ಉಡುಪಿ: ಗರ್ಭಿಣಿ ಮತ್ತು ಬಾಣಂತಿಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಟಿಕ ಆಹಾರ ವಿತರಿಸುವ ಮಾತೃಪೂರ್ಣ ಯೋಜನೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇವಲ ಶೇ. 25ರಷ್ಟು ಮಾತ್ರ ಪ್ರಗತಿ ಸಾಧಿಸಿದ್ದು ಗುರಿ ಸಾಧಿಸುವಲ್ಲಿ ಹಿನ್ನಡೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ 10,188 ಫಲಾನುಭವಿಗಳು ನೋಂದಾಯಿಸಿ ಕೊಂಡಿದ್ದು, 4,921 ಗರ್ಭಿಣಿಯರಲ್ಲಿ 1,143 ಮಂದಿ; 5,267 ಬಾಣಂತಿಯ ರಲ್ಲಿ 895 ಮಂದಿ ಬಿಸಿಯೂಟ ಸ್ವೀಕರಿಸುತ್ತಿದ್ದಾರೆ. ದ.ಕ. ಜಿಲ್ಲೆಯಲ್ಲಿ ಒಟ್ಟು 12,208 ಫಲಾನುಭವಿಗಳಿದ್ದು, ಅವರಲ್ಲಿ 1157 ಫಲಾನುಭವಿಗಳು ಬಿಸಿಯೂಟ ಸ್ವೀಕರಿಸುತ್ತಿದ್ದಾರೆ. ಮಾತೃಪೂರ್ಣ ಯೋಜನೆಗೆ ಚಾಲನೆ ನೀಡುವ ಸಂದರ್ಭ ಅಂಗನ ವಾಡಿ ಕಾರ್ಯಕರ್ತೆಯರ ಒತ್ತಾಯದ ಮೇರೆಗೆ ಗರ್ಭಿಣಿ, ಬಾಣಂತಿ ಯರು ಅಂಗನವಾಡಿಗಳಿಗೆ ಬಂದು ಆಹಾರ ಸ್ವೀಕರಿಸಿದ್ದರು. ಆದರೆ ಅನಂತರದ ದಿನಗಳಲ್ಲಿ ಬಹಳಷ್ಟು ಫಲಾನುಭವಿಗಳು ಅಂಗನವಾಡಿ ಕೇಂದ್ರಗಳಲ್ಲಿ ಬಂದು ಸೇವಿಸುತ್ತಿಲ್ಲ.
ಮನೆಯಲ್ಲೇ ಇದೆ ಪೌಷ್ಟಿಕ ಆಹಾರ
ಮಾತೃಪೂರ್ಣ ಯೋಜನೆಯಲ್ಲಿ ಬಿಸಿಯೂಟದೊಂದಿಗೆ ಮೊಟ್ಟೆಯನ್ನು ಮಾತ್ರ ವಿತರಣೆ ಮಾಡಲಾಗುತ್ತದೆ. ಆದರೆ ಕರಾವಳಿಯ ಹೆಚ್ಚಿನ ಮನೆಗಳಲ್ಲಿ ಮೀನು ಸಾರು ಹಾಗೂ ಉತ್ತಮ ಪೌಷ್ಟಿಕಾಂಶಯುಕ್ತ ಆಹಾರ ಇರುವುದು ಫಲಾನುಭವಿಗಳು ಅಂಗನವಾಡಿಯಿಂದ ದೂರವಿರಲು ಪ್ರಮುಖ ಕಾರಣ ಎನ್ನುತ್ತಾರೆ ಅಂಗನವಾಡಿ ಶಿಕ್ಷಕಿಯರು.
ಮನೆಗೇ ವಿತರಿಸಿ: ಸರಕಾರಕ್ಕೆ ಮನವಿ
ಪ್ರತಿ ತಿಂಗಳು ಶೇಕಡ ವಾರು ಪ್ರಗತಿಯ ಪರಿ ಶೀಲನೆ ನಡೆಯುತ್ತದೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಕಡಿಮೆ ಫಲಾನುಭವಿಗಳು ಈ ಯೋಜನೆಯನ್ನು ಬಳಸಿ ಕೊಳ್ಳುತ್ತಿರುವ ಪರಿಣಾಮ ಈ ಯೋಜನೆಯನ್ನು ಪರಿಣಾ ಮಕಾರಿಯಾಗಿ ಜಾರಿ ಮಾಡುವುದು ಕಷ್ಟ. ಗುಡ್ಡಗಾಡು ಪ್ರದೇಶದಿಂದ ಬಂದು ಊಟ ಮಾಡುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ಪೌಷ್ಟಿಕ ಆಹಾರವನ್ನು ತಿಂಗಳಿಗೊಮ್ಮೆ ಮನೆಗೆ ವಿತರಿಸಲು ಅವಕಾಶ ಮಾಡುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿ ಕಾರಿಗಳು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಯೋಜನೆಯಲ್ಲಿ ಏನಿದೆ?
ಮಾತೃಪೂರ್ಣ ಯೋಜನೆ ಯಲ್ಲಿ ಅನ್ನ, ಸಾಂಬಾರ್, ಪಲ್ಯದ ಜತೆ ಬೇಯಿಸಿದ ಮೊಟ್ಟೆ, 200 ಮಿ.ಲೀ. ಹಾಲು ಮತ್ತು ಚಿಕ್ಕಿ ನೀಡಲಾಗುತ್ತದೆ. ತಿಂಗಳಲ್ಲಿ ಕನಿಷ್ಠ 25 ದಿನ ಆಹಾರ ನೀಡುವ ಯೋಜನೆ ಇದಾಗಿದೆ.
ಅವಿಭಜಿತ ದ.ಕ. ಜಿಲ್ಲೆಯಲ್ಲಿ ಮಾತೃ ಪೂರ್ಣ ಯೋಜನೆಯನ್ನು ಫಲಾನುಭವಿಗಳು ಹೆಚ್ಚಿನ ಪ್ರಮಾಣದಲ್ಲಿ ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ. ಉಡುಪಿ ಶೇ. 34 ಹಾಗೂ ದ.ಕ.ದಲ್ಲಿ ಶೇ. 20ರಷ್ಟು ಮಾತ್ರ ಪ್ರಗತಿ ಸಾ ಧಿಸಲಾಗಿದೆ. ಆದ್ದರಿಂದ ತಿಂಗಳಿಗೊಮ್ಮೆ ಪೌಷ್ಟಿಕ ಆಹಾರ ವಿತರಿಸುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
-ಶೇಸಪ್ಪ, ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕ, ಉಡುಪಿ
– ಉಸ್ಮಾನ್, ಮಹಿಳಾ ಮಕ್ಕಳ ಇಲಾಖೆ ನಿರ್ದೇಶಕ ದ.ಕ.
– ತೃಪ್ತಿ ಕುಮ್ರಗೋಡು