Advertisement

ಗಣಿತದ ಮೇಷ್ಟ್ರು ಹಾಗೂ ಕೋಲಿನ ಏಟು…!!

03:25 PM Jan 19, 2021 | Team Udayavani |

“ಯಾರ್ಯಾರು ಹೋಮ್‌ ವರ್ಕ್‌ ಮಾಡಿಲ್ಲಾ ಎದ್ದು ನಿಂತ್ಕೋರಿ.. ಎಲ್ರನ್ನೂ ಚೆಕ್‌ ಮಾಡಿದಾಗ ಸಿಕ್ಕಿದ್ದೆ ಆದ್ರ ಡಬ್ಬಲ್‌ ಏಟ್‌ ಬಿಳ್ತಾವ ಮತ್ತ..” ಈ ಮಾತುಗಳು ಈಗಲೂ ನಮ್ಮ ಕಿವಿಯೊಳಗೆ ಗುಂಯ್‌ ಗುಡ್ತಾನೇ ಇವೆ. ನಮ್ಮ ಗೆಳೆಯರ ಬಳಗ ಎಲ್ಲಿಯಾದರೂ ಭೇಟಿ ಆದ್ರೆ ಗಣಿತ ಮಾಸ್ತರ್‌ರ ನೆನಪು ಮಾಡಿಕೊಳ್ಳದೇ ಇರುತ್ತಿರಲಿಲ್ಲ. ಅವರ ಆ ಮಾತುಗಳು, ಆ ಠೀವಿ, ಅವರ ಪಾಠ, ಅವರ ಶಿಸ್ತು, ಹಾಗೇನೇ ಅವರ ಹಿತ ನುಡಿಗಳು.

Advertisement

ಅವರ ಏಟುಗಳಂತೂ ಎಲ್ಲರಿಗೂ ಚಿರಪರಿಚಿತ. ಏಕೆಂದರೆ, ಎಲ್ಲರೂ ಅವರಿಂದ ಏಟುಗಳನ್ನು ತಿಂದವರೇ. ಆದರೂ ಅವರ ಮೇಲೆ ಯಾರಿಗೂ ಕೋಪವಿಲ್ಲ. ಅವರ ಏಟುಗಳಿಂದ ಆದ ನೋವು ನಮ್ಮ ಮನದಲ್ಲಿ ಎಳ್ಳಷ್ಟೂ ಇಲ್ಲ. ಆದರೆ ಈಗ
ಉಳಿದಿರುವುದು ಅವರ ನೆನಪು ಹಾಗೂ ಅವರ ಹಿತನುಡಿಗಳು ಮತ್ತು ಅವರ ಪಾಠ. ಅವರೇ ನಮ್ಮ ಮೆಚ್ಚಿನ ಗಣಿತ ಮೇಷ್ಟ್ರು ಉಮಾಕಾಂತ್‌ ಗುರುಗಳು.

ಹೈಸ್ಕೂಲ್‌ಗೆ ಬಂದಾಗಲೂ ನಾವು ಪ್ರ„ಮರಿ ಶಾಲೆಯ ತುಂಟರಂತೆಯೇ ಆಡುತ್ತಿದ್ದೆವು. ಆದರೆ ನಮ್ಮ ಆಟ ಜಾಸ್ತಿ ದಿನ ನಡೆಯಲಿಲ್ಲ. ಏನಿದ್ದರೂ ಪಾಠ. ಅದರಲ್ಲೂ ಗಣಿತ ಪಾಠ, ಗಣಿತಕ್ಕೆ ಸಂಬಂಧಿಸಿದ ಹೋಮ್‌ ವರ್ಕ್‌, ಟೆಸ್ಟ್, ಅಂಕಗಳು, ನೋಟ್ಸ್‌ ಎಲ್ಲವೂ ಮುಖ್ಯವಾಗತೊಡಗಿದವು. ಕಾರಣ ನಮ್ಮ ಗಣಿತ ಮೇಷ್ಟ್ರು. ಅವರ ಏಟಿನ ರುಚಿಯಿಂದಾಗಿ ಎಲ್ಲಾ ಅಪ್‌ಡೇಟ್‌
ಅವತ್ತಿಂದವತ್ತೆ. ಅವರ ಏಟನ್ನು ತಿಂದು ಒದ್ದೆ ಮಾಡಿಕೊಂಡವರೂ ಇದ್ದಾರೆ. ಆ ದಿನ ಮೇಷ್ಟ್ರಿಂದ ಏಟು ತಿನ್ನದೇ ಮನೆ ಸೇರಿದ್ದೇ ಆದಲ್ಲಿ ನಮಗೆ ಏನೋ ಸಾಧಿಸಿದಷ್ಟು ಖುಷಿ. ಅಥವಾ ಅವರು ಹೇಳಿದ್ದ ಹೋಮ್‌ ವರ್ಕ್‌, ನೋಟ್ಸ್‌, ಲೆಕ್ಕಗಳನ್ನು ಮಾಡಿ ಮುಗಿಸಿದ್ದಲ್ಲಿ ಏಳು ಬೆಟ್ಟಗಳನ್ನು ಹೊತ್ತ ಭಾರ ಕಡಿಮೆಯಾದಂತೆ. ನಮ್ಮ ಗಣಿತ ಮೇಷ್ಟ್ರು ತಾವು ಕೊಡುವ ಶಿಕ್ಷೆಗಷ್ಟೇ
ಹೆಸರಾಗಿರಲಿಲ್ಲ. ಅವರ ಪಾಠದಲ್ಲಿ ಹಾಸ್ಯ, ಗಾಂಭೀರ್ಯ ಕೂಡ ಇರುತ್ತಿತ್ತು. ತಪ್ಪು ಮಾಡಿದಾಗ ಶಿಕ್ಷಿಸಿ, ಒಳ್ಳೆಯ ಕೆಲಸ ಮಾಡಿದಾಗ ಮನದುಂಬಿ ಹೊಗಳುತ್ತಿದ್ದುದು ಅವರ ಒಳ್ಳೆಯ ಗುಣ. ಅದೊಮ್ಮೆ ನಾನು ಗಣಿತದಲ್ಲಿ ಇಪ್ಪತ್ತೆ„ದು ಅಂಕಕ್ಕೆ
ಇಪ್ಪತ್ತೆ„ದು ಅಂಕ ಪಡೆದಾಗ ಅವರ ಸಂಭ್ರಮ ಹೇಳತೀರದು. ಎಲ್ಲಾ ತರಗತಿಯ ಮಕ್ಕಳಿಗೆ ನನ್ನ ಉತ್ತರ ಪತ್ರಿಕೆಯನ್ನು ತೋರಿಸಿದ್ದು ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಅವರ ಉಳಿ ಏಟಿನಿಂದಾಗಿ ಇಂದು ನಾವು ಬದುಕಿನಲ್ಲಿ ಉತ್ತಮ ಸ್ಥಾನದಲ್ಲಿ
ಇರಲು ಸಾಧ್ಯವಾಯ್ತು ಎಂಬುದು ಸತ್ಯ. ಈಗ ಆ ಗಣಿತ ಮೇಷ್ಟ್ರು ಎಲ್ಲಿರುವರೋ ಏನೋ ಗೊತ್ತಿಲ್ಲ. ಅವರು ಎಲ್ಲಿದ್ದರೂ ಚೆನ್ನಾಗಿರಲಿ.

– ವೆಂಕಟೇಶ ಚಾಗಿ

Advertisement

Udayavani is now on Telegram. Click here to join our channel and stay updated with the latest news.

Next