ಗಣಿತ ಎಂದರೆ ನೆನಪಾಗುವುದು ಲೆಕ್ಕ. ಗಣಿತ ಎಂದರೆ ಕಷ್ಟ ಎಂದವರ ಸಂಖ್ಯೆ ಅಗಣಿತ. ಆದರೂ ಕೆಲವರು ಅದನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಅದರಲ್ಲಿ ನಾನೂ ಒಬ್ಬಳು. ಗಣಿತವು ಬರೀ ಅಂಕಗಳಿಗಾಗಿ ಅಲ್ಲ. ಬದಲಾಗಿ ಅದು ಜೀವನದುದ್ದಕ್ಕೂ ನಮ್ಮ ಬಾಳಸಂಗಾತಿಯಂತೆ ನಮ್ಮ ಜೊತೆಗಿರುತ್ತದೆ. ಹೀಗಿರುವಾಗ ಇದರ ಕಲಿಕೆ ಅಂಗನವಾಡಿಯಿಂದ ಹಿಡಿದು ಜೀವನ ಮುಗಿಯುವವರೆಗೂ ಮುಗಿಯದು. ಒಂದನೆಯ ತರಗತಿಯಲ್ಲಿ ಗಣಿತ ಎಂದರೆ ಏನೆಂದೇ ತಿಳಿಯದಿದ್ದ ನಮಗೆ ಸುಲಭ ವಿಧಾನ ಹೇಳಿಕೊಟ್ಟರು. ಅವರು 2+2 ಎಷ್ಟು ಎಂಬ ಪ್ರಶ್ನೆಗೆ ಉತ್ತರವನ್ನು ಹೀಗೆ ಹೇಳುತ್ತಿದ್ದರು. “ಎರಡು ಕಿಸೆಯಲ್ಲಿ, ಎರಡು ಕೈಯಲ್ಲಿ, ಕಿಸೆಯಲ್ಲಿರುವ ಎರಡು, ಬೆರಳಲ್ಲಿರುವ ಎರಡು, ಒಟ್ಟು ನಾಲ್ಕು’ ಎಂದು ಹೇಳಿ ಸುಲಭವಾಗಿ ಹೇಳಿಕೊಟ್ಟರು. ನಾನು ಎಷ್ಟು ಪ್ರಭಾವಿತಳಾಗಿ ದ್ದೇನೆಂದರೆ ಐದನೆಯ ತರಗತಿಯವರೆಗೂ ಅದೇ ವಿಧಾನವನ್ನು ಪಾಲಿಸುತ್ತಿದ್ದೆ. ಹೀಗೆ ಇದನ್ನು ಪಾಲಿಸಿದಾಗಲೆಲ್ಲ ಎಲ್ಲರೂ “ಆ ಕಿಸೆ ತೂತು ಆದೀತು ಜೋಕೆ’ ಎಂದು ಕಿಚಾಯಿಸುತ್ತಿದ್ದರು. ಅವರೆಷ್ಟೇ ರೇಗಿಸಿದರೂ ನಮ್ಮ ಟೀಚರ್ ಹೇಳಿಕೊಟ್ಟ ವಿಧಾನ ಮಾತ್ರ ಅಚ್ಚಳಿಯದೇ ನನ್ನಲ್ಲಿ ಉಳಿದು ಹೋಗಿದೆ. ಹೀಗೆ ಶಿಕ್ಷಕರು ಮಕ್ಕಳಿಗೆ ಅರ್ಥಮಾಡಿಸಲು ವಿಶಿಷ್ಟವಾದ ವಿಧಾನ ಗಳನ್ನು ಕಂಡುಹುಡುಕಿ ಅದರಲ್ಲಿ ಯಶಸ್ವಿಯಾಗುತ್ತಾರೆ.
ಚೈತ್ರಾ
ದ್ವಿತೀಯ ಬಿ.ಕಾಂ.
ಎಸ್‌ಡಿಪಿಟಿ ಪ್ರಥಮ ದರ್ಜೆ ಕಾಲೇಜು, ಕಟೀಲು