Advertisement
ಯು ಮಸ್ಟ್ ಬಿ ಎ ಸೂಪರ್ ಕಿಡ್! ಇಲ್ಲವಾದಲ್ಲಿ ಬರೋಬ್ಬರಿ 26 ವರ್ಷಗಳಿಂದ ನನ್ನ ಅಪ್ಪ- ಅಮ್ಮನಿಂದ ನನಗೆ ಕಲಿಸಲಾಗದ ನಯನಾಜೂಕನ್ನು ಹೊಟ್ಟೆಗೆ ಬಂದ ಎಂಟೇ ತಿಂಗಳಲ್ಲಿ ನೀನು ಕಲಿಸಿದ್ದಾದರೂ ಹೇಗೆ? ನಂಬಿದ್ರೆ ನಂಬಿ, ಬಿಟ್ರೆ ಬಿಡಿ.. ಈ ಸಹನೆ, ಶಾಂತಿ, ಹೆಜ್ಜೆ ಮೇಲೆ ಹೆಜ್ಜೆ ಇಡುವ ಅವಸರವಿಲ್ಲದ ನಡಿಗೆ, ಯಾವುದನ್ನೂ ಬೀಳಿಸದೆ ಎತ್ತಿಡುವುದು, ತಕರಾರಿಲ್ಲದೆ ತರಕಾರಿ ತಿನ್ನುವುದು, ಜಂಕ್‌ಫುಡ್ ನೋಡಿದ್ರೆ ಮೈಲು ದೂರ ಹಾರೋದು, ಶ್ಲೋಕವನ್ನು ಕೇಳುವುದು, ಅದೂ ದೊಡ್ಡ ವಾಲ್ಯೂಮ್‌ನಲ್ಲಿ! ಹೀಗೆ ನನ್ನ ಜಾಯಮಾನದಲ್ಲೇ ಇಲ್ಲದಸದ್ಗುಣಗಳಾದಿಯಾಗಿ ಸಕಲವೂ ಕಳೆದ ಕೆಲ ತಿಂಗಳಲ್ಲಿ ನನ್ನನ್ನು ಆವರಿಸಿಕೊಂಡು ಸ್ವತಃ ನನಗೇ ಅಚ್ಚರಿ ಹಾಗೂ ಆಘಾತ ತಂದಿವೆ. ಹೊಟ್ಟೆಯೊಳಗೆ ಕುಳಿತು ನನ್ನನ್ನು ಇಷ್ಟೆಲ್ಲನಿಯಂತ್ರಿಸುವ ಸರ್ವಾಧಿಕಾರಿ ಈ ಕೂಸು,
ಹುಟ್ಟಿದ ಮೇಲೆ ನನ್ನನ್ನಿನ್ನೂ ಏನೇನು ಮಾಡಲಿದೆಯೋ ಎಂಬ ಕುತೂಹಲ ಬೆರೆತ ಅಳುಕೊಂದು ಇಣುಕಿಣುಕಿ ಅಣಕಿಸುತ್ತಿದೆ. ಅದೇನೋ, ಅಕ್ಕಿಹುಳದಷ್ಟು ದೊಡ್ಡದಾಗಿಯೂ ಇಲ್ಲದಾಗಲೇ ನಿನ್ನ ಕೈಗೆ ನನ್ನ ಜುಟ್ಟು ಸಿಕ್ಕಿಬಿಟ್ಟಿದೆ. ಇದೀಗ ಕಂದನಾಗಿ ಕೈಗಿಳಿವ ಹೊತ್ತು…
ಹಚ್ಚುತ್ತಿದ್ದ ನಾನು ಇದೀಗ ಮೊಡವೆಯ ಗೊಡವೆಗೆ ಹೋಗದೆ ಅದರ ಪಾಡಿಗೆ ಅದನ್ನು ಬಿಟ್ಟು ಬಿಟ್ಟಿದ್ದೇನೆ. ಈಗಷ್ಟೇ ಕತ್ತು ಸುತ್ತಿರುವ ಕಪ್ಪು ಕಲೆಗಳ್ಳೋ, ನಿನ್ನ ಇರುವನ್ನು ಸಾದರಪಡಿಸುತ್ತಿರುವ ಹಾರ್ಮೋನುಗಳ ಲೀಲೆ ಎಂದುಕೊಂಡು ಸುಮ್ಮನಾಗಿದ್ದೇನೆ. ಇನ್ನು ಹೊಟ್ಟೆಯಂಗಳದಿ ಹುಟ್ಟಿರುವ ಸ್ಟ್ರೆಚ್ ಮಾರ್ಕ್‌ಗಳು ನಿನ್ನ ಬೆಳವಣಿಗೆಯನ್ನು ಸಂಭ್ರಮಿಸಿ ಹಾಕಿರುವ ರಂಗೋಲಿಯಂತೆ ಕಾಣುತ್ತಿವೆ. ಗುಡುಗುಡು ಗುಜ್ಜಾರಿಯಂತೆ ಬೆಳೆವ ಹೊಟ್ಟೆಗೆ ಸಾಥ್ ನೀಡುತ್ತಾ, ದೊಣ್ಣೆ ಮೆಣಸಿನ ಕಾಯಿಯಂತಾದ ಮೂಗಿನ ಬಗ್ಗೆಯೂ ನನಗೀಗ ಚಿಂತೆ ಇಲ್ಲ.ಈ ಸಂಕಟ, ಎದೆಉರಿ, ಅಸಾಧ್ಯ ಹಸಿವು, ವಾಕರಿಕೆ, ಮೈಕೈ ನೋವು, ನಿದ್ದೆ ಬಾರದ ರಾತ್ರಿಗಳು, ಸುಖಾಸುಮ್ಮನೆ ಸತಾಯಿಸುವ ಸುಸ್ತು- ಎಲ್ಲವೂ ಸಹ್ಯದ ರೇಖೆಯೊಳಗೆ ನುಗ್ಗಿವೆ. ಅಮೂಲ್ಯವಾದುದು ಯಾವುದೂ
ಅನಾಯಾಸವಾಗಿ ಕೈ ಸೇರಲಾರದು. ಕಂದನೆಂಬೋ ಕನಸಿನ ಸಾಕಾರಕ್ಕಾಗಿ ಇಷ್ಟನ್ನೂ ಸಹಿಸದಿದ್ದರೆ ಹೇಗೆ? ನಿನ್ನ ಮುಖ ನೋಡುವ, ಎತ್ತಿ ಎದೆಗಪ್ಪುವ ಕಾತರತೆಯು ಹೆರಿಗೆ ನೋವೆಂಬ ದುಃಸ್ವಪ್ನಕ್ಕೆ ಮುಲಾಮಿನಂತೆ ಕೆಲಸ ಮಾಡುತ್ತಿದೆ. ಪುಣ್ಯ, ನೀನೇನೋ ಅಮ್ಮನ ಸ್ವಭಾವ ಬದಲಾಯಿಸಬಲ್ಲೆ. ಆದರೆ, ಅಮ್ಮನನ್ನು ಬದಲಾಯಿಸಲಾರೆ..! ಅದೆಲ್ಲಿಂದ ಈ ತಾಯ್ತನವೆಂಬ ಅಮ್ಮ ನನ್ನೊಳಗೆ ಬಂದಳ್ಳೋ? ಬಹುಶಃ ಒಂದಿದ್ದ ಹೃದಯ ಎರಡಾಗಿ ಬಡಿದುಕೊಳ್ಳಲಾರಂಭಿಸಿದಾಗಲೇ ಇರಬೇಕು. ಹೊಟ್ಟೆಯಲ್ಲಿ ಚಿಟ್ಟೆ ಓಡಾಡಿದಂತೆ ಮುಲುಕಾಡುವ ನಿನ್ನ ಮೈಮನ ನನ್ನೊಂದಿಗೆ ದೇಹಭಾಷೆಯಲ್ಲೇ ಮಾತಾಡುವ ಸುಖ- ಕೇವಲ ನಮ್ಮಿಬ್ಬರ ನಡುವೆ ಹಂಚಿಕೆಯಾಗುವ ವಿಶ್ವ ರಹಸ್ಯದಂತೆ ಆಪ್ತವೆನಿಸುತ್ತದೆ. ಬದುಕಿನುದ್ದಕ್ಕೂ ಬರುವ ಬಾಂಧವ್ಯವೊಂದು ಬಸಿರೊಳಗೇ ಬೆಸೆದು ಹೋಗಿದೆ. ಬಿಡಿಸಲಾಗದ ಬಂಧವೊಂದು ಮನದಂಗಳದಿ ಕಂದನಾಗಿ ಕದ ತಟ್ಟುತ್ತಿದೆ. ಕಂಡಿದ್ದ ಕನಸೊಂದು ನೂರೊಂದು ಕವಲೊಡೆದು ಭವಿಷ್ಯಕ್ಕೆ ಭರವಸೆ ನೀಡುತ್ತಿದೆ.
Related Articles
Advertisement
ರೇಶ್ಮಾ ರಾವ್ ಸೊನ್ಲ