Advertisement

ಎಲ್ಲ ಬಾಂಧವ್ಯ, ಸಂಬಂಧ ಮೀರಿದವಳು ತಾಯಿ: ಯಶವಂತ 

11:00 AM May 19, 2018 | |

ಮಹಾನಗರ: ಎಲ್ಲ ಬಾಂಧವ್ಯ ಸಂಬಂಧಗಳನ್ನು ಮೀರಿದವಳು ತಾಯಿ. ತಾನು ಎಲ್ಲೆಡೆ ಇರಲಾರೆ ಎಂಬ ಕಾರಣಕ್ಕಾಗಿ ದೇವರು ತಾಯಿಯನ್ನು ಸೃಷ್ಟಿಸಿದ ಎಂಬ ಮಾತನ್ನು ಅಕ್ಷರಶಃ ರುಜುವಾತು ಮಾಡಿಕೊಟ್ಟವಳು. ಹೆಜ್ಜೆಯಿಡಲು ಕಲಿಸಿದವಳು, ಕೈ ತುತ್ತು ನೀಡಿದವಳು, ಕರುಳ ಕುಡಿಯ ಜೀವನಕ್ಕಾಗಿ ತನ್ನ ಜೀವವನ್ನು ಸವೆಸಿದವಳು, ಕಂದನ ಪ್ರತಿ ಯಶಸ್ಸಿನಲ್ಲೂ ಆಕೆಯ ಪಾಲಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಯಶವಂತ ಪೂಜಾರಿ ತಿಳಿಸಿದರು.

Advertisement

ಯುವವಾಹಿನಿ ಕೂಳೂರು ಘಟಕದ ಆಶ್ರಯದಲ್ಲಿ ಕೂಳೂರು ಶ್ರೀ ನಾರಾಯಣ ಗುರು ಸಭಾಭವನದಲ್ಲಿ ವಿಶ್ವ ತಾಯಂದಿರ ದಿನದ ಪ್ರಯುಕ್ತ ಜರಗಿದ ಮಾತೃ ವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಭ್ಯತೆ ಶಿಷ್ಟಾಚಾರದ ಶಿಕ್ಷಣವೇ ಸಂಸ್ಕಾರವಾಗಿದೆ. ಸುಸಂಸ್ಕೃತಿಯನ್ನು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಹಸ್ತಾಂತರಿಸುವ ಪ್ರಕಿಯೆಯೇ ಸಂಸ್ಕಾರವಾಗಿದೆ. ಈ ನಿಟ್ಟಿನಲ್ಲಿ ಯುವವಾಹಿನಿ ಕೂಳೂರು ಘಟಕದ ಮಾತೃ ವಂದನಾ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣ ಎಂದರು.

ತಾಯಿ ಪ್ರೀತಿ ಬತ್ತದ ಕಡಲು
ಯುವವಾಹಿನಿ ಮಂಗಳೂರು ಘಟಕದ ಉಪಾಧ್ಯಕ್ಷ ಲಕ್ಷ್ಮೀನಾರಾಯಣ ಮಾತನಾಡಿ, ಕಾಲ ಬದಲಾಗಬಹುದು ಮಕ್ಕಳು ಬದಲಾಗಬಹುದು. ಆದರೆ ತಾಯಿ ಮತ್ತು ಆಕೆಯ ಪ್ರೀತಿ ಎಂದಿಗೂ ಬದಲಾಗಲಾರದು. ಅವಳ ಪ್ರೀತಿ ಎಂಬುದು ಎಂದೂ ಬತ್ತದ ಕಡಲಿದ್ದಂತೆ. ತನ್ನ ಮಗು ಅಂಗವಿಕಲನೇ ಆಗಿರಲಿ, ಬುದ್ಧಿಮಾಂದ್ಯನೇ ಆಗಿರಲಿ ಇಡೀ ಸಮಾಜವೇ ಆತನನ್ನು ತಿರಸ್ಕಾರ ದೃಷ್ಟಿಯಿಂದ ನೋಡಿದರೂ, ತಾಯಿಯ ಮಮತೆ ಕಿಂಚಿತ್ತೂ ಕಡಿಮೆಯಾಗದು, ಅದಕ್ಕಾಗಿಯೇ ಅವಳು ದೇವರಿಗೆ ಸಮಾನಾಗಿ ನಿಂತಿದ್ದಾಳೆ ಎಂದರು. 

ಯುವವಾಹಿನಿ ಕೂಳೂರು ಘಟಕದ ಅಧ್ಯಕ್ಷ ಪುಷ್ಪರಾಜ್‌ ಅಧ್ಯಕ್ಷತೆ ವಹಿಸಿದ್ದರು. ಯುವವಾಹಿನಿ ಮಂಗಳೂರು ಘಟಕದ ಅಧ್ಯಕ್ಷ ನವೀನ್‌ಚಂದ್ರ ಹಾಗೂ ಸಲಹೆಗಾರ ನೇಮಿರಾಜ್‌ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಚಾಲಕಿ ತುಳಸಿ ಸುಜೀರ್‌ ವಂದಿಸಿದರು. ಮಾಜಿ ಅಧ್ಯಕ್ಷ ಸುಜಿತ್‌ರಾಜ್‌ ನಿರೂಪಿಸಿದರು.

Advertisement

ಪಾದ ಪೂಜೆ
ಯುವವಾಹಿನಿ ಕೂಳೂರು ಘಟಕದ ಸದಸ್ಯರು ತಮ್ಮ ತಾಯಂದಿರ ಪಾದ ಪೂಜೆ ನೆರವೇರಿಸಿ ತಾಯಂದಿರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಶ್ರೀ ಗೋಕರ್ಣನಾಥ ಕ್ಷೇತ್ರದ ಅರ್ಚಕರಾದ ನವೀನ್‌ ಶಾಂತಿ ಹಾಗೂ ಪುಟ್ಟು ಶಾಂತಿ ವೈದಿಕ ವಿಧಿವಿಧಾನಗಳನ್ನು ನೆರವೇರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next