿಯಲ್ಲಿ ನಮೂದು ಮಾಡಲಾಗುವುದು. ಅದರಂತೆ ಅಭಿವೃದ್ಧಿ ಕಾರ್ಯಗಳ ಅನುಷ್ಠಾನದ ಜವಾಬ್ದಾರಿ ಹೊಂದಿರುವ ಪಿಆರ್‌ಇಡಿ, ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ ಹಾಗೂ ನಿರ್ಮಿತಿ ಕೇಂದ್ರದೊಂದಿಗೆ ಆಯಾ ಇಲಾಖೆ ಅಧಿಕಾರಿಗಳು ಸಮನ್ವಯತೆ ಸಾಧಿಸಿ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳ್ಳುವಂತೆ ನೋಡಿಕೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲೆಯ ಎಲ್ಲ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಆಯಾ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸೂಕ್ತ ಸಮನ್ವಯತೆ ಸಾಧಿಸಬೇಕು. ಯಾವುದೇ ಪರಿಸ್ಥಿತಿಯಲ್ಲಿ ಅನುದಾನ ಬಳಸದೇ ಹಿಂದಿರುಗಿಸುವ ಅಧಿಕಾರಿಗಳ ಬಗ್ಗೆ ಸರ್ಕಾರಕ್ಕೆ ಸೂಕ್ತ ವರದಿ ಸಲ್ಲಿಸಲಾಗುವುದು. ಇಂದಿನ ಸಭೆಗೆ ಗೈರು ಹಾಜರಾಗಿರುವ ಕೆಬಿಜೆಎನ್‌ ಎಲ್‌ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್‌ ಜಾರಿಗೊಳಿಸಿ. 
 ಮೊಹ್ಮದ್‌ ಮೊಹಸೀನ್‌ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next