Advertisement

ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಹೆಚ್ಚಿಸಬೇಕು

07:25 AM May 31, 2020 | Lakshmi GovindaRaj |

ತುಮಕೂರು: ಜಿಲ್ಲೆಯಲ್ಲಿ ತಾಯಿ ಮತ್ತು ಶಿಶುಮರಣಗಳ ಸಂಖ್ಯೆ ಹೆಚ್ಚುತ್ತಿದೆ. ಎಲ್ಲಾ ರೀತಿಯ ಸೌಲಭ್ಯ ಸರ್ಕಾರಿ ಆಸ್ಪತ್ರೆಗಳಲ್ಲಿ ಇದ್ದರೂ ಬಡವರು ಸಾವಿರಾರು ರೂ. ಖರ್ಚುಮಾಡಿ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಹೆರಿಗೆ  ಮಾಡಿಸಿಕೊಳ್ಳಬೇಕು ಎಂದರೆ ತಾಲೂಕುಗಳಲ್ಲಿ ಸರ್ಕಾರಿ ಆಸ್ಪತ್ರೆಗಳು ಏಕೆ ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು. ತಾಯಿ ಮತ್ತು ಶಿಶು ಮರಣ ಪ್ರಮಾಣ ತಗ್ಗಿಸಲು ಕ್ರಮವಹಿಸ ಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.  ಮಾಧುಸ್ವಾಮಿ ಡಿಎಚ್‌ಒಗೆ ಖಡಕ್‌ ಎಚ್ಚರಿಕೆ ನೀಡಿದರು.

Advertisement

ಇಲ್ಲಿಯ ಜಿಪಂ ಸಭಾಂಗಣದಲ್ಲಿ ಶನಿವಾರ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ತಾಲೂಕು ಆಸ್ಪತ್ರೆಗಳಲ್ಲಿ ಗರ್ಭಿಣಿಯರ ಆರೈಕೆಯನ್ನು 8 ತಿಂಗಳ ಕಾಲ ನೀವು ಮಾಡಿ ಹೆರಿಗೆಯನ್ನು ನಮ್ಮಿಂದ ಆಗುವುದಿಲ್ಲವೆಂದು ಹೇಳಿ ಬೇರೆ ಕಡೆ ಕಳುಹಿಸಿದರೆ ಹೇಗೆ ಎಂದು ಪ್ರಶ್ನಿಸಿದ ಸಚಿವರು, 2,490 ಗರ್ಭಿಣಿಯರು ಚಿಕ್ಕನಾಯಕನ ಹಳ್ಳಿ ಆಸ್ಪತ್ರೆಯಲ್ಲಿ ನೋಂದಣಿ ಮಾಡಿಸಿದ್ದಾರೆ. ಆದರೆ ಹೆರಿಗೆ  ಆಗಿರುವ ಸಂಖ್ಯೆ 563 ಅದರಲ್ಲಿ 29 ಶಿಶು ಮರಣ ಆಗಿದೆ ಈ ರೀತಿ ಆದರೆ ಹೇಗೆ ಎಂದು ಪ್ರಶ್ನಿಸಿದರು.

ಮುಂಜಾಗ್ರತಾ ಕ್ರಮವಹಿಸಬೇಕು: ತಾಯಿ ಮತ್ತು ಶಿಶುವಿನ ಮರಣ ಪ್ರಮಾಣವನ್ನು ಆರೋಗ್ಯ ಇಲಾಖೆ ತಗ್ಗಿಸುವುದರ ಜೊತೆಗೆ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮವಹಿಸಬೇಕು. ಗರ್ಭಿಣಿ ಮಹಿಳೆಯರಲ್ಲಿ  ಕನಿಷ್ಠ ಶೇ.60ರಷ್ಟಾದರೂ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಆಗುವಂತೆ ನೋಡಿಕೊಳ್ಳಬೇಕೆಂದು ಸಚಿವ ಮಾಧುಸ್ವಾಮಿ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ತಾಕೀತು ಮಾಡಿದರು.

ರಸಗೊಬ್ಬರ ಕೊರತೆ ಇಲ್ಲ: ಕೃಷಿ ಇಲಾಖೆಯ ಮಾಹಿತಿ ಪಡೆದ ಸಚಿವರು ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಈವರೆಗೆ 120 ಮಿ.ಮೀ. ವಾಡಿಕೆ ಮಳೆ ಯಾಗಬೇಕಾಗಿದ್ದು, 108 ಮಿ.ಮೀ. ಮಳೆ ಯಾಗಿರುತ್ತದೆ. ಉದ್ದು, ಹೆಸರು ಮತ್ತು  ಅಲಸಂದೆ ಬೆಳೆ ಸುಮಾರು 10,472 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಆಗಿದೆ. ಬಿತ್ತನೆ ಬೀಜದ ಮತ್ತು ರಸಗೊಬ್ಬರದ ಕೊರತೆ ಜಿಲ್ಲೆಯಲ್ಲಿ ಇಲ್ಲವೆಂದು ಜಂಟಿ ಕೃಷಿ ನಿರ್ದೇಶಕಿ ರಾಜಸುಲೋಚನಾ ಸಭೆಗೆ ಮಾಹಿತಿ ನೀಡಿದರು.

ಚಿಕಿತ್ಸೆಗೆ ಕ್ರಮವಹಿಸಿ: ಜಿಲ್ಲಾ ಆಸ್ಪತ್ರೆಯಲ್ಲಿ ನೂತನವಾಗಿ ಮಾಡಿರುವ 200 ಬೆಡ್‌ ಕೋವಿಡ್‌ ಆಸ್ಪತ್ರೆಯಲ್ಲಿ ಹಾಗೂ ನೂತನ ವಾಗಿ ಮಾಡಿರುವ ಲ್ಯಾಬ್‌ನಲ್ಲಿ ವೈರಸ್‌ಗೆ ಸಂಬಂಧಿಸಿದ ರೋಗಗಳ ತಪಾಸಣೆ ಮತ್ತು ಚಿಕಿತ್ಸೆ ನಡೆಯುವಂತೆ  ಕ್ರಮ ಜರುಗಿಸಲು ತಿಳಿಸಿದರು.

Advertisement

5 ಕೋಟಿ ಅನುದಾನ: ಪ್ರತಿ ತಾಲೂಕಿನಲ್ಲಿ 20 ಬೆಡ್‌ಗಳ ಕೋವಿಡ್‌ ಆಸ್ಪತ್ರೆಗಳನ್ನು ಸಜ್ಜು ಮಾಡಲಾಗಿದ್ದು, ಮುಂಬರುವ ದಿನಗಳಲ್ಲಿ ಕೋವಿಡ್‌ ಸೋಂಕು ಪ್ರಕರಣಗಳು ಹೆಚ್ಚಾದರೆ ತಾಲೂಕು ಮಟ್ಟದಲ್ಲಿಯೂ ಸಹ ಕ್ವಾರಂಟೈನ್‌ನಲ್ಲಿಡುವ ವ್ಯವಸ್ಥೆ ಮಾಡಿಕೊಳ್ಳ  ಲಾಗಿದೆ. ಇದಕ್ಕಾಗಿ ಜಿಲ್ಲೆಗೆ ಹೆಚ್ಚುವರಿಯಾಗಿ ಸರ್ಕಾರ 5 ಕೋಟಿ ರೂ. ಅನುದಾನ ಮಂಜೂರು ಮಾಡಿದ್ದು, ಬೇರೆ ರಾಜ್ಯಗಳಿಂದ ಜಿಲ್ಲೆಗೆ ಬರುವ ಎಲ್ಲರನ್ನೂ ತಪಾಸಣೆ ಗೊಳಪಡಿಸಿ  ಸೋಂಕು ಇರುವವರನ್ನು ಕ್ವಾರಂಟೈನ್‌ನಲ್ಲಿ ಇಡಲಾಗುತ್ತಿದೆ ಎಂದು ಡೀಸಿ ರಾಕೇಶ್‌ ಮಾಹಿತಿ ನೀಡಿದರು.

ಮಿಡತೆಗಳು ಬೆಳೆಗೆ ಮಾರಕವಲ್ಲ: ಜಿಲ್ಲೆಯಲ್ಲಿ ಮಿಡತೆ ಹಾವಳಿ ಬಗ್ಗೆ ವರದಿ ಬಂದಿದ್ದು, ಈಗಾಗಲೇ ವಿಜ್ಞಾನಿಗಳು ಈ ಮಿಡತೆಗಳ ಪರಿವೀಕ್ಷಣೆ ನಡೆಸಿದ್ದು, ಇವು ರೈತರ ಬೆಳೆಗಳಿಗೆ ಮಾರಕ ಅಲ್ಲವೆಂದು ವರದಿ ನೀಡಿರುವುದರಿಂದ ರೈತರು  ಆತಂಕಪಡುವ ಅವಶ್ಯಕತೆ ಇಲ್ಲ. ಕೊಂಡ್ಲಿ ಹುಳುವಿನ ಅಥವಾ ಸೈನಿಕ ಹುಳು ಬಾಧೆ ನಿಯಂತ್ರಿಸಲು ಅಧಿಕಾರಿಗಳು ಮುಂಜಾಗ್ರತಾ ಕ್ರಮ ವಹಿಸಬೇಕೆಂದು ಸಚಿವ ಜೆ.ಸಿ. ಮಾಧುಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next