Advertisement

ಮಠಗಳು ನೆಮ್ಮದಿಯ ಕೇಂದ್ರಗಳು

09:48 AM Sep 22, 2018 | Team Udayavani |

ಸಿರಿಗೆರೆ: ಸಮಾಜದಲ್ಲಿ ನೆಮ್ಮದಿಯಿಂದ ಬದುಕಲು ಸಾಧ್ಯವಾಗದೆ ಒಂದಿಲ್ಲೊಂದು ಒತ್ತಡದ ನಡುವೆ ಜೀವಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ನಮ್ಮಲ್ಲಿ ಸಾಂಸ್ಕೃತಿಕ ಬದುಕನ್ನು ಜೀವಂತವಾಗಿರಿಸಲು ಹಲವು ಮಠಮಾನ್ಯಗಳು ನಾಡಿನಲ್ಲಿ ಶ್ರಮಿಸುತ್ತಿವೆ. ಅಂಥದ್ದರಲ್ಲಿ ತರಳಬಾಳು ಗುರು ಪರಂಪರೆ ಅಗ್ರಗಣ್ಯ ಸ್ಥಾನದಲ್ಲಿದೆ ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಬಣ್ಣಿಸಿದರು. 

Advertisement

ತರಳಬಾಳು ಜಗದ್ಗುರು ಲಿಂಗೈಕ್ಯ ಶ್ರೀಗಳಾದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ ಶ್ರದ್ಧಾಂಜಲಿ ಸಮಾರಂಭದ ಎರಡನೇ ದಿನವಾದ ಶುಕ್ರವಾರ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಕೋಟಿ ಹಣ ಕೊಟ್ಟರೂ ನೆಮ್ಮದಿಯ ಬದುಕು ಲಭ್ಯವಾಗುತ್ತಿಲ್ಲ. ಆದರೆ ಮಠಗಳು ಇಂದಿಗೂ ನೆಮ್ಮದಿಯ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದರು.

ಮಠಗಳು ಉತ್ತಮವಾಗಿದ್ದರೆ ಸಮಾಜವೂ ಉತ್ತಮವಾಗಿರುತ್ತದೆ. 26 ವರ್ಷಗಳ ಹಿಂದೆ ಲಿಂಗೈಕ್ಯರಾದ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರು ಇಂದಿಗೂ ಜೀವಂತವಾಗಿದ್ದಾರೆಂಬ ಭಾವ ಎಲ್ಲರಲ್ಲೂ ಮೂಡಿದೆ. ಸತ್ತರೂ ಬದುಕಿರುವಂತಹ ಹಾಗೂ ಬದುಕಿದ್ದರೂ ಸತ್ತಂತೆ ಇರುವ ಎರಡು ಬಗೆಯ ಜನರನ್ನು ನಾವು ಸಮಾಜದಲ್ಲಿ ಕಾಣುತ್ತೇವೆ. ಶಿವಕುಮಾರ ಮಹಾಸ್ವಾಮಿಗಳು ಶ್ರೇಷ್ಠ ಪರಂಪರೆಯನ್ನು ಹುಟ್ಟು ಹಾಕಿ ಭಕ್ತರು ಹಸನಾದ ಬದುಕನ್ನು ಸಾಗಿಸುವಂತೆ ಜೀವನ ಭದ್ರತೆ ನೀಡಿದರು ಎಂದು ಸ್ಮರಿಸಿದರು.

ತರಳಬಾಳು ಸ್ವಾಮಿಗಳೆಂದರೆ ನೇರ ನಡೆ ಮತ್ತು ನೇರ ನುಡಿಯ ಗುರುಗಳು. ಅವರು ಸಮಾಜದ ಆಸ್ತಿಯಂತಿದ್ದಾರೆ. ನಾನು ವೈಯಕ್ತಿಕವಾಗಿ ಮುಖ್ಯಮಂತ್ರಿಯೂ ಸೇರಿದಂತೆ ಯಾರಿಗೂ ಹೆದರುವುದಿಲ್ಲ. ಆದರೆ ಕಾಲಪ್ರಜ್ಞೆಯ ವಿಚಾರ
ಬಂದ ಕೂಡಲೇ ತರಳಬಾಳು ಸ್ವಾಮಿಗಳಿಗೆ ನಾನು ಹೆದರುತ್ತೇನೆ. ಅಂತಹ ಕಾಲಪ್ರಜ್ಞೆಯ ಶಕ್ತಿ ಅವರಿಗಿದೆ ಎಂದರು. ಸಿರಿಗೆರೆಯ ವೇದಿಕೆಯಲ್ಲಿ ಹಲವು ಮಕ್ಕಳು ನೀಡಿದಂತಹ ಸಾಂಸ್ಕೃತಿಕ ಚಟುವಟಿಕೆಗಳಿಂದ ನನ್ನ ಮನಸ್ಸು ಮುದಗೊಂಡಿದೆ. ಇಂತಹ ಅಪರೂಪದ ಕಾರ್ಯಕ್ರಮಗಳನ್ನು ನಾನು ಎಲ್ಲಿಯೂ ನೋಡಿರಲಿಲ್ಲ.

ಬಸವಣ್ಣನವರ ವಚನಗಳನ್ನು ಆಧರಿಸಿ ಪ್ರದರ್ಶನಗೊಂಡ ನೃತ್ಯಗಳು ಆಕರ್ಷಕವಾಗಿದ್ದವು. ಅದನ್ನು ನೋಡುತ್ತಾ ಕುಳಿತರೆ ಮನಸ್ಸಿನಲ್ಲಿನ ಎಲ್ಲ ಒತ್ತಡಗಳು ನಿವಾರಣೆಯಾಗುತ್ತವೆ ಎಂದು ಅಭಿಪ್ರಾಯಪಟ್ಟರು. ಮಾಧ್ಯಮಗಳು ಮತ್ತು ಮೊಬೈಲ್‌ಗ‌ಳಿಂದ ಮಕ್ಕಳು ಹಾಳಾಗುತ್ತಿದ್ದಾರೆ. ಮಕ್ಕಳನ್ನು ವೈದ್ಯರು ಮತ್ತು ಇಂಜಿನಿಯರ್‌ಗಳನ್ನು ಮಾಡುವ ತವಕ ಬಿಟ್ಟು ಅವರಲ್ಲಿ ಮಾನವೀಯ ಅಂಶಗಳನ್ನು ಬೆಳೆಸುವತ್ತ ಪೋಷಕರು ಗಮನ ನೀಡಬೇಕು. ವಿದ್ಯಾವಂತ ಮಕ್ಕಳು ತಮ್ಮ ತಂದೆ-ತಾಯಿಗಳನ್ನು ವೃದ್ಧಾಶ್ರಮದಲ್ಲಿ ಇರಿಸಿರುವ ಹಲವಾರು ಮನಕಲಕುವ ಸನ್ನಿವೇಶಗಳನ್ನು ಗಮನಿಸಿದ್ದೇವೆ. ಈ ರೀತಿ ಆಗದಂತೆ ನೋಡಿಕೊಳ್ಳಬೇಕಾಗಿರುವುದು ಪೋಷಕರ ಹೊಣೆ ಎಂದು ತಿಳಿಸಿದರು.

Advertisement

ತರಳಬಾಳು ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಡೂರು ಶಾಸಕ ಬೆಳ್ಳಿ ಪ್ರಕಾಶ್‌, ದಾವಣಗೆರೆ ಮೇಯರ್‌ ಪಲ್ಲಾಗಟ್ಟೆ ಶೋಭಾ, ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌ ಮಾತನಾಡಿದರು. ದಾವಣಗೆರೆ ಎಪಿಎಂಸಿ ಅಧ್ಯಕ್ಷ ಪರಮೇಶ್ವರಪ್ಪ ಉಪಸ್ಥಿತರಿದ್ದರು

 ಸಿರಿಗೆರೆ ಮಠದಿಂದ ರಾಜಕೀಯ ಮಾರ್ಗದರ್ಶನ
ಸಿರಿಗೆರೆ: ಮತದಾನ ಮಾಡುವ ಹಕ್ಕು ಇರುವವರೆಲ್ಲರೂ ರಾಜಕೀಯ ಮಾಡಬಹುದಾಗಿದೆ. ಸಿರಿಗೆರೆ ಮಠ ಎಂದಿಗೂ ತನಗಾಗಿ ರಾಜಕೀಯ ಮಾಡದೇ ಲೋಕ ಕಲ್ಯಾಣಕ್ಕಾಗಿ ರಾಜಕೀಯ ಮಾರ್ಗದರ್ಶನ ಮಾಡುತ್ತ ಬಂದಿದೆ ಎಂದು ಸಾಣೆಹಳ್ಳಿ ಮಠದ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು. 

ಶಿವಕುಮಾರ ಶಿವಾಚಾರ್ಯ ಸ್ವಾಮಿಗಳ ಶ್ರದ್ಧಾಂಜಲಿ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಹಿರಿಯ ಗುರು ರಾಜಕೀಯದಲ್ಲಿ ಬದ್ಧತೆ ತೋರಿದ್ದರು. ಅವರ ಕಾಲದಲ್ಲಿ “ಸಿರಿಗೆರೆ ಮಠ ಸೀನಿದರೆ ವಿಧಾನಸೌಧ ನಡುಗುತ್ತಿತ್ತು’ ಎಂಬ ಮಾತು ಜನಜನಿತವಾಗಿತ್ತು. ಆ ಕಾಲದ ರಾಜಕೀಯ ಮುತ್ಸದ್ಧಿಗಳು ಶಿವಕುಮಾರ ಶ್ರೀಗಳ ಅಣತಿ ಇಲ್ಲದೆ ರಾಜಕೀಯ ಮಾಡಿದವರಲ್ಲ. ಎಚ್‌. ಸಿದ್ಧವೀರಪ್ಪ ಮತ್ತು ದೇವರಾಜ ಅರಸು ಒಮ್ಮೆಲೆ ಮುಖ್ಯಮಂತ್ರಿಗಳಾಗಬೇಕಾದ ಸಂದರ್ಭ ಸೃಷ್ಟಿಯಾಗಿದ್ದಾಗ ಸ್ವತಃ ದೇವರಾಜ ಅರಸು ಸಿರಿಗೆರೆಗೆ ಹತ್ತಾರು ಬಾರಿ ಬಂದು ಗುರುಗಳನ್ನು ಭೇಟಿಯಾಗಿದ್ದರು. ಗ್ರಾಮ ಪಂಚಾಯತ್‌, ರಾಜ್ಯಸಭೆ, ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿ ತಾವು ಹೇಳಿದ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಗುರುಗಳು ಮತದಾರರಿಗೆ ಮಾರ್ಗದರ್ಶನ ಮಾಡುತ್ತಿದ್ದರು ಎಂದರು.

ಈಗ ರಾಜಕೀಯ ಕುಲಗೆಟ್ಟು ಹೋಗಿದೆ. ಗೌರವಾನ್ವಿತರು ರಾಜಕೀಯ ಮಾರ್ಗದರ್ಶನ ಮಾಡಿದರೆ ಅದನ್ನು ಬೇರೆಯೇ ರೂಪ ಕೊಟ್ಟು ನೋಡುತ್ತಾರೆ. ರಾಜಕಾರಣದಲ್ಲಿ ಒಬ್ಬ ಸ್ವಾಮಿ ಹೇಳಿದರೆ ತಪ್ಪು, ಮತ್ತೂಬ್ಬ ಸ್ವಾಮಿ ಹೇಳಿದರೆ ಬಾಯಿ ಮುಚ್ಚಿಕೊಂಡು ಇರುವಂತಹ ಸ್ಥಿತಿ ಬಂದಿದೆ. ತತ್ವ, ಬದ್ಧತೆ ಇಲ್ಲದೆ ಇರುವುದೇ ಇದಕ್ಕೆ ಕಾರಣ. ಆದ್ದರಿಂದ ಯುವಕರು ಮತ್ತು ವಿದ್ಯಾರ್ಥಿಗಳು ನಿಷ್ಠೆ ಮತ್ತು ನಿಷ್ಠುರತೆ ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next